ಗುರುವಾರ , ಅಕ್ಟೋಬರ್ 29, 2020
26 °C
ಬಡಾವಣೆಗೆ ಎರಡೂ ಕಡೆಯಿಂದ ಸುತ್ತುವರಿದ ರಾಜಕಾಲುವೆಗಳಿಗೆ ತಡೆಗೋಡೆಯೇ ಇಲ್ಲ

ಪ್ರಮೋದ್ ಲೇಔಟ್ ನಿದ್ದೆಗೆಡಿಸಿದ ರಾಜಕಾಲುವೆ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರವನ್ನೇ ಜಲಾವೃತಗೊಳಿಸಿದ್ದ ಮಳೆ ಸುರಿದು 11 ದಿನಗಳು ಕಳೆದಿವೆ. ಆದರೆ, ಅದರ ಭಯದಿಂದ ನಾಯಂಡ‌ಹಳ್ಳಿಯ ಪ್ರಮೋದ್ ಲೇಔಟ್ ನಿವಾಸಿಗಳು ಇನ್ನೂ ಹೊರ ಬಂದಿಲ್ಲ. ತಡೆಗೋಡೆಯೇ ಇಲ್ಲದ ವೃಷಭಾವತಿ ರಾಜಕಾಲುವೆ ಇಲ್ಲಿನ ಜನರ ನಿದ್ದೆಗೆಡಿಸಿದೆ. 

ಮೈಸೂರು ರಸ್ತೆ ಮತ್ತು ನೈಸ್‌ ರಸ್ತೆ ನಡುವೆ ಪ್ರಮೋದ್ ಲೇಔಟ್ ಇದೆ. ಈ ಬಡಾವಣೆಯ ಎರಡೂ ಬದಿಯಲ್ಲಿ ರಾಜಕಾಲುವೆಗಳಿವೆ. ವಿಜಯನಗರ ಕಡೆಯಿಂದ ಬರುವ ವೃಷಭಾವತಿ ರಾಜಕಾಲುವೆಗೆ ಪದ್ಮನಾಭನಗರ ಮತ್ತು ಪಿಇಎಸ್‌ ಕಾಲೇಜು ಕಡೆಯಿಂದ ಬರುವ ರಾಜಕಾಲುವೆಯೂ ಸೇರಿಕೊಳ್ಳುತ್ತದೆ. ಈ ಎರಡೂ ಕಾಲುವೆಗಳಿಗೂ ತಡೆಗೋಡೆಗಳಿಲ್ಲ. ಜೊತೆಗೆ ಹೂಳು ಕೂಡ ತುಂಬಿಕೊಂಡಿದೆ.

ಸೆ.8ರಂದು ಸುರಿದ ಮಳೆಗೆ ಎರಡೂ ಕಡೆಯಿಂದ ಧುಮ್ಮಿಕ್ಕಿ ಬಂದ ನೀರು ಕಾಲುವೆ ಸಂಧಿಸುವ ಜಾಗದಲ್ಲಿ ಸರಾಗವಾಗಿ ಹರಿದು ಹೋಗಲಿಲ್ಲ. ಪರಿಣಾಮವಾಗಿ ಪ್ರಮೋದ್ ಲೇಔಟ್ ಕಡೆಗೆ ನೀರು ನುಗ್ಗಿತು. ಕಾಲುವೆ ಪಕ್ಕದಲ್ಲೇ ಖಾಲಿ ನಿವೇಶನ ಇರುವ ಕೆಲವರು ಕಟ್ಟಿಕೊಂಡಿದ್ದ ಕಾಂಪೌಂಡ್‌ಗಳು ಉದುರಿ ಹೋದವು.

ರಸ್ತೆಗಳು, ಮನೆಗಳಿಗೆ ಪ್ರವಾಹದಂತೆ ನೀರು ನುಗ್ಗಿತು. ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದವು. ಮನೆಯೊಳಗಿದ್ದ ಹಾಸಿಗೆ, ಹೊದಿಕೆ, ಪೀಠೋಪಕರಣ, ಪುಸ್ತಕ ಮತ್ತು ಬಟ್ಟೆಗಳೆಲ್ಲ ಒದ್ದೆಯಾದವು. ಅವುಗಳನ್ನು ನಿವಾಸಿಗಳು ಇನ್ನೂ ಒಣಗಿಸುತ್ತಿದ್ದಾರೆ. 

ಮನೆಖಾಲಿ: ‘ರಾಜಕಾಲುವೆ ಸಮೀಪದಲ್ಲೇ ಮನೆ ಇರುವ ಕಾರಣ ಮತ್ತೆ ನೀರು ನುಗ್ಗುವ ಭಯದಲ್ಲಿ ಕೆಲವರು ನೆಲಮಹಡಿಯಲ್ಲಿನ ಮನೆ ಖಾಲಿ ಮಾಡಿದ್ದಾರೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರುಪಾಲಾಗಿವೆ. ಅಡುಗೆ ಮಾಡುವುದೆಲ್ಲಿ, ಮಲಗುವುದೆಲ್ಲಿ ಎಂಬುದೇ ಗೊತ್ತಾಗದೆ ಮನೆಯನ್ನೇ ತೊರೆದಿದ್ದೇವೆ’ ಎಂದು ಜಾನ್ಹವಿ ಹೇಳಿದರು.

‘ಮನೆ ಕಟ್ಟಿ 13 ವರ್ಷಗಳಾಗಿವೆ. ಇದೇ ಮೊದಲ ಬಾರಿಗೆ ಈ ರೀತಿ ಅವಾಂತರವಾಗಿದೆ. ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಇದ್ದಿದ್ದರೆ ನಮಗೆ ತೊಂದರೆ ಆಗುತ್ತಿರಲಿಲ್ಲ. ರಾಜಕಾಲುವೆ ಕಡೆಗೆ ಹರಿಯಬೇಕಿದ್ದ ಉಪಕಾಲುವೆಗಳು ಹಿಮ್ಮುಖವಾಗಿ ಹರಿದವು. ಮನೆಗಳನ್ನೆಲ್ಲಾ ಆವರಿಸಿದವು’ ಎಂದು ವಿವರಿಸಿದರು.

‘ಸದ್ಯಕ್ಕೆ ರಾಜಕಾಲುವೆಯಲ್ಲಿದ್ದ ಮಣ್ಣನ್ನು ತೆಗೆದು ಎರಡೂ ಕಡೆಗೆ ಹಾಕಲಾಗಿದೆ. ಇದರಿಂದ ಸಮಸ್ಯೆ ಇತ್ಯರ್ಥ ಆಗುವುದಿಲ್ಲ. ಮತ್ತೆ ಜೋರು ಮಳೆ ಬಂದರೆ ತೊಂದರೆ ಆಗುವುದು ಗ್ಯಾರಂಟಿ. ರಾಜಕಾಲುವೆ ಹೂಳು ತೆಗೆದು ತಡೆಗೋಡೆ ನಿರ್ಮಿಸಬೇಕು’ ಎಂದು ನಿವಾಸಿ ಗೀತಾ ಒತ್ತಾಯಿಸಿದರು.

ಪ್ರಮೋದ್ ಲೇಔಟ್‌ನ ಈ ಸಮಸ್ಯೆ ಬಗ್ಗೆ ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್. ಪ್ರಹ್ಲಾದ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. 

ಬದುಕೇ ಬೀದಿಗೆ ಬಿತ್ತು

‘ಕ್ಯಾಬ್ ಓಡಿಸಿಕೊಂಡು ಬಾಡಿಗೆ ಮನೆ ಪಡೆದು ಜೀವನ ಮಾಡುತ್ತಿದ್ದೆ. ರಾಜಕಾಲುವೆ ನೀರು ಬದುಕೇ  ಕೊಚ್ಚಿಕೊಂಡು ಹೋಗುವಂತೆ ಮಾಡಿದೆ’ ಎಂದು ಚಾಲಕ ಪ್ರದೀಪ್ ನೊಂದುಕೊಂಡರು.

‘ಮನೆ ಮುಂದೆ ನಿಲ್ಲಿಸಿದ್ದ ಕಾರು ಮಳೆ ನೀರಿನಲ್ಲಿ ಸಂಪೂರ್ಣ ಹಾಳಾಗಿದೆ. ದುರಸ್ತಿ ಮಾಡಿಸಲು ಕನಿಷ್ಠ ₹50 ಸಾವಿರ ಬೇಕಾಗುತ್ತದೆ. ಹಣ ಇಲ್ಲದ ಕಾರಣ ರಿಪೇರಿ ಮಾಡಿಸಿಲ್ಲ. ಅಂದಿನಿಂದ ಬಿಡಿಗಾಸನ್ನೂ ದುಡಿದಿಲ್ಲ. ಹೊಟ್ಟೆ ಪಾಡಿಗೂ ತೊಂದರೆಯಾಗಿದೆ. ಮಳೆ ಹಾನಿ ಪರಿಹಾರಕ್ಕೆ ಅರ್ಜಿ ಹಾಕಿದರೆ ₹2 ಸಾವಿರಕ್ಕಿಂತ ಹೆಚ್ಚು ಪರಿಹಾರ ಸಿಗುವುದಿಲ್ಲ. ಏನು ಮಾಡಬೇಕೋ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒತ್ತುವರಿ ತೆರವಾಗಬೇಕು’

ವೃಷಭಾವತಿ ರಾಜಕಾಲುವೆಯ ಮತ್ತೊಂದು ಬದಿಯಲ್ಲಿ ಸಣ್ಣ ಕಾರ್ಖಾನೆಗಳಿವೆ. ಕೆಲವರು ರಾಜಕಾಲುವೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಪ್ರಮೋದಾ ಬಡಾವಣೆಯ ನಿವಾಸಿಗಳು ದೂರುತ್ತಾರೆ.

‘ರಾಜಕಾಲುವೆಗೆ ಕೆಲವರು ಕಸ ತಂದು ಸುರಿಯುತ್ತಾರೆ. ಒಂದೆಡೆ ಒತ್ತುವರಿ, ಮತ್ತೊಂದೆಡೆ ಕಸ ಸುರಿಯುವ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಇವೆರಡನ್ನೇ ತಪ್ಪಿಸಿದರೆ ಸಮಸ್ಯೆ ಪರಿಹಾರವಾಗಲಿದೆ’ ಎಂದು ಪ್ರಮೋದ್ ಲೇಔಟ್ ನಿವಾಸಿ ಶಂಕರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು