ಭಾನುವಾರ, ಮಾರ್ಚ್ 26, 2023
24 °C
‘ರಂಗ ಚಾವಡಿ’ಯಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಂಡ ಪ್ರಕಾಶ್ ಬೆಳವಾಡಿ

ಅವಕಾಶ ನೀಡದ ಕನ್ನಡ ರಂಗಭೂಮಿ ಜಾತಿ ಪ್ರಜ್ಞೆ: ಪ್ರಕಾಶ್ ಬೆಳವಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿರುವುದು ಸಂತಸವನ್ನುಂಟು ಮಾಡಿದೆ. ಬಕೆಟ್‌ ಹಿಡಿದು ಈ ಪ್ರಶಸ್ತಿ ಪಡೆದಿದ್ದಾರೆ ಅನ್ನುವರಾರೂ ನನಗೆ ಬಕೆಟ್ ನೀಡಿಲ್ಲ. ಬಕೆಟ್‌ ಹಿಡಿಯುವ ಬಗೆಯೂ ನನಗೆ ತಿಳಿದಿಲ್ಲ...’

ಇವು ರಂಗಭೂಮಿ ಹಾಗೂ ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ಮನದಾಳದ ಮಾತುಗಳು. ಕರ್ನಾಟಕ ನಾಟಕ ಅಕಾಡೆಮಿಯು ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ರಂಗ ಚಾವಡಿ’ ಕಾರ್ಯಕ್ರಮದಲ್ಲಿ ತಮ್ಮ ಜೀವನ ಮತ್ತು ರಂಗಭೂಮಿಯ ಅನುಭವಗಳನ್ನು ಅವರು ಹಂಚಿಕೊಂಡರು.

‘70ರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ಜಾತಿ ಪ್ರಜ್ಞೆ ಮನೆಮಾಡಿತ್ತು. ಇದರಿಂದಾಗಿ ಕನ್ನಡ ರಂಗಭೂಮಿಯವರು ನನ್ನನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಪ್ರಸನ್ನ ಅವರಿಂದ ಪ್ರೇರಣೆ ಪಡೆದಿದ್ದೆ. ಆದರೆ, ಅವರೂ ಅವಕಾಶ ನೀಡಲಿಲ್ಲ. ಯಾವುದೇ ತಂಡದವರೂ ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಆ ವೇಳೆ ರಾಜಾರಾಮ್ ಅವರ ‘ಮುಖ್ಯಮಂತ್ರಿ’ ನಾಟಕದಲ್ಲಿ ಅವಕಾಶ ಸಿಕ್ಕಿತು. ಅಷ್ಟಾಗಿಯೂ ಇಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ, ಇಂಗ್ಲಿಷ್ ರಂಗಭೂಮಿಗೆ ಹೋದೆ’ ಎಂದು ತಿಳಿಸಿದರು.

‘ಇಂಗ್ಲಿಷ್ ಚೆನ್ನಾಗಿ ಬರುತ್ತಿದ್ದುದರಿಂದ ಅಲ್ಲಿ ಬೇಗ ಬೆಳೆದೆ. ಜಾತಿಯ ಪ್ರಶ್ನೆಯೇ ಅಲ್ಲಿ ಬರುತ್ತಿರಲಿಲ್ಲ. ಅಲ್ಲಿ ಬೆಳಕಿನ ವಿನ್ಯಾಸ ಮಾಡುತ್ತಿದ್ದೆ. ಕೆಲವೇ ವರ್ಷಗಳಲ್ಲಿ ನಿರ್ದೇಶನದತ್ತ ಹೊರಳಿ, ಯಶಸ್ಸು ಸಾಧಿಸಿದೆ. ಮುಂದೆ ಕಿರುತೆರೆ, ಚಲನಚಿತ್ರ ಕ್ಷೇತ್ರಗಳಿಗೂ ಕಾಲಿಟ್ಟೆ. ‘ಗರ್ವ’ ಧಾರಾವಾಹಿಯ ಬಳಿಕ ಇಂಗ್ಲಿಷ್‌ ಚಲನಚಿತ್ರ ‘ಸ್ಟಂಬಲ್’ ಅನ್ನು ನಿರ್ಮಿಸಿ, ನಿರ್ದೇಶಿಸಿದೆ. ಆಗ ಸಿನಿಮಾಕ್ಕಾಗಿ ಮಾಡಿದ ಸಾಲಕ್ಕೆ ಕಾರು, ಮನೆಯನ್ನೂ ಮಾರಿಕೊಳ್ಳಬೇಕಾಯಿತು. ಆಗ ಮಾಡಿದ್ದ ಸಾಲ ಈಗಲೂ ತೀರಿಲ್ಲ’ ಎಂದರು.

ತಾಯಿಯ ಆಸೆ ಬೇರೆಯಿತ್ತು: ‘ಬಾಲ್ಯದಲ್ಲಿ ಚೆನ್ನಾಗಿ ಓದಬೇಕು ಎಂಬ ಒತ್ತಡವನ್ನು ತಾಯಿಯ ಕಡೆಯಿಂದ ಎದುರಿಸಬೇಕಾಯಿತು. ಎಂಜಿನಿಯರಿಂಗ್‌ ಓದಿಸಿದ ಅವರಿಗೆ, ನಾನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಬೇಕೆಂಬ ಕನಸಿತ್ತು. ಎಂಜಿನಿಯರಿಂಗ್‌ನಲ್ಲಿ ಉತ್ತಮ ಅಂಕ ಪಡೆದರೂ ಪತ್ರಿಕೋದ್ಯಮದ ಕಡೆ ಆಕರ್ಷಿತನಾಗಿ, ಕೆಲವು ವರ್ಷಗಳು ಆ ಕ್ಷೇತ್ರದಲ್ಲಿ ಕೆಲಸ ಮಾಡಿದೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ತಂದೆ–ತಾಯಿ ಇಬ್ಬರೂ ರಂಗಭೂಮಿಗೆ ಸೇವೆ ಸಲ್ಲಿಸಿದ್ದಾರೆ. ಅವರು ಮಾಡುವ ನಾಟಕಗಳಿಗೆ ನಾನು ಮೇಕಪ್ ಕಿಟ್ ತೆಗೆದುಕೊಂಡು ಹೋಗಬೇಕಾಗಿತ್ತು. ಅಪ್ಪನ ಮೇಲಿನ ಸಿಟ್ಟಿಗೆ ತಡವಾಗಿಯೇ ಮೇಕಪ್ ಕಿಟ್ ಹಿಡಿದುಕೊಂಡು ಹೋಗುತ್ತಿದ್ದೆ’ ಎಂದು ಬಾಲ್ಯವನ್ನು ಮೆಲುಕು ಹಾಕಿದರು.

ರಂಗ ನಿರ್ದೇಶಕ ಅಭಿರುಚಿ ಚಂದ್ರು ಅವರು ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಅಧ್ಯಕ್ಷ ಪ್ರೊ.ಆರ್. ಭೀಮಸೇನ ಇದ್ದರು.

‘ಕೋವಿಡ್ ಸೇವೆಗೆ ಸಂಭಾವನೆ’

‘ರಂಗಭೂಮಿಯಲ್ಲಿ ಸಿಗುವ ಗೌರವ ಹಾಗೂ ಆತ್ಮವಿಶ್ವಾಸ ಎಲ್ಲಿಯೂ ಸಿಗುವುದಿಲ್ಲ. ‘ಪರ್ವ’ ನಾಟಕ ನಿರ್ದೇಶನಕ್ಕೆ ನೀಡಿದ ಸಂಭಾವನೆ ₹ 1.5 ಲಕ್ಷವನ್ನು ರೊಟರಿ ಸಂಸ್ಥೆ ಮೂಲಕ ಕೋವಿಡ್ ಸೇವೆಗೆ ನೀಡಿದ್ದೇನೆ. ರಂಗಭೂಮಿಯಿಂದ ಬಂದ ಎಲ್ಲ ಸಂಭಾವನೆಯನ್ನೂ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದೇನೆ’ ಎಂದು ಪ್ರಕಾಶ್ ಬೆಳವಾಡಿ ತಿಳಿಸಿದರು.

‘ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಅನಿರೀಕ್ಷಿತವಾಗಿ ಬಂದ ಅವಕಾಶವೊಂದರಿಂದ ನಟನಾ ಕ್ಷೇತ್ರಕ್ಕೆ ಬರಬೇಕಾಯಿತು. ಮೊದಲೆಲ್ಲಾ ಸಿನಿಮಾಕ್ಕೆ ಹಣವನ್ನು ಕೇಳುತ್ತಾ ಇರಲಿಲ್ಲ. ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳುತ್ತಿದೆ. 10 ವರ್ಷಗಳಲ್ಲಿ ಬದುಕು ಸುಧಾರಣೆ ಆಗಿದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು