ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನು ಮರುಮಂಜೂರಾತಿಗೆ ವಿರೋಧ

Published 1 ಸೆಪ್ಟೆಂಬರ್ 2023, 20:56 IST
Last Updated 1 ಸೆಪ್ಟೆಂಬರ್ 2023, 20:56 IST
ಅಕ್ಷರ ಗಾತ್ರ

ಯಲಹಂಕ: ಗಂಟಿಗಾನಹಳ್ಳಿ ಗ್ರಾಮದಲ್ಲಿ ಬಡವರ ನಿವೇಶನಕ್ಕಾಗಿ ಸರ್ಕಾರದಿಂದ ಮಂಜೂರಾಗಿದ್ದ ಜಾಗವನ್ನು ಅಧಿಕಾರಿಗಳು ಅಕ್ರಮವಾಗಿ ನಿವೃತ್ತ ಸೈನಿಕರ ಸಂಘಕ್ಕೆ ಮರು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು.

ಜಾಗವನ್ನು ಬಡವರ ಮನೆಗಳಿಗೆ ಮತ್ತು ಗ್ರಾಮದ ಉಪಯೋಗಕ್ಕೆ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.

ಸುಮಾರು 1200 ಜನಸಂಖ್ಯೆ ಇರುವ ಗಂಟಿಗಾನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‌ 17, 18 ಮತ್ತು 19ರಲ್ಲಿ ಸುಮಾರು 6 ಎಕರೆ ಸರ್ಕಾರಿ ಜಾಗವಿದೆ. ಈ ಹಿಂದೆ ರಾಜೀವ್ ಗಾಂಧಿ ಆಶ್ರಯ ಅನುದಾನದಡಿಯಲ್ಲಿ ವಸತಿ ಇಲಾಖೆಯಿಂದ 150 ಮನೆಗಳನ್ನು ನಿರ್ಮಿಸಲಾಗಿತ್ತು. ಈ ಮನೆಗಳಲ್ಲಿ ಗ್ರಾಮದ ಬಡಜನರು ವಾಸಿಸುತ್ತಿದ್ದಾರೆ. 94ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕೆಂದು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಈ ಜಮೀನನ್ನು ಮುಖ್ಯ ರಸ್ತೆಯನ್ನೂ ಸೇರಿಸಿ ನಿವೃತ್ತ ಸೈನಿಕರ ವಸತಿ ಸಮುಚ್ಛಯಕ್ಕೆ ಅಕ್ರಮವಾಗಿ ಮರು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಪತಿ ನೇತೃತ್ವದಲ್ಲಿ ಗ್ರಾಮಸ್ಥರು ದೂರಿದರು.

ಗಂಟಿಗಾನಹಳ್ಳಿ ಗ್ರಾಮದ ನಿವಾಸಿ ಸುಶೀಲಮ್ಮ, ರಾಮಮೂರ್ತಿ ಮತ್ತಿತರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮದ ಸರ್ಕಾರಿ ಜಾಗದಲ್ಲಿ ದೇವಸ್ಥಾನ, ರಾಜಕಾಲುವೆ, ನೀರಿನ ಮೂಲಗಳು ಹಾಗೂ ಸ್ಮಶಾನವಿದೆ.  ತಲತಲಾಂತರದಿಂದ ಗ್ರಾಮಸ್ಥರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಬಗ್ಗೆ ಮತ್ತು ಈಗಾಗಲೇ ನೀಡಿರುವ ನಿವೇಶಗಳು ಹಾಗೂ ಶಾಲೆ, ಸ್ಮಶಾನ ಮತ್ತಿತರ ಗ್ರಾಮದ ಅನುಕೂಲಕ್ಕಾಗಿ ಜಾಗವನ್ನು ಮೀಸಲಿಡಬೇಕೆಂದು ಈ ಹಿಂದೆ ಗ್ರಾಮಸ್ಥರು ಸಲ್ಲಿಸಿದ್ದ ಮನವಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಲಾಗಿದೆ ಎಂದು ಪಿಡಿಒ ಪೂಣಚ್ಚ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT