ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್ ತೇಲ್ತುಂಬ್ಡೆ ಬಿಡುಗಡೆಗೆ ಒತ್ತಾಯ

ಒಗ್ಗಟ್ಟಿನಿಂದ ಹೋರಾಡಿದರೆ ವಿರೋಧಿ ಬಲಿಷ್ಠವಾಗಿದ್ದರೂ ಗೆಲ್ಲಬಹುದು: ರಮಾದೇವಿ
Last Updated 12 ಆಗಸ್ಟ್ 2022, 21:14 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆ ಅಡಿ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿರುವ ಆನಂದ್ ತೇಲ್ತುಂಬ್ಡೆ ಸೇರಿ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಶೋಷಿತರ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಒಕ್ಕೊರಲಿನಿಂದ ಒತ್ತಾಯಿಸಿತು.‌

ದಲಿತ ಸಂಘರ್ಷ ಸಮಿತಿ(ಸಂಯೋಜಕ) ಆಯೋಜಿಸಿದ್ದ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಸಭೆಗೆ ಮಂಡಿಸಿದರು. ‘ಹೋರಾಟಗಾರರಾದ ತೀಸ್ತಾ ಸೆಟಲ್‌ವಾಡ್‌, ವರವರ ರಾವ್ ಸೇರಿ ಎಲ್ಲರ ವಿರುದ್ಧದ ಪ್ರಕಣಗಳನ್ನು ವಾಪಸ್ ಪಡೆಯಬೇಕು. ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು. ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು, ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ್ ತೇಲ್ತುಂಬ್ಡೆ, ‘ಭೀಮ ಕೊರೆಗಾಂವ್ ಹೋರಾಟದ 200ನೇ ವರ್ಷದ ನೆನಪಿನ ಕಾರ್ಯಕ್ರಮವನ್ನು ತಡೆಯಲು ನಕ್ಸಲ್ ನಂಟಿನ ಆರೋಪ ಹೊರಿಸಲಾಯಿತು. ಸುಳ್ಳು ಪ್ರಕರಣ ದಾಖಲಿಸಿ ಆನಂದ್ ತೇಲ್ತುಂಬ್ಡೆ ಅವರನ್ನು ಜೈಲಿಗೂ ತಳ್ಳಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ರೀತಿಯ ರಾಜಕೀಯದ ವಿರುದ್ಧ ಸಾಮಾಜಿಕ ಸಂಘಟನೆಗಳು ಬಲಿಷ್ಠಗೊಳ್ಳಬೇಕಿದೆ. ಇದು ಅಂಬೇಡ್ಕರ್ ಅವರ ಆಶಯವೂ ಆಗಿತ್ತು. ಚಳವಳಿ ದುರ್ಬಲ ಆಗಿರುವುದರಿಂದ ಈ ರೀತಿಯ ದಬ್ಬಾಳಿಕೆ ಹೆಚ್ಚಾಗುತ್ತಿದೆ. ವಿರೋಧಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಒಗ್ಗಟ್ಟಿನಿಂದ ಹೋರಾಡಿದರೆ ಮಣಿಸಲು ಸಾಧ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT