ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಪ್ರಮಾಣದ ಸಾರಿಗೆ ಸೇವೆ ಆರಂಭ: ಬಸ್‌ಗಳಲ್ಲಿ ಎಲ್ಲ ಆಸನ ಭರ್ತಿಗೆ ಅವಕಾಶ

ಎಲ್ಲ ದಿನ ಮೆಟ್ರೊ ರೈಲು ಸೇವೆ
Last Updated 4 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಮೂರನೇ ಹಂತದ ಅನ್‌ಲಾಕ್‌ ಘೋಷಿಸುತ್ತಿದ್ದಂತೆಯೇ, ನಗರದಲ್ಲಿ ಸೋಮವಾರದಿಂದ (ಜುಲೈ 5) ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಆರಂಭವಾಗಲಿದೆ. ಎಲ್ಲ ದಿನಗಳಲ್ಲಿ ಮೆಟ್ರೊ ರೈಲು ಸಂಚರಿಸಿದರೆ, ಶೇ 100ರಷ್ಟು ಆಸನ ಸಾಮರ್ಥ್ಯದ ಅವಕಾಶದೊಂದಿಗೆ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯಲಿವೆ.

ಈ ಮೊದಲು ವಾರಾಂತ್ಯದಲ್ಲಿ ಮೆಟ್ರೊ ರೈಲು ಸೇವೆ ಇರಲಿಲ್ಲ. ಬಿಎಂಟಿಸಿ ಬಸ್‌ಗಳು ಕೂಡ ಶೇ 50ರಷ್ಟು ಆಸನ ಸಾಮರ್ಥದೊಂದಿಗೆ ಸಂಚರಿಸುತ್ತಿದ್ದವು. ಅನ್‌ಲಾಕ್‌ ನಂತರವೂ, ಬಸ್ ಹಾಗೂ ಮೆಟ್ರೊ ರೈಲಿನಲ್ಲಿ ನಿಲುಗಡೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಎರಡೂ ನಿಗಮಗಳು ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿ, ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿವೆ.

ಮೊದಲ ದಿನ ನಾಲ್ಕೂವರೆ ಸಾವಿರ ಬಸ್‌ಗಳು ರಸ್ತೆಗಿಳಿಯಲಿವೆ. ಪ್ರಯಾಣಿಕರ ದಟ್ಟಣೆ ಹೆಚ್ಚಿದರೆ, ಸೇವೆಗಳನ್ನೂ ವಿಸ್ತರಿಸಲಾಗುವುದು. ಸಂಪರ್ಕರಹಿತ ಪಾವತಿಗೆ ಹೆಚ್ಚು ಒತ್ತು ನೀಡಿದ್ದು, ಇದಕ್ಕಾಗಿ ಡಿಜಿಟಲ್ ಟಿಕೆಟಿಂಗ್ (ಕ್ಯೂಆರ್ ಕೋಡ್ ಆಧಾರಿತ) ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 5ರಿಂದ ರಾತ್ರಿ 9ರವರೆಗೆ ಬಸ್‌ ಸೇವೆ ಇರಲಿದೆ ಎಂದು ಬಿಎಂಟಿಸಿ ಹೇಳಿದೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಸಿಬ್ಬಂದಿ ಲಸಿಕೆ ಪಡೆಯುವುದು ಹಾಗೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತರ ಕಾಯ್ದುಕೊಳ್ಳಲು ಸರದಿಯಲ್ಲಿ ಬಸ್ ಹತ್ತುವುದು ಮತ್ತು ಇಳಿಯುವುದು, ಜ್ವರ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಾರದು ಎನ್ನುವುದು ಸೇರಿದಂತೆ ನಿಯಮಗಳನ್ನು ಪಾಲಿಸಬೇಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

13 ತಾಸು ಸೇವೆ: ನಮ್ಮ ಮೆಟ್ರೊ ರೈಲುಗಳು ದಿನದಲ್ಲಿ 13 ತಾಸು ಸಂಚಾರ ನಡೆಸಲಿವೆ. ದಟ್ಟಣೆ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಂದು ಹಾಗೂ ಉಳಿದ ಅವಧಿಯಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯಾಚರಿಸಲಿವೆ. ಶನಿವಾರ, ಭಾನುವಾರ ಮತ್ತು ರಜೆ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲುಗಳ ಸಂಚಾರದ ನಡುವಣ ಅವಧಿಯನ್ನು ಹೆಚ್ಚು–ಕಡಿಮೆ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.

ಮೆಟ್ರೊ ರೈಲು ಸಂಚಾರ ವಿವರ

* ವಾರದ ಎಲ್ಲ ದಿನ ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಸಂಚಾರ

* ದಟ್ಟಣೆ ಅವಧಿಯಲ್ಲಿ 5 ನಿಮಿಷಗಳಿಗೊಂದು ರೈಲು ಸಂಚಾರ

* ಉಳಿದ ಅವಧಿಯಲ್ಲಿ 15 ನಿಮಿಷಕ್ಕೊ‌ಂದು ರೈಲು ಬರಲಿದೆ

* ನಿಂತು ಪ್ರಯಾಣಿಸಲು ಅವಕಾಶವಿಲ್ಲ

* ಮಾಸ್ಕ್ ಧರಿಸುವುದು ಕಡ್ಡಾಯ

ಬಿಎಂಟಿಸಿ ಬಸ್‌ ಸಂಚಾರ ವಿವರ

* ಬೆಳಿಗ್ಗೆ 5ರಿಂದ ರಾತ್ರಿ 9ರವರೆಗೆ ಸಂಚಾರ

* ಮೊದಲ ದಿನ 4,500 ಬಸ್‌ಗಳು ರಸ್ತೆಗಿಳಿಯಲಿವೆ

* ಬಸ್‌ ಒಳಗೆ ನಿಂತು ಪ್ರಯಾಣಿಸಲು ಅವಕಾಶವಿಲ್ಲ

* ಚಾಲಕ–ನಿರ್ವಾಹಕರು ಲಸಿಕೆ ಪಡೆದಿರುವುದು ಕಡ್ಡಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT