ಭಾನುವಾರ, ಏಪ್ರಿಲ್ 18, 2021
24 °C

ರೈತರ ಹಿತರಕ್ಷಣೆಗೆ ಸರ್ಕಾರದ ‌‌‌‌‌‌ಮಧ್ಯಪ್ರವೇಶ ಅಗತ್ಯ: ತಜ್ಞರ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರೈತರು ಬೆಳೆದ ಬೆಳೆಗಳನ್ನು ಖರೀದಿಸಲು ಸರ್ಕಾರ ಕನಿಷ್ಠ ಖರೀದಿ ದರವನ್ನು ಶಾಸನಬದ್ಧವಾಗಿ ನಿಗದಿ ಮಾಡಬೇಕು. ಆ ದರಕ್ಕಿಂತ ಕಡಿಮೆಗೆ ಕೃಷಿ ಉತ್ಪನ್ನ ಖರೀದಿಸಲು ಅವಕಾಶವಿರಬಾರದು’ ಎಂದು ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.

‘ರೈತರ ಹಿತರಕ್ಷಣೆಗೆ ಸರ್ಕಾರದ ಮಧ್ಯ ಪ್ರವೇಶ ಅಗತ್ಯ’ ಎಂಬ ಕುರಿತು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಎಪಿಎಂಸಿ, ಕಾಫಿ ಮಂಡಳಿಗಳಂತಹ ಮಾರಾಟ ಮಂಡಳಿಗಳು, ಹಾಪ್‌ಕಾಮ್ಸ್‌ನಂತಹ ಸಹಕಾರಿ ವ್ಯವಸ್ಥೆಗಳು ಗಟ್ಟಿಯಾಗಬೇಕು. ರೈತರ ಭಯ–ಆತಂಕಗಳು ದೂರ ಆಗಬೇಕಾದರೆ ಸರ್ಕಾರದ ಮಧ್ಯಪ್ರವೇಶ ಇರಬೇಕು’ ಎಂದು ಪ್ರತಿಪಾದಿಸಿದರು.

‘ಕೃಷಿಗೆ ಪೂರಕವಾದ ವಲಯಗಳನ್ನು ಸರ್ಕಾರ ಸಂಪೂರ್ಣವಾಗಿ ಬಿಟ್ಟುಕೊಡಬಾರದು. ಆದರೆ, ಈಗಿನ ಸರ್ಕಾರಗಳು ಹೊಣೆಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿವೆ’ ಎಂದರು.

ನಿವೃತ್ತ ಪ್ರಾಧ್ಯಾಪಕಿ, ಕೃಷಿ ತಜ್ಞೆ ಡಾ. ಸಿ.ಪಿ. ಗ್ರೇಸಿ, ‘ಬೆಳೆ ಪದ್ಧತಿ ಬದಲಾಗುತ್ತಿದೆ. ಕಳೆದ ದಶಕಕ್ಕೆ ಹೋಲಿಸಿದರೆ, ಕೃಷಿ ಉತ್ಪಾದನೆ ಮತ್ತು  ಕೃಷಿ ಕ್ಷೇತ್ರದ ವಿಸ್ತೀರ್ಣದಲ್ಲಿ ಬದಲಾವಣೆ ಆಗಿದೆ. ಅದರಲ್ಲಿಯೂ ಆಹಾರ ಬೆಳೆಗಳ ಉತ್ಪಾದನೆ ಕಡಿಮೆಯಾಗಿದ್ದರೆ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಜಾಸ್ತಿಯಾಗಿದೆ’ ಎಂದರು.

‘ದೇಶದಲ್ಲಿ ಆಹಾರದ ಅಭಾವ ಹೆಚ್ಚಾಗಿದ್ದ ಸಂದರ್ಭದಲ್ಲಿ ಭತ್ತ–ಗೋಧಿಯಂತಹ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಯಿತು. ಪಂಜಾಬ್‌ನಲ್ಲಿ ಹೆಚ್ಚಾಗಿ ಈ ಬೆಳೆಗಳನ್ನೇ ಬೆಳೆದಿದ್ದರಿಂದ ಭೂಮಿಗೂ ಹೆಚ್ಚು ಹಾನಿಯಾಯಿತು. ಏಕರೂಪದ ಬೆಳೆ ಬೆಳೆಯುವುದಕ್ಕಿಂತ ವಿಭಿನ್ನತೆ ಕಾಯ್ದುಕೊಳ್ಳುವ ಅಗತ್ಯವಿದೆ’ ಎಂದರು.

‘ನಾವು ಭಾರತೀಯರು’ ಸಂಸ್ಥೆಯ ವಿನಯ್ ಶ್ರೀನಿವಾಸ್, ‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವುದನ್ನು ಕಾನೂನುಬದ್ಧಗೊಳಿಸಿದರೆ ರೈತರ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಈ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡುವುದಕ್ಕೂ ಮುನ್ನವೇ, ರಾಜ್ಯಸರ್ಕಾರವೇ ತಿದ್ದುಪಡಿ ತರಲು ಅವಕಾಶವಿದೆ’ ಎಂದರು.

‘ರಾಜ್ಯದಲ್ಲಿ ಎಲ್ಲ ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೂ ಸರ್ಕಾರಕ್ಕೆ ವರ್ಷಕ್ಕೆ ₹11 ಸಾವಿರ ಕೋಟಿಗಿಂತ ಹೆಚ್ಚು ಖರ್ಚಾಗುವುದಿಲ್ಲ. ಎಂಎಸ್‌ಪಿ ಪರಿಹಾರವನ್ನು ಈ ಮೊತ್ತದಿಂದ ನೀಡಬಹುದು’ ಎಂದು ಸಲಹೆ ನೀಡಿದರು.

‘ಎಪಿಎಂಸಿಗಳಿಲ್ಲವೆಂದರೆ ಎಂಎಸ್‌ಪಿ ಸಾಧ್ಯವಾಗದು. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯದಿದ್ದರೆ ರಾಜ್ಯದ ಬಹುತೇಕ ಎಪಿಎಂಸಿಗಳು ಸ್ಥಗಿತಗೊಳ್ಳುವ ಅಪಾಯವಿದೆ’ ಎಂದರು.

ಪೃಥ್ವಿ ಪ್ರತಿಷ್ಠಾನ, ಮಳೆ ಆಶ್ರಿತ ಕೃಷಿ ಪುನರುಜ್ಜೀವನ ಜಾಲ, ಪರ್ಯಾಯ ಕಾನೂನು ವೇದಿಕೆಗಳು ಕಾರ್ಯಾಗಾರವನ್ನು ಆಯೋಜಿಸಿದ್ದವು. ಭಾರತೀಯ ಕಿಸಾನ್ ಸಂಘ, ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಪಾಲ್ಗೊಂಡರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು