ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪನಗರ ರೈಲು 40 ತಿಂಗಳಲ್ಲೇ ಸಾಕಾರ: ಮೋದಿ ವಾಗ್ದಾನ

ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ l ಸಂಚಾರ ದಟ್ಟಣೆ ನಿವಾರಣೆ ವಿಶ್ವಾಸ
Published : 20 ಜೂನ್ 2022, 20:49 IST
ಫಾಲೋ ಮಾಡಿ
Comments

ಬೆಂಗಳೂರು: ‘40 ವರ್ಷಗಳಿಂದ ಚರ್ಚೆಯಲ್ಲೇ ಉಳಿದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ನಮ್ಮ ‘ಡಬ್ಬಲ್‌ ಎಂಜಿನ್‌’ ಸರ್ಕಾರಗಳು 40 ತಿಂಗಳಲ್ಲೇ ಪೂರ್ಣಗೊಳಿಸಿ, ಇಲ್ಲಿನ ಜನರ ಕನಸನ್ನು ಸಾಕಾರಗೊಳಿಸಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ನೀಡಿದರು.

ನಗರದ ಕೊಮ್ಮಘಟ್ಟದಲ್ಲಿ ಸೋಮ ವಾರ ನಡೆದ ಸಮಾರಂಭದಲ್ಲಿ ₹ 15,767 ಕೋಟಿ ವೆಚ್ಚದಲ್ಲಿ 148 ಕಿ.ಮೀ. ಉದ್ದದ ಮಾರ್ಗದಲ್ಲಿ ಬೆಂಗಳೂರು ನಗರ, ಸುತ್ತಲಿನ ಉಪನಗರಗಳು ಮತ್ತು ಸಮೀಪದ ಪಟ್ಟಣಗಳಿಗೆ ಸ್ಥಳೀಯ ರೈಲು ಸಾರಿಗೆ ಸೌಲಭ್ಯ ಕಲ್ಪಿಸುವ ‘ಬೆಂಗಳೂರು ಉಪ ನಗರ ರೈಲು ಯೋಜನೆ’ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಸಂಚಾರ ದಟ್ಟಣೆ ತಗ್ಗಿಸುವುದು, ಪ್ರಯಾಣದ ಸಮಯ ಉಳಿತಾಯಕ್ಕೆ ಕಾರಣವಾಗುವ ಬೆಂಗಳೂರು ಉಪ ನಗರ ರೈಲು ಯೋಜನೆ ಕುರಿತು 40 ವರ್ಷಗಳ ಹಿಂದೆ ಚರ್ಚೆ ಆರಂಭ ವಾಗಿತ್ತು. 16 ವರ್ಷಗಳಿಂದ ಈ ಯೋಜನೆ ಕಡತದಲ್ಲೇ ಓಡಾಡಿದೆ, ಒದ್ದಾಡಿದೆ. ಈಗ ನಮ್ಮ ‘ಡಬ್ಬಲ್‌ ಎಂಜಿನ್‌’ ಸರ್ಕಾರಗಳು ಬೆಂಗಳೂರು ನಗರದ ಜನರ ಬಹುದಿನದ ಕನಸನ್ನು ಸಾಕಾರಗೊಳಿಸುವ ಕೆಲಸ ಆರಂಭಿಸಿವೆ’ ಎಂದರು.

‘ಉಪನಗರ ರೈಲು ಯೋಜನೆ ಅನು ಷ್ಠಾನದಿಂದ ಬೆಂಗಳೂರಿನ ಸಾಮರ್ಥ್ಯ ವಿಸ್ತಾರವಾಗಲಿದೆ. 40 ವರ್ಷಗಳ ಹಿಂದೆಯೇ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದರೆ ನಗರದ ಮೇಲಿನ ಒತ್ತಡ ತಗ್ಗುತ್ತಿತ್ತು. ಆದರೆ, ಈ ಯೋಜನೆಗೆ ಚಾಲನೆ ನೀಡುವ ಅದೃಷ್ಟ ನನ್ನ ನಸೀಬಿನಲ್ಲಿತ್ತು. ನೀವು ನನಗೆ ಅವಕಾಶ ನೀಡಿದ್ದೀರಿ. ನಾನು ಕಾಲಹರಣ ಮಾಡುವುದಿಲ್ಲ. ನಿಗದಿತ ಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸುತ್ತೇನೆ’ ಎಂದು ಭರವಸೆ
ನೀಡಿದರು.

ಸಂಚಾರ ದಟ್ಟಣೆಗೆ ಪರಿಹಾರ: ಉಪ ನಗರ ವರ್ತುಲ ರಸ್ತೆ ನಿರ್ಮಾಣ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ದೊರಕಿಸಲಿರುವ ಮತ್ತೊಂದು ಯೋಜನೆ. ಹೊರ ಊರು ಗಳಿಂದ ಬರುವವರು ಉಪನಗರಗಳ ಮಾರ್ಗವಾಗಿಯೇ ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳನ್ನು ಸಂಪರ್ಕಿಸಲು ಉಪನಗರ ವರ್ತುಲ ರಸ್ತೆ ನೆರವಾಗಲಿದೆ ಎಂದು ಮೋದಿ ಹೇಳಿದರು.

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಯಲ್ಲೂ ಬೆಂಗಳೂರಿನಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ದೇಶದ ಮೂರನೇ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಈಗ ಜನರ ಸೇವೆಗೆ ಸಮರ್ಪಣೆಯಾಗಿದೆ. ಇದೊಂದು ಪ್ರವಾಸಿ ತಾಣದಂತೆ ರೂಪುಗೊಂಡಿದೆ. ದಂಡು ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲಾಗುತ್ತಿದೆ. ಇವೆಲ್ಲವೂ ತಮ್ಮ ಸರ್ಕಾರ ನಗರದ ಜನರಿಗೆ ನೀಡುತ್ತಿರುವ ಕೊಡುಗೆಗಳು ಎಂದರು.

ಯುವಜನರ ಕನಸಿನ ನಗರ: ‘ದೇಶದ ಲಕ್ಷಾಂತರ ಜನರ ಕನಸಿನ ನಗರ ಬೆಂಗಳೂರು. ಇಲ್ಲಿ ಬಂದು ಕೆಲಸ ಮಾಡಬೇಕು ಎಂದು ಬಯಸುವವರ ಸಂಖ್ಯೆ ದೊಡ್ಡದು. ಈ ನಗರದ ಅಭಿವೃದ್ಧಿಯಿಂದ ಲಕ್ಷಾಂತರ ಜನರ ಕನಸಿನ ವಿಕಾಸವಾಗುತ್ತದೆ’ ಎಂದರು.

ನವೋದ್ಯಮ ಕ್ಷೇತ್ರದಲ್ಲಿ ದೇಶವು ದೊಡ್ಡ ಪ್ರಮಾಣದ ಯಶಸ್ಸು ಸಾಧಿಸುತ್ತಿರುವುದಕ್ಕೆ ಬೆಂಗಳೂರಿನ ಕೊಡುಗೆ ದೊಡ್ಡದು. ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಇಲ್ಲಿ ನಡೆದ ಆವಿಷ್ಕಾರ, ಸಂಶೋಧನೆ ಮತ್ತು ನವೋದ್ಯಮಗಳಲ್ಲಿನ ಯಶಸ್ವಿ ಪ್ರಯೋಗಗಳೇ ಆತ್ಮನಿರ್ಭರ ಯೋಜನೆಯ ಹಿಂದಿನ ಪ್ರೇರಣೆ ಎಂದು ಪ್ರಧಾನಿ ಶ್ಲಾಘಿಸಿದರು.

ತೇಜಸ್ವಿನಿ, ಮೋಹನ್‌ ದಾಸ್‌ ಪೈ ಭೇಟಿ

ಅದಮ್ಯ ಚೇತನ ಪ್ರತಿಷ್ಠಾನದ ಮುಖ್ಯಸ್ಥರಾದ ತೇಜಸ್ವಿನಿ ಅನಂತ ಕುಮಾರ್‌ ಮತ್ತು ಉದ್ಯಮಿ ಟಿ.ವಿ. ಮೋಹನ್‌ ದಾಸ್‌ ಪೈ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

‘ತೇಜಸ್ವಿನಿ ಅವರು ಪಕ್ಷದ ಹಿರಿಯ ನಾಯಕರಾಗಿದ್ದ ಅನಂತಕುಮಾರ್‌ ಅವರ ಪತ್ನಿ. ಅವರು ಪ್ರಧಾನಿ ಅವರೊಂದಿಗೆ ಯಾವ ವಿಷಯದ ಕುರಿತು ಚರ್ಚಿಸಿದ್ದಾರೆ ಎಂಬುದು ತಿಳಿದಿಲ್ಲ. ಮೋಹನ್‌ ದಾಸ್‌ ಪೈ ಅವರು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.


ಮೈಸೂರು ಪೇಟ ತೊಡಿಸಿ ಸನ್ಮಾನ

ಕೊಮ್ಮಘಟ್ಟದ ಸಾರ್ವಜನಿಕ ಸಮಾರಂಭದ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಪೇಟ, ಕೇಸರಿ ಬಣ್ಣ ರೇಷ್ಮೆ ಶಾಲು, ಬಿಳಿ ಬಣ್ಣದ ಶಲ್ಯ, ಏಲಕ್ಕಿಹಾರ ತೊಡಿಸಿ ಸನ್ಮಾನಿಸಿದರು. ಪ್ರಧಾನಿಯವರು ಸಮಾರಂಭದ ಕೊನೆಯವರೆಗೂ ಮೈಸೂರು ಪೇಟಧಾರಿಯಾಗಿಯೇ ಇದ್ದರು.


ಸರ್ ಎಂ. ವಿಶೇಶ್ವರಯ್ಯ ಟರ್ಮಿನಲ್ ಲೋಕಾರ್ಪಣೆ

ಬೈಯಪ್ಪನಹಳ್ಳಿ ಬಳಿ ನಿರ್ಮಾಣಗೊಂಡಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌, ಒಂದೂವರೆ ವರ್ಷಗಳ ಬಳಿಕ ಅಧಿಕೃವಾಗಿ ಲೋಕಾರ್ಪಣೆಗೊಂಡಿದೆ.

ಬೈಯಪ್ಪನಹಳ್ಳಿ ಹಳೇ ರೈಲು ನಿಲ್ದಾಣ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಈ ರೈಲು ನಿಲ್ದಾಣ ಚಿಟ್ಟೆಯಾಕಾರದಲ್ಲಿ ನಿರ್ಮಾಣವಾಗಿದೆ.

ನೈರುತ್ಯ ರೈಲ್ವೆ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ದಾಖಲಿಸುತ್ತಿರುವ ಈ ಟರ್ಮಿನಲ್, ವಿಮಾನ ನಿಲ್ದಾಣವನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಬೆಂಗಳೂರಿನ ರೈಲ್ವೆ ಇತಿಹಾಸ ದಲ್ಲೇ ಇದು ಹೊಸ ಮೈಲಿಗಲ್ಲು. ಸುಸಜ್ಜಿತ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಈ ನಿಲ್ದಾಣ ಸುತ್ತಮುತ್ತಲ ಜನರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. 2015–16ನೇ ಸಾಲಿನಲ್ಲಿ ಈ ನಿಲ್ದಾಣದ ಕಾಮಗಾರಿಗೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿತ್ತು. 2017ರಿಂದ ಕಾಮಗಾರಿ ಆರಂಭವಾಗಿತ್ತು.

ಕಾಮಗಾರಿ ಪೂರ್ಣಗೊಂಡರೂ ಸಂಪರ್ಕ ರಸ್ತೆ ಇಲ್ಲದೆ ರೈಲು ನಿಲ್ದಾಣ ಕಾರ್ಯಾರಂಭಗೊಳ್ಳಲು ತೊಡಕಾಗಿತ್ತು. ರಸ್ತೆ ನಿರ್ಮಾಣ ವಾದರೂ ಪ್ರಧಾನಿ ಅವರಿಂದ ಚಾಲನೆ ನೀಡಿಸಲು ಅಧಿಕಾರಿಗಳ ಕೆಲ ದಿನ ಕಾದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಇದೇ 6ರಿಂದ ರೈಲುಗಳ ಸಂಚಾರ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT