ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ಅಕ್ರಮ: ಭದ್ರತಾ ಕೊಠಡಿಗೆ ನಿವೃತ್ತ ನ್ಯಾಯಮೂರ್ತಿ ಭೇಟಿ

Published : 9 ನವೆಂಬರ್ 2023, 15:39 IST
Last Updated : 9 ನವೆಂಬರ್ 2023, 15:39 IST
ಫಾಲೋ ಮಾಡಿ
Comments

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗ, ಪೊಲೀಸ್ ನೇಮಕಾತಿ ವಿಭಾಗದ ಭದ್ರತಾ ಕೊಠಡಿಗೆ (ಸ್ಟ್ರಾಂಗ್‌ ರೂಮ್) ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಸಿಐಡಿ ಕಚೇರಿ ಆವರಣದಲ್ಲಿರುವ ಭದ್ರತಾ ಕೊಠಡಿ ಪರಿಶೀಲಿಸಿದ ಬಿ. ವೀರಪ್ಪ ಅವರು, ಉತ್ತರ ಪ್ರತಿಗಳ ಸಂಗ್ರಹ ಹಾಗೂ ಅವುಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಡಿಜಿಪಿಗಳಾದ ಕಮಲ್ ಪಂತ್ ಹಾಗೂ ಎಂ.ಎ. ಸಲೀಂ ಅವರಿಂದ ಮಾಹಿತಿ ಪಡೆದುಕೊಂಡರು. ಉತ್ತರ ಪತ್ರಿಕೆ ಸಂಗ್ರಹ ಸಂದರ್ಭದಲ್ಲಿ ಕೈಗೊಂಡಿದ್ದ ಭದ್ರತಾ ಕ್ರಮಗಳ ಬಗ್ಗೆಯೂ ತಿಳಿದುಕೊಂಡರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ. ವೀರಪ್ಪ, ‘ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದೆ. ಇದೇ ತಿಂಗಳು ಕೊನೆ ವಾರದಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

‘ದೇಶ ಕಾಯಲು ಸೈನಿಕರು ಎಷ್ಟು ಮುಖ್ಯವೋ, ದೇಶದೊಳಗೆ ಪೊಲೀಸರು ಅಷ್ಟೇ ಮುಖ್ಯ. ಪೊಲೀಸ್ ನೇಮಕಾತಿಯಲ್ಲಿಯೇ ಈ ರೀತಿ ಅಕ್ರಮವಾದರೆ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಇಂಥ ಅಕ್ರಮವನ್ನು ಹೋಗಲಾಡಿಸಲು ಸರಿಯಾದ ಮಾರ್ಗ ಕಂಡುಹಿಡಿಯಲು ವಿಚಾರಣೆ ನಡೆಯುತ್ತಿದೆ’ ಎಂದರು.

‘ಸಾಕ್ಷಿದಾರರು ವಿಚಾರಣೆಗೆ ಹಾಜರಾಗಿದ್ದಾರೆ. ಜೊತೆಗೆ, ಹುದ್ದೆಗೆ ಆಯ್ಕೆಯಾಗಿದ್ದ 300 ಅಭ್ಯರ್ಥಿಗಳು ಪತ್ರ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಅಕ್ರಮವಾಗದಂತೆ ತಡೆಯುವ ನಿಟ್ಟಿನಲ್ಲಿ ವರದಿಯಲ್ಲಿ ಶಿಫಾರಸುಗಳನ್ನು ಉಲ್ಲೇಖಿಸಲಾಗುವುದು’ ಎಂದು ಹೇಳಿದರು.

545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಸಿಐಡಿ ಈಗಾಗಲೇ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲು ರಾಜ್ಯ ಸರ್ಕಾರ ಆಯೋಗ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT