ಬೆಂಗಳೂರು: ‘ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಗೋಪ್ಯವಾಗಿ ವಿಚಾರಣೆ ನಡೆಸಬೇಕು’ ಎಂದು ರಾಜ್ಯ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಮನವಿ ಮಾಡಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಮತ್ತು ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿಶೇಷ ಪ್ರಾಸಿಕ್ಯೂಟರ್ ಆದ ಹಿರಿಯ ವಕೀಲ ರವಿವರ್ಮ ಕುಮಾರ್, ‘ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಜಾಮೀನು ಅರ್ಜಿಗಳನ್ನು ಗೋಪ್ಯ ವಿಚಾರಣೆಗೆ ಒಳಪಡಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಈ ಸಂಬಂಧ ಏನಿದ್ದರೂ ಮುಖ್ಯ ನ್ಯಾಯಮೂರ್ತಿಗಳು ಆದೇಶ ಹೊರಡಿಬೇಕು. ಮುಂದಿನ ವಿಚಾರಣೆಯಲ್ಲಿ ಈ ಅಂಶವನ್ನು ಪರಿಶೀಲಿಸೋಣ’ ಎಂದು ತಿಳಿಸಿ ವಿಚಾರಣೆ ಮುಂದೂಡಿದರು. ಪ್ರಜ್ವಲ್ ಪರ ವಕೀಲ ಜಿ.ಅರುಣ್ ಇದ್ದರು.