ಭಾನುವಾರ, ನವೆಂಬರ್ 29, 2020
24 °C
ತಜ್ಞರ ಅಭಿಮತ

ನಿಖರ ಕೃಷಿ–ಭಾರತೀಯ ಕೃಷಿ ಪರಿಸರಕ್ಕೆ ಡ್ರೋನ್‌ ಸೂಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನೇಕ ದೇಶಗಳು ಉಪಗ್ರಹ ಆಧಾರಿತ ದೂರಸಂವೇದಿ ತಂತ್ರಜ್ಞಾನ ಬಳಸಿ ನಿಖರ ಕೃಷಿ ಕೈಗೊಳ್ಳುವ ಮೂಲಕ ಹಚ್ಚು ವರಮಾನ ಗಳಿಸುತ್ತಿವೆ. ಆದರೆ, ಸಣ್ಣ ಭೂ ಹಿಡುವಳಿಗಳೇ ಜಾಸ್ತಿ ಇರುವ ಭಾರತದ ಕೃಷಿ ವ್ಯವಸ್ಥೆಯಲ್ಲಿ ನಿಖರ ಕೃಷಿ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ದೂರಸಂವೇದಿ ತಂತ್ರಜ್ಞಾನದ ಬದಲು ಡ್ರೋನ್‌ ತಂತ್ರಜ್ಞಾನವೇ ಸೂಕ್ತ ಎನ್ನುತ್ತಾರೆ ತಜ್ಞರು.

‘ನೂರಾರು ಎಕರೆ ಹಿಡುವಳಿ ಹೊಂದಿದ್ದರೆ, ಉಪಗ್ರಹ ಆಧರಿತ ಮಾಹಿತಿ ಬಳಸಿ ನಿಖರ ಕೃಷಿ ಮಾಡುವುದು ಸುಲಭ. ಕೇವಲ 4ರಿಂದ 5 ಎಕರೆ ಹಿಡುವಳಿಗಳಿಗೆ ಇದು ಅಷ್ಟು ಹೊಂದಿಕೆಯಾಗದು. ಡ್ರೋನ್‌ಗಳು ಭವಿಷ್ಯದಲ್ಲಿ ಭಾರತದ ಕೃಷಿ ವ್ಯವಸ್ಥೆಯ ಚಾಲಕ ಶಕ್ತಿಯಾಗಿ ಕೆಲಸ ಮಾಡಲಿವೆ‘ ಎನ್ನುತ್ತಾರೆ ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿಬಿ) ನಿರ್ದೇಶಕ ಪ್ರೊ.ಎಸ್‌.ಸಡಗೋಪನ್.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2020ರಲ್ಲಿ ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಬಗ್ಗೆ ಗುರುವಾರ ವಿವರಿಸಿದ ಅವರು, ‘ಚೀನಾ ಮತ್ತಿತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೃಷಿ ಇಳುವರಿ ತೀರಾ ಕಡಿಮೆ. ಆದರೆ, ನಮ್ಮಲ್ಲಿ ನೀರಿನ ಬಳಕೆ ಚೀನಾಕ್ಕಿಂತ ಮೂರು ಪಟ್ಟು ಜಾಸ್ತಿ. ರಸಗೊಬ್ಬರ ಹಾಗೂ ಕೀಟನಾಶಕ ಬಳಕೆಯೂ ನಮ್ಮಲ್ಲೇ ಹೆಚ್ಚು. ಇದು ಫಸಲಿನ ಗುಣಮಟ್ಟದ ಮೇಲು ಪರಿಣಾಮ ಬೀರುತ್ತದೆ. ಇನ್ನೊಂದೆಡೆ, ಅಂತರ್ಜಲ ಮಟ್ಟವೂ ಪಾತಾಳ ಸೇರುತ್ತಿದ್ದು, ತಮಿಳುನಾಡಿನಲ್ಲಿ ಶೇ 81ರಷ್ಟು, ಉತ್ತರ ಪ್ರದೇಶದಲ್ಲಿ ಶೇ 91ರಷ್ಟು ಹಾಗೂ ಕರ್ನಾಟಕದಲ್ಲಿ ಶೇ 40ರಷ್ಟು ಕಡಿಮೆ ಆಗಿದೆ. ಇಂತಹ ಸಂದರ್ಭದಲ್ಲಿ ಸಂಪನ್ಮೂಲಗಳ ಸದ್ಬಳಕೆ ಮೂಲಕ ಹೆಚ್ಚು ಇಳುವರಿ ಪಡೆಯಲು ಡ್ರೋನ್‌ ತಂತ್ರಜ್ಞಾನದ ಮೊರೆ ಹೋಗುವುದು ಅನಿವಾರ್ಯ’ ಎಂದು ಅವರು ಅಭಿಪ್ರಾಯಪಟ್ಟರು. 

‘ಸಂಸ್ಕರಣೆಗೆ ಒಳಪಟ್ಟ ದೂರ ಸಂವೇದಿ ದತ್ತಾಂಶಗಳು ಭಾರತದಲ್ಲೂ ರೈತರಿಗೂ ಮುಕ್ತವಾಗಿ ಲಭ್ಯ ಇವೆ. ಆದರೆ, ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಅವುಗಳನ್ನು ಪಡೆಯುವುದಕ್ಕೆ 10 –12 ದಿನಗಳು ಬೇಕಾಗುತ್ತದೆ. ಕೃಷಿಯಲ್ಲಿ ಈ ಅವಧಿ ಮಹತ್ತರವಾದುದು. ಯಾವುದಾದರೂ ಹೊಸ ರೋಗ ಕಾಣಿಸಿಕೊಂಡು ಅದರ ಮಾಹಿತಿ 12 ದಿನಗಳ ನಂತರ ರೈತರನ್ನು ತಲುಪುವಷ್ಟರಲ್ಲಿ ಭಾರಿ ನಷ್ಟ ಉಂಟಾಗಿರುತ್ತದೆ. ಆದರೆ ಡ್ರೋನ್‌ ಬಳಸಿ ಬೆಳೆಗಳ ಮೇಲೆ ನಿಗಾ ಇಡುವಾಗ ಇಂತಹ ವಿಳಂಬಕ್ಕೆ ಆಸ್ಪದವಿಲ್ಲ’ ಎಂದು ಅವರು ಅವರು ವಿಶ್ಲೇಷಿಸಿದರು.

ಡ್ರೋನ್‌ನಿಂದ ಏನುಪಯೋಗ: ‘ಜಿಪಿಎಸ್‌ ಬೇಲಿ ತಂತ್ರಜ್ಞಾನ ಬಳಕೆಯ ಮೂಲಕ ಸಣ್ಣ  ಹಿಡುವಳಿಗಳಿಗೆ ಮಾತ್ರ ನೀರು, ಕೀಟನಾಶಕ ಅಥವಾ ರಸಗೊಬ್ಬರ ಸಿಂಪಡಿಸುವುದು ಈಗ ಸಾಧ್ಯ. ಈ ಹಿಂದೆ ಡ್ರೋನ್‌ ಸತತ ಅರ್ಧ ತಾಸು ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಬ್ಯಾಟರಿ ತಂತ್ರಜ್ಞಾನ ಸುಧಾರಣೆಯಿಂದ ಹಾಗೂ ಮಲ್ಟಿಕಾಪ್ಟರ್‌ ತಂತ್ರದ ಬಳಕೆಯಿಂದ ಡ್ರೋನ್‌ಗಳು ಈಗ ತಾಸುಗಟ್ಟಲೆ ಕಾರ್ಯನಿರ್ವಹಿಸಬಲ್ಲವು. ಸಿಂಪಡಣೆಗೆ ಬಳಸುವ ಪರಿಕರದ ರಂಧ್ರದ ಗಾತ್ರ ಪರಿವರ್ತನೆಯಿಂದ ಔಷಧ, ಗೊಬ್ಬರ ಅಥವಾ ನೀರಿನ ಸಿಂಪಡಣೆ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವುದು ಈಗ ಸುಲಭವಾಗಿದೆ’ ಎಂದು ಅವರು ವಿವರಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು