ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಗೆಲುವಿನ ಖುಷಿಯಲ್ಲಿ ತೇಲಿದ ಬೆಂಗಳೂರಿನ ತಂದೆ–ತಾಯಿ

ಅಮೆರಿಕದ ಸೆನೆಟ್‌ಗೆ ಭಾರತೀಯ ಮೂಲದ ಪ್ರಮೀಳಾ ಜಯಪಾಲ್‌ ಮರು ಆಯ್ಕೆ * ಬೆಂಗಳೂರಿನಲ್ಲಿ ಸಡಗರ
Last Updated 5 ನವೆಂಬರ್ 2020, 15:14 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಮೂಲತಃ ಭಾರತೀಯರಾದ ಪ್ರಮೀಳಾ ಜಯಪಾಲ್‌ ಅವರು ವಾಷಿಂಗ್ಟನ್‌ ರಾಜ್ಯದಿಂದ ಅಮೆರಿಕದ ಸೆನೆಟ್‌ಗೆ ಭಾರಿ ಬಹುಮತದಿಂದ ಮರು ಆಯ್ಕೆಯಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ನೆಲೆಸಿರುವ ಆಕೆಯ ತಂದೆ– ತಾಯಿ ಖುಷಿಯಲ್ಲಿ ತೇಲಿದರು.

ಡೆಮಾಕ್ರಟಿಕ್‌ ಪಕ್ಷದ ಪ್ರಮೀಳಾ ಅವರು ವಾಷಿಂಗ್ಟನ್‌ ರಾಜ್ಯದಲ್ಲಿ ರಿಪಬ್ಲಿಕನ್‌ ಪಕ್ಷದ ಕ್ರೆಗ್‌ ಕೆಲ್ಲರ್‌ ವಿರುದ್ಧ ಜಯಗಳಿಸಿದ್ದಾರೆ. ಪ್ರಮೀಳಾ ಅವರಿಗೆ ಶೇ84ರಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅವರು 2016 ಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ ಜಯಗಳಿಸಿದ್ದರು. ಇದಕ್ಕೂ ಮುನ್ನ ವಾಷಿಂಗ್ಟನ್‌ ರಾಜ್ಯದ ಸೆನೆಟ್‌ (2014–16) ಸದಸ್ಯೆಯಾಗಿದ್ದರು.

ಪ್ರಮೀಳಾ ಅವರು ಎಂ.ಪಿ. ಜಯಪಾಲ್‌ ಹಾಗೂ ಲೇಖಕಿ ಮಾಯಾ ಜಯಪಾಲ್‌ ದಂಪತಿಯ ಕಿರಿಯ ಮಗಳು.ಬೆಂಗಳೂರಿನ ಲ್ಯಾಂಗ್‌ಫರ್ಡ್‌ ಟೌನ್‌ನಲ್ಲಿ ನೆಲೆಸಿರುವ ಮಾಯಾ ಅವರು ಮಗಳ ಗೆಲುವು ಹಾಗೂ ಅಮೆರಿಕದ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಮುನ್ನಡೆಯ ಸಡಗರವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಮಗಳು ಕಠಿಣ ಪರಿಶ್ರಮಿ. ಆಕೆ ಅಮೆರಿಕದ ಜನರ ಮನಗೆಲ್ಲುತ್ತಿರುವ ಪರಿ ಖುಷಿ ಕೊಡುತ್ತಿದೆ. ಅವಳ ಗೆಲುವು ನಿರೀಕ್ಷಿತ. ಆದರೆ ಇಷ್ಟೊಂದು ಅಂತರದಿಂದ ಜಯಗಳಿಸುವಳು ಎಂದು ಊಹಿಸಿರಲಿಲ್ಲ. ಡೆಮಾಕ್ರಟಿಕ್‌ ಪಕ್ಷವೂ ಮುನ್ನವೇ ಗಳಿಸಿದ್ದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ’ ಎಂದು ಮಾಯಾ ತಿಳಿಸಿದರು.

ಮಗ ಜನಕ್‌ ಪ್ರಿಸ್ಟೀನ್‌ ಹಾಗೂ ಪತಿ ಸ್ಟೀವ್‌ ವಿಲಿಯಮ್ಸನ್‌ ಜೊತೆ ಪ್ರಮೀಳಾ ಜಯಪಾಲ್‌

ವಲಸಿಗರ ನೋವಿಗೆ ಮಿಡಿದ ಹೃದಯ: ‘ಉನ್ನತ ವಿದ್ಯಾಭ್ಯಾಸಕ್ಕಾಗಿ 16ನೇ ವರ್ಷಕ್ಕೇ ಅಮೆರಿಕಕ್ಕೆ ತೆರಳಿದ ಮಗಳು ಬಳಿಕ ಅಲ್ಲೇ ನೆಲೆಸಿದ್ದಾಳೆ. ಕಲಿಕೆಯಲ್ಲಿ ಮುಂದಿದ್ದ ಅವಳಿಗೆ ರಾಜಕೀಯ ಮಹತ್ವಾಕಾಂಕ್ಷೆಯೇನೂ ಇರಲಿಲ್ಲ. ಆದರೆ ಜನರ ಕಷ್ಟಗಳಿಗೆ ಆಕೆಯ ಮನ ಮಿಡಿಯುತ್ತಿತ್ತು. ಜನರ ಒತ್ತಾಯದಿಂದಾಗಿಯೇ ರಾಜಕೀಯ ಪ್ರವೇಶಿಸಿದಳು. 2001ರ ಸೆ.11ರರಂದು ನಡೆದ ಅವಳಿ ಗೋಪುರ ಧ್ವಂಸ ಘಟನೆಯ ಬಳಿಕ ಅಮೆರಿಕದ ಜನ ಮುಸ್ಲಿಮರ ವಿರುದ್ಧ, ದಕ್ಷಿಣ ಏಷ್ಯಾದ ವಲಸಿಗರ ವಿರುದ್ಧ ದ್ವೇಷ ಕಾರಲು ಶುರುಮಾಡಿದರು. ಆಗ ವಲಸಿಗರ ಹಕ್ಕುಗಳ ರಕ್ಷಣೆಯ ಹೋರಾಟಕ್ಕೆ ಮಗಳು ಧುಮುಕಿದಳು’ ಎಂದರು.

ಪ್ರಮೀಳಾ ಅವರು ವಲಸಿಗರ ಹಕ್ಕುಗಳ ರಕ್ಷಣೆಗಾಗಿ 2001 ಹೇಟ್‌ ಫ್ರೀ ಝೋನ್‌’ ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದರು. ಅದೀಗ ‘ಒನ್‌ ಅಮೆರಿಕ’ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಪ್ರಮೀಳಾ ಇದರ ಕಾರ್ಯಕಾರಿ ನಿರ್ದೇಶಕಿಯಾಗಿ 11 ವರ್ಷ ಕೆಲಸ ಮಾಡಿದ್ದಾರೆ.

‘ಪ್ರಮೀಳಾ ಹುಟ್ಟಿದ್ದು ಚೆನ್ನೈನಲ್ಲಿ (1965 ಸೆಪ್ಟೆಂಬರ್‌). ಆ ಬಳಿಕ ನಾವು ಕೆಲ ಸಮಯ ಮುಂಬೈನಲ್ಲಿ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದೆವು. ಇಂಡೋನೇಷ್ಯಾದ ಜಕಾರ್ತಾ ಹಾಗೂ ಸಿಂಗಪುರದಲ್ಲಿ ಕೆಲವು ವರ್ಷಗಳನ್ನು ಕಳೆದೆವು. ಮಗಳ ಪ್ರಾಥಮಿಕ ವಿದ್ಯಾಭ್ಯಾಸ ಚೆನ್ನೈ ಮತ್ತು ಮುಂಬೈನಲ್ಲಿ, ನಂತರ ಜಕಾರ್ತಾ ಹಾಗೂ ಸಿಂಗಪುರದಲ್ಲಿ ನಡೆಯಿತು. ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿಇಂಗ್ಲಿಷ್‌ ಸಾಹಿತ್ಯ, ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ 1990ರಲ್ಲಿ ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಳು’ ಎಂದು ಮಾಯಾ ಮೆಲುಕು ಹಾಕಿದರು.

‘ಮಗಳು ಎರಡು ವರ್ಷಕ್ಕೊಮ್ಮೆ ಬಂದು ನಮ್ಮನ್ನು ನೋಡಿಕೊಂಡು ಹೋಗುತ್ತಾಳೆ. ಅವಳ ಜೊತೆ ನಿತ್ಯವೂ ದೂರವಾಣಿಯಲ್ಲಿ ಮಾತನಾಡುತ್ತೇನೆ. ಬುಧವಾರವೂ ಕರೆ ಮಾಡಿದ್ದಳು. ಎರಡು ವರ್ಷಗಳ ಹಿಂದೆ ನನಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದ್ದಾಗ ಪ್ರಮೀಳಾ ತನ್ನ ಪುತ್ರ ಜನಕ್‌ ಪ್ರಿಸ್ಟೀನ್‌ ಜೊತೆ ಬಂದು ಎರಡು ವಾರ ನನ್ನ ಆರೈಕೆ ಮಾಡಿದ್ದಳು. ಆಕೆಯ ಪತಿ ಸ್ಟೀವ್ ವಿಲಿಯಮ್ಸನ್‌ ಕಾರ್ಮಿಕ ಸಂಘಟನೆಗಳಲ್ಲಿ ಕೆಲಸ ಮಾಡುತ್ತಾರೆ. ಮೊಮ್ಮಕ್ಕಳ ಜೊತೆ ಕಾಲ ಕಳೆಯಲು ನಾವೂ ಎರಡು ವರ್ಷಕ್ಕೊಮ್ಮೆ ಅಮೆರಿಕಕ್ಕೆ ಹೋಗುತ್ತೇವೆ’ ಎಂದರು.

ಮಾಯಾ ಜಯಪಾಲ್‌

‘ನನಗೆ ಆರು ಪುತ್ರಿಯರು ಇರಬೇಕಿತ್ತು’

ಮಾಯಾ ಜಯಪಾಲ್‌ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅವರ ಹಿರಿಯ ಮಗಳು ಸುಶೀಲಾ ಕೂಡಾ ಅಮೆರಿಕದ ಪೋರ್ಟ್‌ಲ್ಯಾಂಡ್‌ ಆರಿಗಾನ್‌ನಲ್ಲಿ ಕೌಂಟಿ ಕಮಿಷನರ್‌ ಆಗಿದ್ದಾರೆ.

‘ನನ್ನ ಇಬ್ಬರು ಹೆಣ್ಣು ಮಕ್ಕಳ ಸಾಧನೆ ನೋಡುವಾಗ ನನಗೆ ಆರು ಮಂದಿ ಪುತ್ರಿಯರು ಇರಬೇಕೆನಿಸುತ್ತದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮಾಯಾ.

ಮಾಯಾ ಜಯಪಾಲ್‌ ಅವರು ನಗರದ ಮೌಂಟ್‌ಕಾರ್ಮೆಲ್ ಶಾಲೆಯ ಹಳೆ ವಿದ್ಯಾರ್ಥಿ. ಅವರು ‘ಓಲ್ಡ್‌ ಜಕಾರ್ತ’, ‘ಓಲ್ಡ್‌ ಸಿಂಗಪುರ್’, ‘ಬ್ಯಾಂಗಲೂರ್‌– ದಿ ಸ್ಟೋರಿ ಆಫ್‌ ಸಿಟಿ’ ಹಾಗೂ ‘ಬ್ಯಾಂಗಲೋರ್‌- ರೂಟ್ಸ್‌ ಆ್ಯಂಡ್‌ ಬಿಯಾಂಡ್‌’ ಕೃತಿಗಳ ಲೇಖಕಿ.

‘ನಾನು ಹುಟ್ಟಿದ್ದು ಕೇರಳದಲ್ಲಿ. ನನ್ನ ತಂದೆ ಬಾಲಕೃಷ್ಣ ಮೆನನ್‌ ತಮಿಳುನಾಡಿಲ್ಲಿ ಡಿಜಿಪಿ ಆಗಿದ್ದರು. ನಾನು ಇಲ್ಲಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಓದಿದವಳು. ಆಗಿನಿಂದಲೂ ನನಗೆ ಬೆಂಗಳೂರಿನ ಮೇಲೆ ವ್ಯಾಮೋಹ. ಪತಿ ನಿವೃತ್ತಿರಾದ ಬಳಿಕವ ನಾವಿಬ್ಬರೂ 1993 ಇಲ್ಲೇ ನೆಲೆಸಿದ್ದೇವೆ’ ಎಂದು ಮಾಯಾ (80) ತಿಳಿಸಿದರು.

ಭಾರತದ ಮೇಲೆ ಬಲು ಪ್ರೀತಿ

‘ಅಮೆರಿಕದಲ್ಲೇ ನೆಲೆಸಿದ್ದಳೂ ಭಾರತದ ಬಗ್ಗೆ ಪ್ರಮೀಳಾಗೆ ಬಲು ಪ್ರೀತಿ. ಎರಡು ವರ್ಷಗಳ ಕಾಲ ಆಕೆ ಇಡೀ ಭಾರತವನ್ನು ಸುತ್ತಿದ್ದಾಳೆ. ‘ಪಿಲಿಗ್ರಿಮೇಜ್‌ ಟು ಇಂಡಿಯಾ: ಎ ವುಮೆನ್‌ ರಿವಿಸಿಟ್ಸ್‌ ಹರ್‌ ಹೋಮ್‌ ಲ್ಯಾಂಡ್‌’ ಕೃತಿಯನ್ನು ರಚಿಸಿದ್ದಾಳೆ. ಅವಳಿಗೆ ದಕ್ಷಿಣ ಭಾರತದ ಆಹಾರಳೆಂದರೆ ಅಚ್ಚುಮೆಚ್ಚು. ದೋಸೆ, ಆಪಂ ಎಂದರೆ ತುಂಭಾ ಇಷ್ಟ’ ಎನ್ನುತ್ತಾರೆ ಮಾಯಾ.

ಪ್ರಮೀಳಾ ಅವರ ‘ಯೂಸ್‌ ದ ಪವರ್‌ ಯು ಹ್ಯಾವ್‌– ಎ ಬ್ರೌನ್‌ ವುಮನ್ಸ್‌ ಗೈಡ್‌ ಟು ಪೊಲಿಟಿಕ್ಸ್‌ ಆ್ಯಂಡ್ ಪೊಲಿಟಿಕಲ್‌ ಚೇಂಜ್‌’ ಕೃತಿ 2020ರ ಜೂನ್‌ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಅವರ ಹೋರಾಟದ ಬದುಕಿನ ಚಿತ್ರಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT