ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಸಹಾಯಕ ಕಂದಾಯ ಅಧಿಕಾರಿಗಳಿಗೆ (ಎಆರ್‌ಒ) ತಿಂಗಳೊಳಗೆ ಬಡ್ತಿ ನೀಡಿ, ಸ್ಥಳ ನಿಯೋಜನೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಎಆರ್‌ಒಗಳಾದ ಬಿ.ವಿ.ವೀಣಾ, ಎಸ್.ಎನ್. ವೆಂಕಟೇಶ್, ವಿ. ಮಂಜುನಾಥ ಹಾಗೂ ಟಿ.ಶ್ರೀನಿವಾಸ್ ಮೂರ್ತಿ ಅವರಿಗೆ ವೃಂದ ಮತ್ತು ನೇಮಕಾತಿ (ಸಿಆ್ಯಂಡ್ಆರ್) ನಿಯಮದಂತೆ ಸಹಾಯಕ ಆಯುಕ್ತ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಬಡ್ತಿ ದೊರೆತು 11 ತಿಂಗಳಾದರೂ ಅವರಿಗೆ ಹುದ್ದೆ– ಸ್ಥಳ ನಿಯೋಜನೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ನ್ಯಾಯಮೂರ್ತಿ ಆರ್. ನಟರಾಜ್ ಅವರು ವಿಚಾರಣೆ ನಡೆಸಿ, ನಾಲ್ಕು ಅಧಿಕಾರಿಗಳಿಗೆ ಒಂದು ತಿಂಗಳಲ್ಲಿ ಬಡ್ತಿ ನೀಡಿ, ಹುದ್ದೆ– ಸ್ಥಳ ನಿಯೋಜಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ, ಪಾಲಿಕೆ ಆಡಳಿತದ ಉಪ ಆಯುಕ್ತ ಅವರಿಗೆ ನಿರ್ದೇಶನ ನೀಡಿದ್ದಾರೆ.