ಶನಿವಾರ, ಫೆಬ್ರವರಿ 27, 2021
28 °C
ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್‌ಸಿ–ಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್) ಸಮಗ್ರ ತಿದ್ದುಪಡಿ ತರಲು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಮತ್ತು ಆದಿ ಜಾಂಬವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಂಬುದ್ವೀಪ ಸಿದ್ದರಾಜು ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೌರ್ಯ ವೃತ್ತದ ತನಕ ಮೆರವಣಿಗೆ ನಡೆಸಲಾಯಿತು.

ಸುಪ್ರೀಂ ಕೋರ್ಟ್‌ ಆದೇಶವೊಂದನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಈ ಕಾಯ್ದೆಯ ಉದ್ದೇಶವನ್ನೇ ಬುಡಮೇಲು ಮಾಡುತ್ತಿದ್ದಾರೆ. ಪಿಟಿಸಿಎಲ್‌ ಕಾಯ್ದೆಯಡಿ ದಲಿತರಿಗೆ ದೊರಕಬೇಕಾದ ನ್ಯಾಯ ಸಿಗುತ್ತಿಲ್ಲ. ದಲಿತರ ಸಾವಿರಾರು ಎಕರೆ ಜಮೀನು ಕಾನೂನುಬಾಹಿರವಾಗಿ ಬಲಾಡ್ಯರ ಪಾಲಾಗುತ್ತಿದೆ. ಹೀಗಾಗಿ ನಿಯಮಾವಳಿಗಳಿಗೆ ಸಮಗ್ರ ತಿದ್ದುಪಡಿ ಅಗತ್ಯವಿದೆ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ದಲಿತರ ಏಳಿಗೆಗಾಗಿ ಸ್ಥಾಪಿಸಿರುವ ನಿಗಮಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಿರಂತರವಾಗಿ ನಡೆಯುತ್ತಿದೆ. ಏಜೆಂಟರನ್ನು ಜೈಲಿಗೆ ತಳ್ಳಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ಕಾಯ್ದೆಯೊಂದನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಕೂಡ ಪ್ರತಿಭಟನೆಗೆ ಸಾಥ್ ನೀಡಿ, ‘ಸಮುದಾಯದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಈ ಸಂಬಂಧ ಸದನದಲ್ಲಿ ಮಾತನಾಡಲು ಸಮಯ ಕೇಳಲಾಗಿತ್ತು. ಆದರೆ, ಅದಕ್ಕೆ ಅವಕಾಶ ಸಿಕ್ಕಿಲ್ಲ. ಮುಂದಿನ ಬಾರಿ ಸದನದಲ್ಲಿ ಪ್ರಸ್ತಾಪಿಸುವೆ’ ಎಂದು ಹೇಳಿದರು.

ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ‘ಸಮಸ್ಯೆಯ ಗಂಭೀರತೆ ಅರ್ಥವಾಗಿದೆ. ಈ ಸಂಬಂಧ ಚರ್ಚಿಸಲು ಶೀಘ್ರವೇ ಸಮುದಾಯದ ಮುಖಂಡರ ಸಭೆ ಕರೆಯಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು