ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ದಾಖಲೆ ಸಲ್ಲಿಕೆಗೆ ಆದೇಶ

Published 26 ಜುಲೈ 2023, 16:31 IST
Last Updated 26 ಜುಲೈ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಬಗೆಗಿನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಹಾಗೂ ಎನ್‌ಐಎ ಕಚೇರಿಯಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‌ಗೆ ಸಲ್ಲಿಸುವಂತೆ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್‌ ಜಬೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಎಫ್‌ಎಸ್‌ಎಲ್‌ ಮತ್ತು ಎನ್‌ಎಐ ಕಚೇರಿಗಳಲ್ಲಿ 2022ರ ನವೆಂಬರ್‌ ತಿಂಗಳ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಎನ್‌ಐಎ ಕಂಪ್ಯೂಟರ್‌ ಕೋಶ ಮತ್ತು ಸಿಬ್ಬಂದಿಗೆ ಆದೇಶಿಸಿದ್ದು ಅರ್ಜಿ ವಿಲೇವಾರಿ ಮಾಡಿದೆ.

‘ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 124 ಮತ್ತು 126ರ ಪ್ರಕಾರ, ಅಧಿಕಾರಿಗಳ ನಡುವೆ ಹಲವು ಗೋಪ್ಯವಾದ ಅಧಿಕೃತ ಸಂವಹನ ನಡೆದಿರುತ್ತದೆ. ಅದನ್ನು ಬಹಿರಂಗಪಡಿಸಲು ಆಗದು’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಕೋರಿಕೆ ಏನಿತ್ತು?

‘2022ರ ನವೆಂಬರ್‌ ನಲ್ಲಿ ಎಫ್‌ಎಸ್‌ಎಲ್‌ ಮತ್ತು ಎನ್‌ಐಎ ಕಚೇರಿಗಳಲ್ಲಿ 18ನೇ ಆರೋಪಿ ಮೊಹಮ್ಮದ್‌ ಜಬೀರ್‌ಗೆ ಎನ್‌ಐಎ ಅಧಿಕಾರಿಗಳು ತಪ್ಪು ಒಪ್ಪಿಕೊಳ್ಳುವಂತೆ ಬಲವಂತ ಮಾಡಿ ಕಿರುಕುಳ ನೀಡಿದ್ದರು. ಹಾಗಾಗಿ, ಅಂದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮತ್ತು ಎನ್‌ಎಐ ಅಧಿಕಾರಿಗಳ ಕರೆ ದಾಖಲೆಗಳ ವಿವರಗಳನ್ನು ಒದಗಿಸುವಂತೆ ಸಮನ್ಸ್‌ ಜಾರಿಗೊಳಿಸಬೇಕು’ ಎಂದು ಕೋರಲಾಗಿತ್ತು. ಆದರೆ ವಿಶೇಷ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು.

‘ಜಬೀರ್‌ಗೆ ಎನ್‌ಐಎ ಅಧಿಕಾರಿಗಳು ಕಿರುಕುಳ ನೀಡಿದ್ದಾರೆಂಬ ಆರೋಪ ಆಧಾರ ರಹಿತ ಮತ್ತು ಸುಳ್ಳು’ ಎಂದು ಹೇಳಿತ್ತು. ಎನ್ಐಎ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT