ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಶಿವಾನಂದ ಮೇಲ್ಸೇತುವೆ ಕೆಳಗೆ ‘ಪಬ್ಲಿಕ್‌ ಪ್ಲಾಜಾ’

ನಗರದಲ್ಲಿ ಪ್ರಥಮ ಯೋಜನೆ; ಸೌಲಭ್ಯಗಳ ಹೈಟೆಕ್ ತಾಣ
Published 10 ಜೂನ್ 2023, 0:51 IST
Last Updated 10 ಜೂನ್ 2023, 0:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಶಿವಾನಂದ ಸ್ಟೀಲ್‌ ಮೇಲ್ಸೇತುವೆ ಕೆಳಭಾಗದಲ್ಲಿ ‘ಪಬ್ಲಿಕ್‌ ಪ್ಲಾಜಾ’ ನಿರ್ಮಾಣವಾಗಲಿದೆ. ನಾಗರಿಕರಿಗೆ ಹೈಟೆಕ್‌ ಸೌಲಭ್ಯಗಳನ್ನು ರಸ್ತೆ ಮಧ್ಯೆ ಒದಗಿಸುವ ಆಕರ್ಷಕ ತಾಣವೂ ಇದಾಗಲಿದೆ.

ನಗರದಲ್ಲಿ ಜಂಕ್ಷನ್‌ಗಳ ಸೌಂದರ್ಯೀಕರಣದ ಕಾಮಗಾರಿಗಳು ನಡೆಯುತ್ತಿರುವ ಸಂದರ್ಭದಲ್ಲೇ ಬಿಬಿಎಂಪಿ ಮೇಲ್ಸೇತುವೆ ಕೆಳಗೆ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.

ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳಲ್ಲಿ ಅದರಲ್ಲೂ ಆರಂಭ ಹಾಗೂ ಅಂತ್ಯದ ಪ್ರದೇಶಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು, ಅದನ್ನು ನಾಗರಿಕರ ಬಳಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಯೋಜನೆ ಆರಂಭಿಸಲಾಗಿದೆ. ಪ್ರಥಮವಾಗಿ ಶಿವಾನಂದ ವೃತ್ತದ ಬಳಿಯ ಮೇಲ್ಸೇತುವೆ ಕೆಳಭಾಗದ ಸೌಂದರ್ಯೀಕರಣ ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿರುವ ಬಹುತೇಕ ಮೇಲ್ಸೇತುವೆಗಳ ಕೆಳಭಾಗದಲ್ಲಿ ಸೌಲಭ್ಯಗಳು ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ಆರಂಭ ಮತ್ತು ಅಂತ್ಯದಲ್ಲಿ ಪ್ರವೇಶ ಮುಕ್ತವಾಗಿದ್ದು, ಉಳಿದ ಪ್ರದೇಶದಲ್ಲಿ ಸುರಕ್ಷತೆಗಾಗಿ ಗ್ರಿಲ್‌ ಅಳವಡಿಸಲಾಗುತ್ತದೆ.

ಪ್ರಮುಖ ಸಾರ್ವಜನಿಕ ಪ್ರದೇಶ ಮತ್ತು ಐತಿಹಾಸಿಕ ರಸ್ತೆ, ಟೆಂಡರ್‌ ಶ್ಯೂರ್‌ ರಸ್ತೆ, ವೈಟ್‌ ಟಾಪಿಂಗ್‌ ರಸ್ತೆಗಳ ಅಭಿವೃದ್ಧಿ ಹಾಗೂ ಸೌಂದರ್ಯೀಕರಣದ ಜೊತೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರದ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಯ ಯೋಜನಾ ವಿಭಾಗದ ವತಿಯಿಂದ ಮೇಲ್ಸೇತುವೆ ಸೇರಿದಂತೆ ನಾಲ್ಕು ಜಂಕ್ಷನ್‌ಗಳಲ್ಲಿ ₹10.45 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.

‘ಮೇಲ್ಸೇತುವೆ ಕೆಳಭಾಗವನ್ನು ನಾಗರಿಕ ಸೌಲಭ್ಯಗಳೊಂದಿಗೆ ಉತ್ತಮ ತಾಣವನ್ನಾಗಿಸುವ ಉದ್ದೇಶದಿಂದ ಶಿವಾನಂದ ವೃತ್ತದ ಮೇಲ್ಸೇತುವೆ– ಜಂಕ್ಷನ್‌ನಲ್ಲಿ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ. ಪಾದಚಾರಿಗಳ ನೆಚ್ಚನ ತಾಣವಾಗುವ ನಿರೀಕ್ಷೆ ಇದ್ದು, ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ವಿನಾಯಕ ಸೂಗೂರು ತಿಳಿಸಿದರು.

ಟ್ರಿಲೈಟ್‌ (ರೇಸ್‌ಕೋರ್ಸ್‌) ಜಂಕ್ಷನ್‌, ಆನಂದರಾವ್‌ ವೃತ್ತ, ಬಿಎಚ್‌ಇಲ್‌ ವೃತ್ತ, ಮೈಸೂರು ರಸ್ತೆ.. ಇಲ್ಲಿಯ ಜಂಕ್ಷನ್‌ಗಳನ್ನೂ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದರು.

ಶಿವಾನಂದ ವೃತ್ತ ಮೇಲ್ಸೇತುವೆ ಕೆಳಭಾಗದಲ್ಲಿ ಗ್ರಿಲ್‌ ಅಳವಡಿಕೆ ನಡುವೆ ಅಳವಡಿಸಲಾಗುವ ಆಸನ ವ್ಯವಸ್ಥೆಯ ಮಾದರಿ
ಶಿವಾನಂದ ವೃತ್ತ ಮೇಲ್ಸೇತುವೆ ಕೆಳಭಾಗದಲ್ಲಿ ಗ್ರಿಲ್‌ ಅಳವಡಿಕೆ ನಡುವೆ ಅಳವಡಿಸಲಾಗುವ ಆಸನ ವ್ಯವಸ್ಥೆಯ ಮಾದರಿ
ಶಿವಾನಂದ ವೃತ್ತ ಮೇಲ್ಸೇತುವೆ ಕೆಳಭಾಗದಲ್ಲಿ  ವಿಶ್ರಾಂತಿ ತಾಣದ ಮಾದರಿ
ಶಿವಾನಂದ ವೃತ್ತ ಮೇಲ್ಸೇತುವೆ ಕೆಳಭಾಗದಲ್ಲಿ  ವಿಶ್ರಾಂತಿ ತಾಣದ ಮಾದರಿ
ಮೈಸೂರು ರಸ್ತೆಯಲ್ಲಿರುವ ಬಿಎಚ್‌ಇಎಲ್‌ ವೃತ್ತದ ಮಾದರಿ
ಮೈಸೂರು ರಸ್ತೆಯಲ್ಲಿರುವ ಬಿಎಚ್‌ಇಎಲ್‌ ವೃತ್ತದ ಮಾದರಿ

Cut-off box - ಪಬ್ಲಿಕ್‌ ಪ್ಲಾಜಾದಲ್ಲಿ ಏನು ಸೌಲಭ್ಯ? * ಕಿಯೋಸ್ಕ್‌ ಆಸನಗಳು ವಿಶ್ರಾಂತಿ ತಾಣ ಕುಡಿಯುವ ನೀರು ಮೊಬೈಲ್‌ ಚಾರ್ಚಿಂಗ್‌ ಸ್ಟೇಷನ್‌ ಓದಲು ಸ್ಥಳಾವಕಾಶ. * ಜಂಕ್ಷನ್‌ಗಳಲ್ಲಿ ಬೇಲಿ ಇಲ್ಲದೆ ವಾಹನ ಸಂಚಾರದ ದ್ವೀಪ * ಮಕ್ಕಳ ಆಟದ ತಾಣ ಅಲಂಕಾರಿಕ ಗಿಡಗಳನ್ನು ನೆಟ್ಟು ಪೋಷಣೆ * ಪುರುಷರು ಮಹಿಳೆಯರು ಸೇರಿದಂತೆ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಹೈಟೆಕ್‌ ಶೌಚಾಲಯ * ನೆಲ ದೀಪ ಬೀದಿ ದೀಪ ಅಲಂಕಾರಿಕ ದೀಪಗಳ ಆಕರ್ಷಣೆ * ಆಟೊರಿಕ್ಷಾ ಪಿಕ್‌ಅಪ್‌ ಝೋನ್‌ ಝೀಬ್ರಾ ಕ್ರಾಸಿಂಗ್‌ ಪಾದಚಾರಿ ಸಿಗ್ನಲ್ ರ‍್ಯಾಂಪ್‌.

Cut-off box - ಬಿಎಚ್ಇಎಲ್‌ ವೃತ್ತದಲ್ಲಿ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಮೈಸೂರು ರಸ್ತೆಯ ಬಿಎಚ್ಇಎಲ್‌ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆ ಸ್ಥಾಪಿಸುವ ಯೋಜನೆ ಹೊಂದಲಾಗಿದೆ. ವಿಧಾನಸೌಧದ ನಿರ್ಮಾತೃ ಬೆಂಗಳೂರು ಲೋಕಸಭೆ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಯನ್ನು ಈ ಪ್ರದೇಶದಲ್ಲಿ ಸ್ಥಾಪಿಸಿ ಮಾಹಿತಿ ಫಲಕವನ್ನೂ ಅಳವಡಿಸಲು ಉದ್ದೇಶಿಸಲಾಗಿದೆ. ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಸರ್ಕಾರಕ್ಕೆ ಪತ್ರ ಬರೆದು ಪ್ರತಿಮೆ ಸ್ಥಾಪಿಸಲು ಅನುಮತಿ ಕೋರಿದ್ದಾರೆ. ಇದಲ್ಲದೆ ಹಲವು ಸೌಲಭ್ಯಗಳ ಜೊತೆಗೆ ಚನ್ನಪಟ್ಟಣ ಗೊಂಬೆಗಳ ಪ್ರತಿಕೃತಿಗಳನ್ನೂ ಈ ಜಂಕ್ಷನ್‌ನಲ್ಲಿ ಸ್ಥಾಪಿಸಲಾಗುತ್ತದೆ. ‘ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT