ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಲ್ಯಾಕ್‌ಮೇಲ್‌ಗೆ ಹೆದರಿ ಚಂದ್ರಶೇಖರನ್‌ ಆತ್ಮಹತ್ಯೆ: ಪ್ರಾಥಮಿಕ ಆರೋಪ ಪಟ್ಟಿ

ಆತ್ಮಹತ್ಯೆ ಪ್ರಕರಣ: ಬಿ.ನಾಗೇಂದ್ರ, ದದ್ದಲ್‌, ಸುಚಿಸ್ಮಿತಾ ಹೆಸರಿಲ್ಲ
Published : 22 ಆಗಸ್ಟ್ 2024, 19:37 IST
Last Updated : 22 ಆಗಸ್ಟ್ 2024, 21:32 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕರಾಗಿದ್ದ ಪಿ.ಚಂದ್ರಶೇಖರನ್‌ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ದಳವು (ಎಸ್‌ಐಟಿ) ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಗುರುವಾರ ಪ್ರಾಥಮಿಕ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ‘ಚಂದ್ರಶೇಖರನ್‌ ಆತ್ಮಹತ್ಯೆಗೆ ನಿಗಮದ ಇಬ್ಬರು ಅಧಿಕಾರಿಗಳು ಮಾನಸಿಕವಾಗಿ ಒತ್ತಡ ಹೇರಿ ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಕಾರಣ’ ಎಂದು ಉಲ್ಲೇಖಿಸಿದೆ.

‘₹94.73 ಕೋಟಿ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಗಳಾದ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್‌ ಹಾಗೂ ಲೆಕ್ಕಾಧೀಕ್ಷಕ ಪರುಶುರಾಮ ದುರ್ಗಣ್ಣನವರ್‌ ಅವರು ನೀಡಿದ ಕಿರುಕುಳ, ಒತ್ತಡದಿಂದಲೇ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಇಡೀ ಪ್ರಕರಣದ ಹೊಣೆಯನ್ನು ಹೊರಿಸುವುದಾಗಿಯೂ ಬ್ಲ್ಯಾಕ್‌ಮೇಲ್ ಮಾಡಿದ್ದೇ ಅವರು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಪದ್ಮನಾಭ್‌, ಪರುಶುರಾಮ್‌ ಅವರನ್ನು ಮಾತ್ರ ಈ ಪ್ರಕರಣದಲ್ಲಿ ಹೊಣೆ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಮುಖರ ಹೆಸರಿಲ್ಲ:

ಎಂ.ಜಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಧಾನ ವ್ಯವಸ್ಥಾಪಕಿ ಸುಚಿಸ್ಮಿತಾ ರೌಲ್‌ ಅವರ ಹೆಸರು ಶಿವಮೊಗ್ಗ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಇತ್ತು. ಅಲ್ಲದೇ ಎಸ್‌ಐಟಿ ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಮ್ಯಾಂಡ್‌ ಅರ್ಜಿಯಲ್ಲೂ ಸುಚಿಸ್ಮಿತಾ ಅವರನ್ನು ಆರನೇ ಆರೋಪಿ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಾಥಮಿಕ ಆರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.

‘ಮಾಜಿ ಸಚಿವ ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್‌, ಅವರ ಸಂಬಂಧಿ ನಾಗೇಶ್ವರ ರಾವ್ ಹಾಗೂ ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ ಅವರ ಹೆಸರನ್ನೂ ಸಹ ಉಲ್ಲೇಖಿಸಿಲ್ಲ’ ಎಂದು ಮೂಲಗಳು ಹೇಳಿವೆ.

ಮರಣಪತ್ರದಲ್ಲಿ ಮೂವರ ಹೆಸರು: ‘ಚಂದ್ರಶೇಖರನ್‌ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಮರಣಪತ್ರದಲ್ಲೂ ಪದ್ಮನಾಭ್‌, ಪರುಶುರಾಮ ದುರ್ಗಣ್ಣನವರ್‌, ಸುಚಿಸ್ಮಿತಾ ರೌಲ್‌ ಅವರ ಹೆಸರಿತ್ತು. ನಿಗಮದ ₹85 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆ ಮಾಡಿಕೊಡುವಂತೆ ಕರ್ತವ್ಯದ ವೇಳೆ ಒತ್ತಡ ಹೇರುತ್ತಿದ್ದರು’ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿದ್ದರು.

‘ಪದ್ಮನಾಭ್‌ ಹಾಗೂ ಪರಶುರಾಮ್‌ ಅವರೇ ಪ್ರಕರಣ ಸೂತ್ರಧಾರರು. ವಸಂತನಗರದಲ್ಲಿದ್ದ ನಿಗಮದ ಬ್ಯಾಂಕ್ ಖಾತೆಯನ್ನು ಎಂ.ಜಿ. ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಗೆ ವರ್ಗಾವಣೆ ಮಾಡಿಸಿದ್ದರು. ಅಲ್ಲದೇ ನಕಲಿ ಖಾತೆಗಳನ್ನು ತೆರೆದು ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಆಗ ಪಿ.ಚಂದ್ರಶೇಖರನ್‌ಗೆ ಅಕ್ರಮ ನಡೆದಿರುವುದು ಗೊತ್ತಾಗಿತ್ತು. ಬ್ಯಾಂಕ್‌ಗೆ ಪತ್ರ ಬರೆದು ಮಾಹಿತಿ ನೀಡುವಂತೆ ಕೋರಿದ್ದರು. ಆದರೆ, ಬ್ಯಾಂಕ್ ಅಧಿಕಾರಿಗಳು ಪ್ರತಿಕ್ರಿಯಿಸಿರಲಿಲ್ಲ. ಚಂದ್ರಶೇಖರನ್‌ ಅವರೇ ಬ್ಯಾಂಕ್‌ಗೆ ತೆರಳಿ ದಾಖಲೆ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಈ ವಿಚಾರ ತಿಳಿದ ಆರೋಪಿಗಳು, ಚಂದ್ರಶೇಖರನ್‌ ಅವರನ್ನು ಕರೆಸಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದಕ್ಕೆ ಜಗ್ಗದ ಚಂದ್ರಶೇಖರನ್ ಅವರು ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು’ ಎಂದು ಮೂಲಗಳು ಹೇಳಿವೆ.

ಮರಣಪತ್ರದಲ್ಲಿ ಮೂವರ ಹೆಸರು:

‘ಚಂದ್ರಶೇಖರನ್‌ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಮರಣಪತ್ರದಲ್ಲೂ ಪದ್ಮನಾಭ್‌, ಪರುಶುರಾಮ ದುರ್ಗಣ್ಣನವರ್‌, ಸುಚಿಸ್ಮಿತಾ ರೌಲ್‌ ಅವರ ಹೆಸರಿತ್ತು. ನಿಗಮದ ₹85 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆ ಮಾಡಿಕೊಡುವಂತೆ ಕರ್ತವ್ಯದ ವೇಳೆ ಒತ್ತಡ ಹೇರುತ್ತಿದ್ದರು’ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿದ್ದರು.

‘ಪದ್ಮನಾಭ್‌ ಹಾಗೂ ಪರಶುರಾಮ್‌ ಅವರೇ ಪ್ರಕರಣ ಸೂತ್ರಧಾರರು. ವಸಂತನಗರದಲ್ಲಿದ್ದ ನಿಗಮದ ಬ್ಯಾಂಕ್ ಖಾತೆಯನ್ನು ಎಂ.ಜಿ. ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಗೆ ವರ್ಗಾವಣೆ ಮಾಡಿಸಿದ್ದರು. ಅಲ್ಲದೇ ನಕಲಿ ಖಾತೆಗಳನ್ನು ತೆರೆದು ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಆಗ ಪಿ.ಚಂದ್ರಶೇಖರನ್‌ಗೆ ಅಕ್ರಮ ನಡೆದಿರುವುದು ಗೊತ್ತಾಗಿತ್ತು. ಬ್ಯಾಂಕ್‌ಗೆ ಪತ್ರ ಬರೆದು ಮಾಹಿತಿ ನೀಡುವಂತೆ ಕೋರಿದ್ದರು. ಆದರೆ, ಬ್ಯಾಂಕ್ ಅಧಿಕಾರಿಗಳು ಪ್ರತಿಕ್ರಿಯಿಸಿರಲಿಲ್ಲ. ಚಂದ್ರಶೇಖರನ್‌ ಅವರೇ ಬ್ಯಾಂಕ್‌ಗೆ ತೆರಳಿ ದಾಖಲೆ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಈ ವಿಚಾರ ತಿಳಿದ ಆರೋಪಿಗಳು, ಚಂದ್ರಶೇಖರನ್‌ ಅವರನ್ನು ಕರೆಸಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದಕ್ಕೆ ಜಗ್ಗದ ಚಂದ್ರಶೇಖರನ್ ಅವರು ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು’ ಎಂದು ಮೂಲಗಳು ಹೇಳಿವೆ.

ಹೊರರಾಜ್ಯಕ್ಕೆ ಕರೆದೊಯ್ದಿದ್ದ ಆರೋಪಿಗಳು

‘ಅಕ್ರಮಕ್ಕೆ ಸಹಕಾರ ನೀಡುವುದಕ್ಕೆ ಒಪ್ಪಿಸಲು ಚಂದ್ರಶೇಖರನ್ ಅವರನ್ನು ಇಬ್ಬರು ಆರೋಪಿಗಳು ಗೋವಾಕ್ಕೂ ಕರೆದೊಯ್ದಿದ್ದರು. ಕಮಿಷನ್‌ನ ಆಮಿಷವೊಡ್ಡಿದ್ದರು. ಈ ವಿಚಾರವನ್ನು ಯಾರೊಂದಿಗೂ ಬಾಯಿಬಿಡದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಚಂದ್ರಶೇಖರನ್‌ ಒಪ್ಪಿರಲಿಲ್ಲ. ಆ ನಂತರ ಆರೋಪಿಗಳು ಮಾಜಿ ಸಚಿವ ಬಿ.ನಾಗೇಂದ್ರ ಆಪ್ತರ ಮೂಲಕ ಹಾಗೂ ಬೇರೆ ಬೇರೆ ವಿಧಾನಗಳಲ್ಲಿ ಒತ್ತಡ ಹಾಕಿದ್ದರು. ಚಂದ್ರಶೇಖರನ್‌ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪತಿ ವಿರುದ್ಧ ಆರೋಪ, ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುವೆ’

ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪತಿಯನ್ನು ತಪ್ಪಿತಸ್ಥರನ್ನಾಗಿಸಿ ವಿಶೇಷ ತನಿಖಾ
ತಂಡ (ಎಸ್‌ಐಟಿ) ಆರೋಪ ಪಟ್ಟಿ ಸಿದ್ಧಪಡಿಸಿರುವ ಮಾಹಿತಿ ಇದೆ. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವೆ’ ಎಂದು ಆತ್ಮಹತ್ಯೆ ಮಾಡಿಕೊಂಡ ನಿಗಮದ ವ್ಯವಸ್ಥಾಪಕ ಚಂದ್ರಶೇಖರ್ ಅವರ ಪತ್ನಿ ಕವಿತಾ
ತಿಳಿಸಿದರು.

ಪ್ರಕರಣದ ತನಿಖೆ ನಡೆಸಿರುವ ವಿಶೇಷ ತಂಡ, 300 ಪುಟಗಳ ಆರೋಪಪಟ್ಟಿಯನ್ನು ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕವಿತಾ ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಪತಿ ಚಂದ್ರಶೇಖರ್ ನಿಗಮದ ಹಣ ತಿಂದಿಲ್ಲ. ಹಣ ತಿಂದಿದ್ದರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅವರ ಸಾವಿನ ನಂತರ ಕುಟುಂಬದವರು ಜೀವನ ನಡೆಸಲು ಪರದಾಡುತ್ತಿದ್ದೇವೆ.‌ ತಾಯಿ ಮನೆಯಲ್ಲಿ ವಾಸವಿದ್ದೇವೆ’ ಎಂದು ಹೇಳಿದರು. 

‘ಸರ್ಕಾರ ನ್ಯಾಯಯುತವಾಗಿ ತನಿಖೆ ನಡೆಸಲಿ. ತನಿಖೆಯನ್ನು ಸಿಬಿಐಗೆ ವಹಿಸಲಿ. ನಾವೇ ಕೇಸ್ ಕೊಟ್ಟಿದ್ದೇವೆ. ಅವರು ನಮ್ಮ ಮನೆಯವರ ಮೇಲೆ (ಪತಿ) ಆರೋಪ ಹೊರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಸರ್ಕಾರ ನೆರವು ಕೊಟ್ಟಿಲ್ಲ:

‘ಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಟುಂಬಕ್ಕೆ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಪತಿ ಸತ್ತಾಗ ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋದರು. ಆದರೆ ಮತ್ತೆ ಯಾರು ನಮ್ಮ ಮನೆ ಕಡೆ ಬಂದು ಪರಿಹಾರ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT