ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಸ್ಥಗಿತಗೊಳ್ಳುತ್ತಿವೆ ಖಾಸಗಿ ಕೇಂದ್ರ

ಹಂಚಿಕೆಯಾದ ಡೋಸ್‌ಗಳಲ್ಲಿ ಅರ್ಧದಷ್ಟೂ ಖರೀದಿಸದ ಆಸ್ಪತ್ರೆಗಳು
Last Updated 8 ಸೆಪ್ಟೆಂಬರ್ 2021, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಲಸಿಕೆಯು ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಹಿಂದೇಟು ಹಾಕಲಾರಂಭಿಸಿವೆ. ಈಗಾಗಲೇ ಬೆಂಗಳೂರಿನ ಶೇ 50ಕ್ಕೂ ಅಧಿಕ ಕೇಂದ್ರಗಳು ಲಸಿಕೆ ವಿತರಣೆ ಸ್ಥಗಿತಗೊಳಿಸಿವೆ.

ಕೋವಿಡ್‌ನ ಸಂಭಾವ್ಯ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕಾ ಅಭಿಯಾನಕ್ಕೆ ವೇಗ ನೀಡಲಾಗಿದೆ. ನಗರದಲ್ಲಿ ಎರಡು ವಾರಗಳಿಂದ ದಿನ
ವೊಂದಕ್ಕೆ ಲಕ್ಷಕ್ಕೂ ಅಧಿಕ ಡೋಸ್‌ಗಳನ್ನು ವಿತರಿಸಲಾಗು
ತ್ತಿದೆ. ಸದ್ಯ 500ಕ್ಕೂ ಅಧಿಕ ಸರ್ಕಾರಿ ಹಾಗೂ 300ಕ್ಕೂ ಅಧಿಕ ಖಾಸಗಿ ಕೇಂದ್ರಗಳಲ್ಲಿ 18 ವರ್ಷ ಮೇಲ್ಪ
ಟ್ಟವರಿಗೆ ಲಸಿಕೆ ಒದಗಿಸಲಾಗುತ್ತಿದೆ.

ಕಳೆದ ಜ.16ರಿಂದ ಲಸಿಕಾ ಅಭಿಯಾನ ಪ್ರಾರಂಭಿಸಿದ ಸರ್ಕಾರ, ಆರಂಭಿಕ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಹಂಚಿಕೆ ಮಾಡಿತ್ತು. ₹ 100 ಸೇವಾ ಶುಲ್ಕ ಪಡೆಯುವಂತೆ ಹೇಳಿತ್ತು. ನಂತರ ಸರ್ಕಾರಿ ಕೇಂದ್ರಗಳಲ್ಲಿ ಜನದಟ್ಟಣೆ ಕಾಣಿಸಿಕೊಳ್ಳುತ್ತಿದ್ದಂತೆ ಕಂಪನಿಗಳಿಂದ ನೇರವಾಗಿ ಖರೀದಿಸಿ, ವಿತರಿ
ಸಲು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿತ್ತು.

ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಲಸಿಕೆಗೆ ದಿಢೀರ್ ಬೇಡಿಕೆ ಹೆಚ್ಚಿದ್ದರಿಂದ ಖಾಸಗಿ ಆಸ್ಪತ್ರೆಗಳು ವಿವಿಧ ಕಾರ್ಪೋರೇಟ್ ಕಂಪನಿಗಳು ಹಾಗೂ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಲಸಿಕೆ ವಿತರಿಸಿದ್ದವು. ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಘೋಷಿಸಿದ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ತೆರಳುವವರ ಸಂಖ್ಯೆ ಇಳಿಮುಖವಾಗಿದೆ.

ಪ್ರಾರಂಭಿಕ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು 600ಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ವಿತರಿಸಿದ್ದವು. ಬಳಿಕ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಸಣ್ಣ ಆಸ್ಪತ್ರೆಗಳು ಹಿಂದೆ ಸರಿದಿದ್ದವು. ಎರಡು ತಿಂಗಳಿ
ನಿಂದ ಲಸಿಕೆ ಪಡೆಯಲು ಕೇಂದ್ರಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಮಧ್ಯಮ ಗಾತ್ರದ ಆಸ್ಪತ್ರೆಗಳೂ ಲಸಿಕೆ ವಿತರಣಾ ಅಭಿಯಾನದಿಂದ ಹಿಂದೆ ಸರಿಯಲಾರಂಭಿಸಿವೆ.

ದೊಡ್ಡ ಆಸ್ಪತ್ರೆಗಳು ಆದ್ಯತೆ: ‘ಮಣಿಪಾಲ್, ನಾರಾಯಣ ಹೆಲ್ತ್ ಸೇರಿದಂತೆಕೆಲ ಪ್ರಮುಖ ಆಸ್ಪತ್ರೆಗಳು ಮಾತ್ರ ನಿಯಮಿತವಾಗಿ ಲಸಿಕೆ ಖರೀದಿಸಿ, ವಿತರಿಸುತ್ತಿವೆ. ಹಣ ಪಾವತಿಸಬೇಕಾಗಿರುವುದರಿಂದ ಲಸಿಕೆ ಪಡೆಯಲು ಬರುವವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಹಾಗಾಗಿ, ಈ ಹಿಂದೆ ಖರೀದಿಸಿದ ಡೋಸ್‌ಗಳು ಹಲವು ಆಸ್ಪತ್ರೆಗಳಲ್ಲಿ ಹಾಗೆಯೇ ಉಳಿದಿವೆ.ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳು ಲಸಿಕೆ ಖರೀದಿಗೆ ನಿರಾಸಕ್ತಿ ತೋರುತ್ತಿವೆ. ಕೆಲವೆಡೆ ಲಸಿಕೆ ವಿತರಣೆ ಸ್ಥಗಿತವಾಗುತ್ತಿದೆ’ ಎಂದುಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

‘ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಹಂಚಿಕೆ ಮಾಡಿ, ಸೇವಾ ಶುಲ್ಕ ಮಾತ್ರ ಪಡೆಯಲು ಅವಕಾಶ ನೀಡಿದ್ದರೆ ಲಸಿಕಾ ಅಭಿಯಾನಕ್ಕೆ ಇನ್ನಷ್ಟು ವೇಗ ದೊರೆಯುತ್ತಿತ್ತು. ಸರ್ಕಾರಿ ಕೇಂದ್ರಗಳ ಮುಂದೆ ಜನದಟ್ಟಣೆಯೂ ತಪ್ಪುತ್ತಿತ್ತು.ಆದರೆ, ಸರ್ಕಾರ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಈಗ ನಮ್ಮ ಬಳಿ ಲಸಿಕೆಯಿದ್ದರೂ ಹೆಚ್ಚಿನ ಹಣ ಪಾವತಿಸಬೇಕೆಂದು ಜನರು ಬರುತ್ತಿಲ್ಲ’ ಎಂದುಫನಾದ ಕಾರ್ಯದರ್ಶಿ ಡಾ. ರಾಜಶೇಖರ್ ವೈ.ಎಲ್. ವಿವರಿಸಿದರು.

ಹಂಚಿಕೆಯಲ್ಲಿ ಶೇ 40ರಷ್ಟು ಖರೀದಿ

ಕೇಂದ್ರ ಸರ್ಕಾರವು ಜುಲೈ ತಿಂಗಳಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 60 ಲಕ್ಷ ಡೋಸ್‌ಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಶೇ 25ರಷ್ಟು ನಿಗದಿಪಡಿಸಲಾಗಿತ್ತು. ಖರೀದಿಸಬೇಕಾದ 15 ಲಕ್ಷ ಡೋಸ್‌ಗಳಲ್ಲಿ 7.20 ಲಕ್ಷ ಡೋಸ್‌ಗಳನ್ನು ಮಾತ್ರ ಖರೀದಿಸಿದ್ದವು. ಆಗಸ್ಟ್‌ ತಿಂಗಳಲ್ಲಿ ಹಂಚಿಕೆಯಾದ ಡೋಸ್‌ಗಳಲ್ಲಿ ಖಾಸಗಿ ಆಸ್ಪತ್ರೆಗಳು ಶೇ 40ರಷ್ಟು ಡೋಸ್‌ಗಳನ್ನು ಮಾತ್ರ ಖರೀದಿಸಿವೆ.

ನಗರ ಕೋವಿಡ್ ಲಸಿಕೆಯ ಅಂಕಿ–ಅಂಶ

ಲಸಿಕೆ ನೀಡುತ್ತಿರುವ ಖಾಸಗಿ ಕೇಂದ್ರಗಳು‌:312

ಲಸಿಕೆ ನೀಡುತ್ತಿರುವ ಸರ್ಕಾರಿ ಕೇಂದ್ರಗಳು:571

ಈವರೆಗೆ ನೀಡಲಾದ ಲಸಿಕೆಯ ಡೋಸ್‌ಗಳು:1.17 ಕೋಟಿ

ಮೊದಲ ಡೋಸ್ ಪಡೆದವರು:83.87 ಲಕ್ಷ

ಎರಡೂ ಡೋಸ್ ಪೂರ್ಣಗೊಳಿಸಿದವರು:34.05 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT