ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪಿಯುಸಿ | ವಿಜ್ಞಾನ ವಿಭಾಗಕ್ಕೆ ಶೇ 98, ವಾಣಿಜ್ಯಕ್ಕೆ ಶೇ 95 ಕಟ್‌ ಆಫ್‌

ಪ್ರಥಮ ಪಿಯುಸಿಗೆ ದಾಖಲಾತಿ ಪ್ರಕ್ರಿಯೆ* ಮೊದಲ ಪಟ್ಟಿ ಬಿಡುಗಡೆ
Last Updated 17 ಆಗಸ್ಟ್ 2020, 20:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಸೋಮವಾರ ಮೊದಲ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದು, ಕಟ್‌ ಆಫ್‌ ಅಂಕಗಳನ್ನು ಪ್ರಕಟಿಸಿವೆ. ನಗರದ ಹೊರವಲಯದಲ್ಲಿರುವ ಕಾಲೇಜುಗಳು ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿದ್ದರೆ, ನಗರದ ಪ್ರಮುಖ ಖಾಸಗಿ ಕಾಲೇಜುಗಳ ವಾಣಿಜ್ಯ ವಿಭಾಗದಲ್ಲಿ ಸರಾಸರಿ ಶೇ 90ರಿಂದ ಶೇ 95, ವಿಜ್ಞಾನ ವಿಭಾಗ ಪ್ರವೇಶಕ್ಕೆ ಶೇ 95ರಿಂದ ಶೇ 98ರವರೆಗೆ ಕಟ್‌ ಆಫ್‌ ಅಂಕಗಳನ್ನು ನಿಗದಿ ಪಡಿಸಲಾಗಿದೆ.

ಪಿಇಎಸ್‌ ಕಾಲೇಜು, ಜೈನ್, ಎಂಇಎಸ್‌, ಮೌಂಟ್‌ ಕಾರ್ಮೆಲ್, ಚೈತನ್ಯ, ನಾರಾಯಣ, ವಿದ್ಯಾಮಂದಿರ ಮತ್ತಿತರ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗಕ್ಕೆ ಹೆಚ್ಚು ಬೇಡಿಕೆ ಇದ್ದು, ಶೇ 97ರಿಂದ ಶೇ 98ರವರೆಗೆ ಕಟ್‌ ಆಫ್‌ ಅಂಕಗಳನ್ನು ನಿಗದಿ ಮಾಡಲಾಗಿದೆ. ಶೇ 98ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿದೆ.

ಕುಮಾರನ್ಸ್‌, ನ್ಯಾಷನಲ್‌ ಕಾಲೇಜು, ವಿಜಯ, ಆಕ್ಸ್‌ಫರ್ಡ್‌, ಶೇಷಾದ್ರಿಪುರ, ಕ್ರೈಸ್ಟ್‌ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗದ ಕಟ್‌ ಆಫ್‌ ಅನ್ನು ಶೇ 95ಕ್ಕೆ ನಿಗದಿ ಮಾಡಲಾಗಿದೆ. ವಿಜ್ಞಾನ ವಿಭಾಗವನ್ನು ಶೇ 90ರಿಂದ ಶೇ 95ರವರೆಗೆ ಕಟ್‌ ಮಾಡಲಾಗಿದೆ.

ನಗರದ ಕೆಲವು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಮೊದಲ ಆಯ್ಕೆಪಟ್ಟಿ ಪ್ರಕಟಕ್ಕೂ ಮುನ್ನವೇ ಎಲ್ಲ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ‘ಸೀಟುಗಳಿಲ್ಲ, ಪ್ರಾಚಾರ್ಯರಿಗೆ ತೊಂದರೆ ಕೊಡಬೇಡಿ’ ಎಂಬ ಫಲಕಗಳನ್ನು ನೋಡಿ ಪೋಷಕರು ಹಿಂದಿರುಗುತ್ತಿದ್ದಾರೆ.

ನಗರದ ಹೊರವಲಯದ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶೇ 10ರಷ್ಟು ಸೀಟುಗಳು ಭರ್ತಿಯಾಗಿಲ್ಲ.

‘ಸರ್ಕಾರದ ಮಾರ್ಗಸೂಚಿಯಂತೆಯೇ ದಾಖಲಾತಿ ಪ್ರಕ್ರಿಯೆ ನಡೆಸುತ್ತಿದ್ದೇವೆ. ಎಷ್ಟೇ ಅಂಕಗಳು ಬಂದಿದ್ದರೂ ಪ್ರವೇಶ ನೀಡುತ್ತಿದ್ದೇವೆ. ಈವರೆಗೆ ಶೇ 10ರಷ್ಟು ಸೀಟುಗಳು ಭರ್ತಿ ಮಾಡಿದ್ದೇವೆ. ಆದರೆ, ನಗರದ ಹೊರವಲಯದಲ್ಲಿರುವ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿಲ್ಲ’ ಎಂದುಉಳ್ಳಾಲುವಿನಲ್ಲಿರುವ ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಸುಪ್ರೀತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಮಧ್ಯಭಾಗದಲ್ಲಿರುವ ಕಾಲೇಜುಗಳಿಗಿಂತ ಹೊರವಲಯದಲ್ಲಿರುವ ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣವಿರುತ್ತದೆ. ಆದರೆ, ಪೋಷಕರು ಮತ್ತು ವಿದ್ಯಾರ್ಥಿಗಳು ನಿರ್ದಿಷ್ಟ ಕಾಲೇಜುಗಳಲ್ಲಿಯೇ ಪ್ರವೇಶಕ್ಕೆ ಹಾತೊರೆದು ಅವುಗಳ ಬೇಡಿಕೆಯನ್ನು ಹೆಚ್ಚಿಸುತ್ತಿವೆ’ ಎಂದು ಪ್ರಾಚಾರ್ಯರೊಬ್ಬರು ಹೇಳಿದರು.

‘ಸುತ್ತ–ಮುತ್ತ ಚಾಟ್‌ಸ್ಟ್ರೀಟ್, ಚಿತ್ರಮಂದಿರ, ಕಾಫಿ ಡೇ, ಶಾಪಿಂಗ್‌ ಮಾಲ್‌ಗಳು ಇರುವಂತಹ ಕಾಲೇಜುಗಳಿಗೆ ಸೇರಲು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಶಿಕ್ಷಣಕ್ಕಿಂತ ಪ್ರತಿಷ್ಠೆ ಮುಖ್ಯವಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಿ ಕಾಲೇಜುಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಲಕ್ಷಗಟ್ಟಲೇ ಡೊನೇಷನ್‌ ಕಟ್ಟಿ ತಮ್ಮ ಮಕ್ಕಳನ್ನು ಖಾಸಗಿ ಕಾಲೇಜುಗಳಿಗೆ ಸೇರಿಸುವ ಬದಲು, ಸರ್ಕಾರಿ ಕಾಲೇಜಿಗೆ ದಾಖಲಿಸಲು ಪೋಷಕರು ಮುಂದಾಗಬೇಕು’ ಎಂದು ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT