ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಸಿಬ್ಬಂದಿ ನೇಮಿಸಿಕೊಂಡ ಅಬಕಾರಿ ಇನ್‌ಸ್ಪೆಕ್ಟರ್‌ಗಳು

ಲೋಕಾಯುಕ್ತ ದಾಳಿ ವೇಳೆ ಹಲವು ಕಚೇರಿಗಳಲ್ಲಿ ಪತ್ತೆ– ದಾಖಲೆಗಳಿಲ್ಲದ ಮದ್ಯ, ಗಾಂಜಾ ವಶ
Published : 25 ಸೆಪ್ಟೆಂಬರ್ 2024, 21:12 IST
Last Updated : 25 ಸೆಪ್ಟೆಂಬರ್ 2024, 21:12 IST
ಫಾಲೋ ಮಾಡಿ
Comments

ಬೆಂಗಳೂರು: ಅಬಕಾರಿ ಕಚೇರಿಗಳಿಗೆ ದಾಳಿ ಮಾಡಿರುವ ಲೋಕಾಯುಕ್ತವು ಪರಿಶೀಲನೆ ಮುಂದುವರಿಸಿದಾಗ ಹಲವು ಕಚೇರಿಗಳಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ಗಳು ಖಾಸಗಿ ವ್ಯಕ್ತಿಗಳನ್ನು ಸಹಾಯಕರಾಗಿ ಅನಧಿಕೃತವಾಗಿ ನೇಮಿಸಿಕೊಂಡಿರುವುದು ಪತ್ತೆಯಾಗಿದೆ.

ಚಂದಾಪುರದ ನಾಲ್ವರು ಅಬಕಾರಿ ಇನ್‌ಸ್ಪೆಕ್ಟರ್‌ಗಳು ನಾಲ್ವರು ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ತಿಂಗಳಿಗೆ ₹18 ಸಾವಿರದಿಂದ ₹20 ಸಾವಿರದವರೆಗೆ ಪಾವತಿಸುತ್ತಿದ್ದರು. ಒಬ್ಬ ಚಾಲಕನನ್ನು ಕೂಡ ನೇಮಿಸಿಕೊಂಡು, ತಿಂಗಳಿಗೆ ₹18 ಸಾವಿರ ನೀಡುತ್ತಿದ್ದರು ಎಂಬುದು ಶೋಧದಲ್ಲಿ ಕಂಡುಬಂದಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಕೋರಮಂಗಲ ಅಬಕಾರಿ ಇನ್‌ಸ್ಪೆಕ್ಟರ್‌ಗಳು ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಂಡು ಪ್ರತಿ ತಿಂಗಳು ₹20 ಸಾವಿರವನ್ನು ಫೋನ್‌ ಪೇ ಮೂಲಕ ಪಾವತಿಸುತ್ತಿದ್ದರು. ಯಲಹಂಕ–ಗೋಕುಲ ಅಬಕಾರಿ ಕಚೇರಿಯಲ್ಲಿಯೂ ಖಾಸಗಿ ವ್ಯಕ್ತಿಯನ್ನು ಇನ್‌ಸ್ಪೆಕ್ಟರ್‌ಗಳು ನೇಮಿಸಿಕೊಂಡಿದ್ದರು. ಬನಶಂಕರಿ ಅಬಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳನ್ನು ಕಂಪ್ಯೂಟರ್‌ ಆಪರೇಟರ್‌ಗಳನ್ನಾಗಿ ನೇಮಿಸಿಕೊಂಡು ಅಬಕಾರಿ ಇನ್‌ಸ್ಪೆಕ್ಟರ್ ವೇತನ ನೀಡುತ್ತಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ತನಿಖಾ ಸಂಸ್ಥೆಯ ತಂಡಗಳು ಏಕಕಾಲಕ್ಕೆ ದಾಳಿ ಮಾಡಿ, ಶೋಧ ನಡೆಸಿದಾಗ ವೇಳೆ ಇವೆಲ್ಲ ಪತ್ತೆಯಾಗಿವೆ.

ಚಂದಾಪುರದಲ್ಲಿ ಸಿಬ್ಬಂದಿಯೊಬ್ಬರು ₹500 ಇರುವುದನ್ನು ನಗದು ಘೋಷಣಾ ಪುಸ್ತಕದಲ್ಲಿ ಬರೆದಿದ್ದು, ತಪಾಸಣೆ ಮಾಡಿದಾಗ ₹9,500 ಪತ್ತೆಯಾಗಿದೆ. ಈ ಕಚೇರಿಯಲ್ಲಿ 100ಕ್ಕೂ ಅಧಿಕ ಟೆಟ್ರಾ ಪ್ಯಾಕ್‌ ಮದ್ಯದ ಪ್ಯಾಕೆಟ್‌ಗಳು ದೊರೆತಿವೆ.

ಅಧಿಕಾರಿಗಳು ನಾಪತ್ತೆ:

ಯಲಹಂಕ–ಗೋಕುಲ ಅಬಕಾರಿ ಕಚೇರಿಯಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ ಚಂದ್ರಮೂರ್ತಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದು, ಕಚೇರಿಯಲ್ಲಿ ಇರಲಿಲ್ಲ. ಕರೆ ಮಾಡಿದರೂ ಸ್ವೀಕರಿಸದೇ ಸಂಜೆ 5.15ಕ್ಕೆ ಕಚೇರಿಗೆ ಬಂದಿದ್ದಾರೆ. ಚಲನಾ ಪುಸ್ತಕವನ್ನು ನಿರ್ವಹಿಸಿರಲಿಲ್ಲ. ಬನಶಂಕರಿ ಅಬಕಾರಿ ಕಚೇರಿಗೆ ಅಬಕಾರಿ ಇನ್‌ಸ್ಪೆಕ್ಟರ್‌ ಹಾಜರಾಗಿಲ್ಲ. ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದರು. ಇಂದಿರಾನಗರ ಅಬಕಾರಿ ಕಚೇರಿಯಲ್ಲಿ ಕಡತಗಳ ನಿರ್ವಹಣೆಯೇ ಮಾಡಿರಲಿಲ್ಲ.

ರಾಮಮೂರ್ತಿನಗರ ಅಬಕಾರಿ ಕಚೇರಿಯಲ್ಲಿ ಗಾಂಜಾ ತುಂಬಿದ ಬ್ಯಾಗ್‌, ಮದ್ಯದ ಬಾಟಲ್‌ಗಳು ದೊರೆತಿದ್ದವು. ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ಸಂಖ್ಯೆ, ದಾಖಲೆಗಳು ಇರಲಿಲ್ಲ. ಉಪ ಅಬಕಾರಿ ಅಧೀಕ್ಷಕ ಗೈರು ಹಾಜರಾಗಿದ್ದರು. ಸಹಾಯಕ ಅಬಕಾರಿ ಇನ್‌ಸ್ಪೆಕ್ಟರ್‌ ಹಾಜರಿದ್ದರೂ ಸಹಿ ಮಾಡಿರಲಿಲ್ಲ.

ಹೆಬ್ಬಾಳ ಅಬಕಾರಿ ಕಚೇರಿಯ ಅಲ್ಮೆರಾದಲ್ಲಿ ದಾಖಲೆ ಇಲ್ಲದ ಅನಧಿಕೃತ ಮದ್ಯದ ಬಾಟಲ್‌ಗಳು ಕಂಡುಬಂದಿವೆ. ಕಚೇರಿ ನೌಕರ ತಪಾಸಣೆಗೆ ಸಹಕರಿಸಿಲ್ಲ. ದಾಖಲೆಗಳನ್ನು ನಿರ್ವಹಿಸಿಲ್ಲ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT