ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕೃತ ಟಿ.ಪಿಯಲ್ಲಿ ಪಿ.ಎಸ್‌ ‘ಪ್ರವಾಸ’

ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ನಡೆ ಚರ್ಚೆಗೆ ಗ್ರಾಸ
Published 30 ಡಿಸೆಂಬರ್ 2023, 22:35 IST
Last Updated 30 ಡಿಸೆಂಬರ್ 2023, 22:35 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರ ಆಪ್ತ ಕಾರ್ಯದರ್ಶಿ ಕೆ.ಎ.ಹಿದಾಯತ್‌ ಉಲ್ಲಾ ಅವರು ಸಚಿವರಂತೆಯೇ ಸರ್ಕಾರದ ಅಧಿಕೃತ ಪ್ರವಾಸ ಕಾರ್ಯಕ್ರಮದ
(ಟಿ.ಪಿ) ವೇಳಾಪಟ್ಟಿ ಹಾಕಿಕೊಂಡು, ಪ್ರವಾಸ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.‌

ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ಸಭಾಪತಿ, ಸಭಾಧ್ಯಕ್ಷರು ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ಆಯಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಳುಹಿಸಿ, ಸಭೆ ನಡೆಸಲು ನಿಯಮದಲ್ಲಿ ಅವಕಾಶವಿದೆ. ಆದರೆ, ಸಚಿವರ ಆಪ್ತ ಕಾರ್ಯದರ್ಶಿ ಟಿ.ಪಿ ಹಾಕಿಕೊಂಡು ನಿಯಮಮೀರಿ ಪ್ರವಾಸ ನಡೆಸುತ್ತಿದ್ದಾರೆ.‌

ದಿನೇಶ್‌ ಗುಂಡೂರಾವ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಹೌದು. ಹಿದಾಯತ್‌ ಉಲ್ಲಾ ಅವರ ಡಿ.27ರಿಂದ ಜನವರಿ 1ರ ತನಕದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಪ್ರವಾಸ ಕಾರ್ಯಕ್ರಮದ ವೇಳಾಪಟ್ಟಿ ಹಾಗೂ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಹಿದಾಯತ್‌ ಉಲ್ಲಾ ಅವರು ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಆಗಿದ್ದರು. ದಿನೇಶ್‌ ಗುಂಡೂರಾವ್‌ ಅವರಿಗೆ ಸಚಿವ ಸ್ಥಾನ ಲಭಿಸಿದ ಬಳಿಕ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಹಿದಾಯತ್‌ ಉಲ್ಲಾ ಅವರ ಪ್ರವಾಸ ವೇಳಾಪಟ್ಟಿಯೂ ಸಚಿವರ ಪ್ರವಾಸದ ವೇಳಾಪಟ್ಟಿ ಮಾದರಿಯಲ್ಲೇ ಇದೆ. ಅದರಲ್ಲಿ ನಿರ್ಗಮನ, ಆಗಮನದ ಸಮಯ ನಮೂದಿಸಲಾಗುತ್ತಿದೆ. ಆರೋಗ್ಯ ಸಚಿವರ ವಿಶೇಷಾಧಿಕಾರಿ ಪರವಾಗಿ ಎಂಬ ಮುದ್ರೆ ಹಾಕಿ ಸಂಬಂಧಿಸಿದ ಅಧಿಕಾರಿಗಳಿಗೆ ಟಿ.ಪಿ ರವಾನೆ ಮಾಡಲಾಗುತ್ತಿದೆ.

ಡಿ.27ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೊ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ, ಡಿ.28ರಂದು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಅಂದೇ ಸಂಜೆ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ, ಡಿ.30ರಂದು ಬೆಳ್ತಂಗಡಿಯಿಂದ ರಸ್ತೆ ಮಾರ್ಗವಾಗಿ ಚಿಕ್ಕಮಗಳೂರಿನ ದಿ ಸಿಲ್ವರ್‌ ಸ್ಕೈ ಹೋಟೆಲ್‌ಗೆ ಆಗಮನ, ಅಂದು ಹೋಟೆಲ್‌ನಲ್ಲಿ ವಿಶ್ರಾಂತಿ ಎಂದು ಟಿ.ಪಿಯಲ್ಲಿ ನಮೂದಿಸಲಾಗಿದೆ. ಡಿ.31ರಂದು ಇದೇ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುವುದಾಗಿ ಟಿ.ಪಿಯಲ್ಲಿ ನಮೂದಿಸಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

‘ಸಚಿವರು ಸಭೆ ನಡೆಸಿ ಅಹವಾಲು ಸ್ವೀಕರಿಸಿದರೆ ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ನೀಡಿ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಅದೇ ಆಪ್ತ ಕಾರ್ಯದರ್ಶಿ ಅಹವಾಲು ಸ್ವೀಕರಿಸಿ ಮಾಡುವುದಾದರೂ ಏನು? ಆರೋಗ್ಯ ಸಚಿವರು ಬೆಂಗಳೂರಿನಲ್ಲಿ ಕೋವಿಡ್‌ ಸಭೆ ನಡೆಸುತ್ತಿದ್ದರೆ ಪಿ.ಎಸ್ ಮಾತ್ರ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಟಿ.ಪಿ ರವಾನೆ ಮಾಡಿದರೆ ಸ್ಥಳೀಯ ಅಧಿಕಾರಿಗಳು ಹೆದರಿ ಪ್ರವಾಸಕ್ಕೆ ವ್ಯವಸ್ಥೆ ಮಾಡುತ್ತಾರೆ. ಈ ರೀತಿ ಅಧಿಕೃತ ಟಿ.ಪಿಯಿಂದ ಪ್ರವಾಸದ ಖರ್ಚು ವೆಚ್ಚವನ್ನೂ ಸರ್ಕಾರದ ಲೆಕ್ಕಕ್ಕೆ ಹಾಕಬಹುದು ಎಂಬ ಉಪಾಯವಿದೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಹಿದಾಯತ್‌ ಉಲ್ಲಾ ಅವರನ್ನು ಸಂಪರ್ಕಿಸಿದರೂ ಅವರು ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT