ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಜಾಗದಲ್ಲಿ ಖಾಸಗಿ ಕಾರುಬಾರು!

ಸಾರಿಗೆ ನಿಯಮ ಉಲ್ಲಂಘನೆ; ಪ್ರಯಾಣಿಕರು, ಸವಾರರಿಗೆ ಕಿರಿಕಿರಿ: ಅಧಿಕಾರಿಗಳಿಗೆ ದೂರು
Last Updated 29 ಮಾರ್ಚ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳ ನಿಲುಗಡೆಗೆ ಮೀಸಲಾಗಿರುವ ತಂಗುದಾಣದ ಜಾಗದಲ್ಲಿ ಖಾಸಗಿ ಬಸ್‌ಗಳು ನಿಲ್ಲುತ್ತಿದ್ದು, ಪ್ರಯಾಣಿಕರು ಹಾಗೂ ವಾಹನಗಳ ಸವಾರರಿಗೆ ಕಿರಿಕಿರಿ ಆಗುತ್ತಿದೆ.

ಖಾಸಗಿ ಬಸ್‌ನವರ ವರ್ತನೆಯಿಂದ ಬೇಸತ್ತ ಕೆಲ ಪ್ರಯಾಣಿಕರು, ಅಂಥ ಬಸ್‌ಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಚಾರ ಪೊಲೀಸ್‌ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹೊರ ನಗರ ಹಾಗೂ ಜಿಲ್ಲೆಗಳಿಂದ ನಿತ್ಯವೂ ನೂರಾರು ಖಾಸಗಿ ಬಸ್‌ಗಳುಬೆಂಗಳೂರಿಗೆ ಬರುತ್ತವೆ. ಅಂಥ ಬಸ್‌ಗಳಿಗೆ ಸಾರಿಗೆ ಇಲಾಖೆ, ಸ್ಟೇಟ್ ಹಾಗೂ ಕಾಂಟ್ರಾಕ್ಟ್‌ ಕ್ಯಾರೇಜ್‌ ಎಂಬ ಎರಡು ವಿಧದಲ್ಲಿ ಪರವಾನಗಿ ನೀಡುತ್ತಿದೆ. ಹಲವು ಖಾಸಗಿ ಬಸ್‌ಗಳು ಪರವಾನಗಿಯ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದು, ಈ ಅಂಶವನ್ನೇ ಪ್ರಯಾಣಿಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೋಲಾರ, ಹೊಸೂರು, ಮಾಗಡಿ, ರಾಮನಗರ, ತುಮಕೂರು, ಕನಕಪುರ ಹಾಗೂ ಸುತ್ತಮುತ್ತಲ ಕಡೆಯಿಂದ ಖಾಸಗಿ ಬಸ್‌ಗಳು ನಗರಕ್ಕೆ ಬರುತ್ತಿವೆ. ಅಂಥ ಬಸ್‌ಗಳು ನಗರ ಪ್ರವೇಶಿಸುತ್ತಿದ್ದಂತೆ, ಬಿಎಂಟಿಸಿ ಬಸ್‌ಗಳ ನಿಲುಗಡೆಗೆ ಮೀಸಲಾಗಿರಿಸಿರುವ ಜಾಗದಲ್ಲಿ ನಿಮಿಷಗಟ್ಟಲೇ ನಿಲ್ಲುತ್ತಿವೆ. ತಂಗುದಾಣಕ್ಕೆ ಬಂದು ಹೋಗುವ ಹಾಗೂ ಬಿಎಂಟಿಸಿ ಬಸ್‌ಗಳಿಗೆ ಹತ್ತುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

‘ನಾನು ನಿತ್ಯವೂ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತೇನೆ. ಕೆ.ಆರ್‌.ಪುರದಲ್ಲಿ ಬಿಎಂಟಿಸಿ ಬಸ್‌ ನಿಲುಗಡೆಯಾಗುವ ಜಾಗದಲ್ಲಿ ಇತ್ತೀಚೆಗೆ ಖಾಸಗಿ ಬಸ್ಸೊಂದು 10 ನಿಮಿಷ ನಿಂತುಕೊಂಡಿತ್ತು. ಅದರ ಹಿಂದೆಯೇ ಬಿಎಂಟಿಸಿ ಬಸ್‌, ಖಾಸಗಿ ಬಸ್‌ ಮುಂದೆ ಹೋಗುವುದನ್ನೇ ಕಾಯುತ್ತ ನಿಂತಿತ್ತು’ ಎಂದು ಪ್ರಯಾಣಿಕ ಸತೀಶ್‌ ಹೇಳಿದರು.

‘ಖಾಸಗಿ ಬಸ್‌ನ ಹಿಂದೆ ಬಿಎಂಟಿಸಿ ಬಸ್‌, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತುಕೊಂಡವು. ಮಾರಿಯಮ್ಮ ದೇವಸ್ಥಾನದ ಬಳಿ ವಿಪರೀತ ದಟ್ಟಣೆ ಉಂಟಾಯಿತು. ಖಾಸಗಿ ಬಸ್ಸನ್ನು ಮುಂದಕ್ಕೆ ಚಲಾಯಿಸುವಂತೆ ಹೇಳಿದರೂ ಚಾಲಕ ಕ್ಯಾರೆ ಎನ್ನಲಿಲ್ಲ. ಆತನ ವರ್ತನೆಯಿಂದ ಬೆಂಗಳೂರಿನತ್ತ ಹೊರಟಿದ್ದ ಜನ, 15 ನಿಮಿಷಗಳವರೆಗೆ ದಟ್ಟಣೆಯಲ್ಲಿ ಸಿಲುಕಿ ನಿಂತಲೇ ನಿಲ್ಲಬೇಕಾಯಿತು’ ಎಂದು ವಿವರಿಸಿದರು.

‘ಇದು ಒಂದು ದಿನದ ಕಥೆಯಲ್ಲ. ಎರಡು ವರ್ಷಗಳಿಂದ ನಿತ್ಯ ಬೆಳಿಗ್ಗೆ ಇದೇ ರೀತಿಯಾಗುತ್ತಿದೆ. ಖಾಸಗಿ ಬಸ್‌ಗಳು, ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಇತರೆ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ಅದನ್ನು ಪ್ರಶ್ನಿಸಿದರೆ ಬಸ್‌ಗಳ ಚಾಲಕರು, ಜನರ ಮೇಲೆಯೇ ಹರಿಹಾಯುತ್ತಿದ್ದಾರೆ. ಇವರ ವಿರುದ್ಧ ಸಂಚಾರಿ ಪೊಲೀಸರಾಗಲಿ ಅಥವಾ ಸಾರಿಗೆ ಅಧಿಕಾರಿಗಳಾಗಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಳಲು ತೋಡಿಕೊಂಡರು.

ಇನ್ನೊಬ್ಬ ಪ್ರಯಾಣಿಕ ಆರ್.ಸುಂದರಂ, ‘ನಾನು ನಿತ್ಯವೂ ಕುಂದಲಹಳ್ಳಿ ಗೇಟ್ ಮೂಲಕ ಬಿಎಂಟಿಸಿ ಬಸ್‌ ಹತ್ತಿ ಕೆಲಸಕ್ಕೆ ಹೋಗುತ್ತೇನೆ. ಇತ್ತೀಚೆಗೆ ಖಾಸಗಿ ಬಸ್‌ಗಳ ಹಾವಳಿ ಹೆಚ್ಚಾಗಿದ್ದು, ನಿತ್ಯವೂ ಸಾಕಷ್ಟು ತೊಂದರೆ ಆಗುತ್ತಿದೆ’ ಎಂದರು.

‘ಕುಂದಲಹಳ್ಳಿ ಗೇಟ್‌ನಲ್ಲಿ ಬಿಎಂಟಿಸಿ ಬಸ್ ನಿಲುಗಡೆಗೆಂದು ತಂಗುದಾಣ ನಿರ್ಮಿಸಲಾಗಿದ್ದು, ಅಲ್ಲಿಯೇ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲಾಗುತ್ತದೆ. ಆದರೆ, ಆ ಜಾಗದಲ್ಲಿ ನಿತ್ಯವೂ ಬೆಳಿಗ್ಗೆ ಖಾಸಗಿ ಬಸ್‌ಗಳು ಬಂದು ನಿಲ್ಲುತ್ತಿವೆ. ಆ ಬಸ್‌ನಲ್ಲಿ ಪ್ರಯಾಣಿಕರು ಹತ್ತದಿದ್ದರೂ ಚಾಲಕರು ಜಾಗ ಬಿಟ್ಟು ಕದಲುತ್ತಿಲ್ಲ’ ಎಂದು ಸುಂದರಂ ತಿಳಿಸಿದರು.

‘ನಾನ್ನಷ್ಟೆ ಅಲ್ಲದೇ, ನಮ್ಮ ಭಾಗದ ಪ್ರತಿಯೊಬ್ಬ ಪ್ರಯಾಣಿಕರು ಖಾಸಗಿ ಬಸ್‌ಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಟ್ವಿಟರ್‌ ಮೂಲಕ ಬೆಂಗಳೂರು ಸಂಚಾರ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಹೇಳಿದರು.

ಸುಂದರಂ ಅವರ ದೂರಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು, ‘ನಿಮ್ಮ ಸಮಸ್ಯೆ ಅರ್ಥವಾಗಿದೆ. ಖಾಸಗಿ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಠಾಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಖಾಸಗಿ ಬಸ್‌ ನಿಲ್ದಾಣ ಪ್ರಸ್ತಾವ ನನೆಗುದಿಗೆ

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಖಾಸಗಿ ಬಸ್‌ಗಳಿಗೆ ನಗರದ ಹೊರಭಾಗದಲ್ಲೇ ನಿಲ್ದಾಣ ನಿರ್ಮಿಸುವ ಬಗ್ಗೆ ಸಂಚಾರ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವ ಕಸದ ಬುಟ್ಟಿ ಸೇರಿದೆ.

ಸಾರಿಗೆ ಇಲಾಖೆಯ ನೀಡಿರುವ ಸ್ಟೇಟ್ ಹಾಗೂ ಕಾಂಟ್ರಾಕ್ಟ್‌ ಕ್ಯಾರೇಜ್‌ ಪರವಾನಗಿ ಪಡೆದಿರುವ ಖಾಸಗಿ ಬಸ್‌ಗಳು, ಎರಡು ನಿರ್ದಿಷ್ಟ ಪಾಯಿಂಟ್‌ಗಳ ನಡುವೆ ಸಂಚರಿಸಬೇಕೆಂಬ ನಿಯಮವಿದೆ. ಈ ನಿಯಮವನ್ನು ಉಲ್ಲಂಘಿಸುತ್ತಿರುವ ಖಾಸಗಿ ಬಸ್‌ನವರು, ತಮ್ಮಿಷ್ಟದಂತೆ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ.

ಈ ವರ್ತನೆಯಿಂದ ನಗರದಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ಹೊತ್ತು ವಿಪರೀತ ದಟ್ಟಣೆ ಉಂಟಾಗುತ್ತಿದೆ. ಆ ಬಗ್ಗೆ ಸಮೀಕ್ಷೆ ನಡೆಸಿದ್ದ ಸಂಚಾರ ಪೊಲೀಸರು, ‘ನಗರದ ಹೊರವಲಯದಲ್ಲೇ ಖಾಸಗಿ ಬಸ್‌ಗಳನ್ನು ನಿಲ್ಲಿಸಲು ನಿಲ್ದಾಣ ನಿರ್ಮಿಸಿ. ಅದರಿಂದ ದಟ್ಟಣೆ ಸ್ವಲ್ಪ ಕಡಿಮೆಯಾಗುತ್ತದೆ’ ಎಂದು ಪ್ರಸ್ತಾವವೊಂದನ್ನು ಸಿದ್ಧಪಡಿಸಿ ಸಾರಿಗೆ ಇಲಾಖೆಗೆ ನೀಡಿದ್ದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಪ್ರಸ್ತಾವದ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಪ್ರಸ್ತಾವ ಮಾತ್ರ ಅಂಗೀಕಾರವಾಗಿಲ್ಲ.

‘ಸಮಸ್ಯೆ ಪರಿಹಾರಕ್ಕೆ ಕ್ರಮ’

‘ಕೆ.ಆರ್.ಪುರದ ನಿಲ್ದಾಣ ಇಕ್ಕಟ್ಟಿನ ಸ್ಥಳದಲ್ಲಿದ್ದು, ಹೀಗಾಗಿ ದಟ್ಟಣೆ ಉಂಟಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಪ್ರಯಾಣಿಕರು ಹಾಗೂ ವಾಹನಗಳ ಸವಾರರು ಕಿರಿರಿಕಿ ಅನುಭವಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ನಿಲ್ದಾಣವನ್ನು ಸ್ಥಳಾಂತರಿಸಬೇಕು’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಜಗದೀಶ್ ತಿಳಿಸಿದರು.

‘ತಿಂಗಳ ಹಿಂದೆ ತಾತ್ಕಾಲಿಕವಾಗಿ ನಿಲ್ದಾಣವನ್ನು ಸ್ಥಳಾಂತರಿಸಲಾಗಿತ್ತು. ಆದರೆ, ದೂರವೆಂಬ ಕಾರಣಕ್ಕೆ ಪ್ರಯಾಣಿಕರು ಅಲ್ಲಿಗೆ ಬರಲಿಲ್ಲ. ಬಸ್‌ಗಳೂ ಸುಳಿಯಲಿಲ್ಲ. ಹೀಗಾಗಿ, ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ನಿಲ್ದಾಣ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT