ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯದಲ್ಲಿ ಹೊಂದಾಣಿಕೆ ಮುಖ್ಯ: ಎನ್‌. ಸಂತೋಷ್‌ ಹೆಗ್ಡೆ

ಅಭಿಮತ
Published 14 ಫೆಬ್ರುವರಿ 2024, 15:43 IST
Last Updated 14 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರೀತಿಸಿ ಮದುವೆ ಆಗುವವರು ಜೀವನದಲ್ಲಿ ಏನೇ ಕಷ್ಟ ಬಂದರೂ ಆ ಸಂಬಂಧವನ್ನು ನಿಭಾಯಿಸಿಕೊಂಡು ಬಾಳ್ವೆ ನಡೆಸಬೇಕು. ಅದಕ್ಕಾಗಿ ವಿವಾಹಕ್ಕೂ ಮುನ್ನ ದೃಢ ಸಂಕಲ್ಪ ಮಾಡಿಕೊಳ್ಳಬೇಕು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ತಿಳಿಸಿದರು. 

ಉರು ಪ್ರಕಾಶನ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಜ್ಜಿನಿ ರುದ್ರಪ್ಪ ಅವರ ‘ಪ್ರೀತಿಯನ್ನು ಹಂಬಲಿಸಿ...’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. ‘ಪ್ರೀತಿ ಕೇವಲ ಹುಡುಗ ಹುಡುಗಿಗೆ ಮಾತ್ರ ಸೀಮಿತವಾಗದೆ, ಎಲ್ಲ ಸಂಬಂಧಗಳಲ್ಲೂ ಪ್ರೀತಿ ಇರುತ್ತದೆ. ಆದ್ದರಿಂದ ಪ್ರೀತಿಸಿ ವಿವಾಹ ಆಗುವವರು ಆದರ್ಶ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ಗಾಡಿ ಬದಲಿಸಿದಂತೆ ವಿಚ್ಛೇದನ ನೀಡಿ, ಮತ್ತೊಂದು ಮದುವೆಯಾಗಬಾರದು’ ಎಂದು ಹೇಳಿದರು.

‘ನಾನೂ ಕೂಡ ಪ್ರೀತಿಸಿ ಮದುವೆಯಾಗಿದ್ದೇನೆ. ಪಂಜಾಬಿ ಹುಡುಗಿ ವಿವಾಹವಾಗಿ 54 ವರ್ಷಗಳು ಕಳೆದಿವೆ. ನಮ್ಮ ನಡುವೆ ಎಂದಿಗೂ ವೈಮನಸ್ಸು ಬಂದಿಲ್ಲ. ಸುಖ ದುಃಖಗಳೆರಡರಲ್ಲೂ ಹೊಂದಿಕೊಂಡು ಜೀವನ ನಡೆಸಿದ್ದೇವೆ’ ಎಂದು ತಿಳಿಸಿದರು.

ಕವಿ ಎಲ್.ಎನ್.ಮುಕುಂದರಾಜ್, ‘ಎಲ್ಲ ಜೀವಿಗಳು ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಪ್ರೀತಿಸುತ್ತವೆ. ಜಗತ್ತನ್ನು ಪ್ರೀತಿಸುವವರು ಪ್ರೇಮಿಗಳೇ ಆಗಿದ್ದಾರೆ. ಕವಿ ಪಂಪ ಆದಿಯಾಗಿ ಕುವೆಂಪುವರೆಗಿನ ಎಲ್ಲ ಕವಿಗಳು ಕನ್ನಡ ಸಾಹಿತ್ಯದಲ್ಲಿ ಪ್ರೇಮದ ಹಲವು ವೈಶಿಷ್ಟ್ಯತೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ’ ಎಂದು ಹೇಳಿದರು.

ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಬಿ.ಕೆ. ರವಿ, ‘ಬದಲಾದ ಕಾಲಘಟ್ಟದಲ್ಲಿ ಹೊಂದಾಣಿಕೆಯ ದಾಂಪತ್ಯ ಬಹಳ ಮುಖ್ಯ. 30-40 ವರ್ಷಗಳ ಹಿಂದೆ ವಿಚ್ಛೇದನದ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿರಲೇ ಇಲ್ಲ. ಆದರೆ, ಇತ್ತೀಚೆಗೆ ವಿಚ್ಛೇದನ ಸಾಮಾನ್ಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ, ‘ನಾನೂ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರೂ ಕ್ರೀಡಾಪಟುಗಳಾಗಿದ್ದೆವು. ಕಷ್ಟ ಸುಖ ಎರಡರಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ ಉತ್ತಮ ಬಾಳ್ವೆ ನಡೆಸಿದ್ದೇವೆ. ಪ್ರೀತಿ ಮಾಡುವಾಗ ಮಾತ್ರವಲ್ಲ ಆ ನಂತರದ ದಾಂಪತ್ಯದಲ್ಲೂ ಆ ಪ್ರೀತಿಯನ್ನು ಹಾಗೇ ಮುಂದುವರೆಸಿಕೊಂಡು ಹೋಗಬೇಕು’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT