ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ನಿಷೇಧ: ಅ. 2 ಡೆಡ್‌ಲೈನ್‌

Last Updated 30 ಜನವರಿ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: 'ಮದ್ಯ ನಿಷೇಧ'ಕ್ಕೆ ಒತ್ತಾಯಿಸಿ ಚಿತ್ರದುರ್ಗದಿಂದ ನಗರಕ್ಕೆ ಬಂದಿದ್ದ ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮುನ್ನ ಮಲ್ಲೇಶ್ವರದ ಶಾಲಾ ಮೈದಾನದಲ್ಲಿ ಸಮಾವೇಶ ನಡೆಸಿದರು. ಮದ್ಯ ಮಾರಾಟದ ಮೇಲೆ ನಿಷೇಧ ವಿಧಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಣತೊಟ್ಟರು.

ಅ. 2ರೊಳಗೆ ಮದ್ಯ ಮಾರಾಟ ನಿಷೇಧ ಮಾಡದಿದ್ದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

‘ಮನುಷ್ಯರ ರಕ್ತ ಹೀರುವ ಮದ್ಯವನ್ನು ನಿಷೇಧಿಸದೇ ಸರ್ಕಾರ ಆಟವಾಡುತ್ತಿದೆ.ರಾಜ್ಯದ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಮಹಿಳೆಯರ ನೋವಿಗೆ ಸ್ಪಂದಿಸದಿರುವುದು ಅತ್ಯಂತ ನೋವಿನ ಸಂಗತಿ’ ಎಂದುಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ರಂಗಕರ್ಮಿ ಪ್ರಸನ್ನ, 'ಇಡೀ‌‌ ಸಮಾಜದ ಸ್ವಾಸ್ಥ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಿಮ್ಮ ಬದುಕು ಹಸನಾಗಲು, ಬಂದಿದ್ದೀರಿ. ನಾನೂ ನಿಮ್ಮ ಜತೆ ಹೆಜ್ಜೆ ಹಾಕುವೆ’ ಎಂದು ಹೇಳಿದರು.

ಕಲಾವಿದೆ ಅರಂಧತಿ ನಾಗ್, 'ಬಿಹಾರ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಮದ್ಯ‌ ನಿಷೇಧಿಸಲಾಗಿದೆ. ಅದರಂತೆ ಇಲ್ಲಿಯೂ ನಿಷೇಧ ಮಾಡಬೇಕು.‌ ಮದ್ಯದಿಂದ ಬರೀ ಹೆಣ್ಣುಮಕ್ಕಳಿಗಲ್ಲ, ಇದು ಇಡೀ ಸಮಾಜಕ್ಕೆ‌ ತೊಂದರೆ' ಎಂದು ತಿಳಿಸಿದರು.

ಲೇಖಕಿ ವಿಜಯಾ, ‘ಚಿತ್ರದುರ್ಗದಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದ ತಾಯಂದಿರ ಅಳಲನ್ನು ಮುಖ್ಯಮಂತ್ರಿ ಆಲಿಸದಿರುವುದು ವಿಷಾದನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ಬಿ.ಆರ್.ಪಾಟೀಲ, 'ನಾನು ಕಾಂಗ್ರೆಸ್‌ನಲ್ಲಿದ್ದರೂ ನಿಮ್ಮ ಹೋರಾಟಕ್ಕೆ ಬೆಂಬಲಿಸುತ್ತೇನೆ. ಮದ್ಯ ಮಾರಾಟದ ಮೇಲೆ ನಿಷೇಧ ಹೇರಿದರೆ ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ಸರ್ಕಾರದ ಹೇಳಿಕೆ ಸರಿಯಲ್ಲ' ಎಂದು ಹೇಳಿದರು.

‌ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, 'ಅಕ್ಟೋಬರ್ 2ರೊಳಗೆ ಮದ್ಯ ನಿಷೇಧದ ಆದೇಶ ಹೊರಡಿಸಲೇಬೇಕು. ಇದು ಸರ್ಕಾರಕ್ಕೆ ನಾವು ಕೊಡುತ್ತಿರುವ ಡೆಡ್ ಲೈನ್. ಹೆಣ್ಣುಮಗಳು ಸಾವನ್ನಪ್ಪಿದ್ದರೂ ಸ್ಪಂದಿಸಿಲ್ಲ. ಎಲ್ಲ ಪಕ್ಷದವರೂ ಕರ್ತವ್ಯ ಭ್ರಷ್ಟರು’ ಎಂದು ಕಿಡಿಕಾರಿದರು.

‘ಎಚ್‌.ಡಿ.ದೇವೇಗೌಡ ಅವರಿಗೂ ಮದ್ಯ ನಿಷೇಧದ ಕುರಿತು ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ವಿ.ನಾಗರಾಜು, 'ಭಿಕ್ಷೆ ಕೇಳಲುಮಹಿಳೆಯರು ಬಂದಿಲ್ಲ.‌ ಹೋರಾಟ ವನ್ನು ಕಂಡು ಸುಮ್ಮನಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT