ಭಾನುವಾರ, ಏಪ್ರಿಲ್ 11, 2021
29 °C

ಪಿಯು: ಅತಿಥಿ ಉಪನ್ಯಾಸಕರ ನಿಯೋಜನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿ.ಯು ಪರೀಕ್ಷೆ ಮೇ 24ರಿಂದ ಪ್ರಾರಂಭವಾಗಲಿದೆ. ಆದರೆ, ಹೆಚ್ಚು ಉಪನ್ಯಾಸಕರಿಲ್ಲದೆ ಪಠ್ಯಕ್ರಮದಲ್ಲಿರುವ ಎಲ್ಲ ಪಾಠಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

‘ಕಾಯಂ ಉಪನ್ಯಾಸಕರ ಸಂಖ್ಯೆ ಹೆಚ್ಚಾಗಿಲ್ಲ. ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ ಉಪನ್ಯಾಸಕರು ವಾರದ ಮೂರು ದಿನ ಮಾತ್ರ ಪಾಠ ಮಾಡುತ್ತಿದ್ದಾರೆ. ಪರೀಕ್ಷೆ ದಿನಾಂಕ ಈಗಾಗಲೇ ಘೋಷಿಸಲಾಗಿದೆ. ಆದರೆ, ನಿಗದಿತ ಪಠ್ಯಕ್ರಮ ಇನ್ನೂ ಮುಗಿದಿಲ್ಲ’ ಎಂದು ದ್ವಿತೀಯ ಪಿ.ಯು ವಿದ್ಯಾರ್ಥಿಗಳು ಹೇಳಿದರು.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಪಿ.ಯು ಕಾಲೇಜುಗಳಲ್ಲಿ ಮಾತ್ರ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಿಲ್ಲ ಎಂದು ಉಪನ್ಯಾಸಕರೊಬ್ಬರು ಹೇಳಿದರು.

‘ಕಳೆದ ಶೈಕ್ಷಣಿಕ ವರ್ಷದಲ್ಲಿ 3,043 ಅತಿಥಿ ಉಪನ್ಯಾಸಕರು ಕೆಲಸ ಮಾಡಿದ್ದರು. ಈ ನಡುವೆ 1,203 ಕಾಯಂ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಹೀಗಾಗಿ, ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಿಲ್ಲ’ ಎಂದು  ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಎ.ಎಚ್. ನಿಂಗೇಗೌಡ ಹೇಳಿದರು.

‘ಕಾಯಂ ಉಪನ್ಯಾಸಕರಿಗೇ ಎರಡು–ಮೂರು ಕಾಲೇಜುಗಳ ಹೆಚ್ಚುವರಿ ಹೊಣೆ ನೀಡಲಾಗಿದೆ. ವಾರದಲ್ಲಿ ಮೂರು ದಿನ ಒಂದು ಕಾಲೇಜಿನಲ್ಲಿ, ಇನ್ನುಳಿದ ಮೂರು ದಿನ ಬೇರೆ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾರೆ. ಎರಡೂ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ’ ಎಂದು ಅವರು ಹೇಳಿದರು.

‘ಶೈಕ್ಷಣಿಕ ವರ್ಷದ ಅವಧಿಯೂ ಕಡಿತಗೊಂಡಿದೆ. ಕನಿಷ್ಠ ಈ ಶೈಕ್ಷಣಿಕ ವರ್ಷ ಮುಗಿಯುವವರೆಗಾದರೂ ಒಂದು ಸಾವಿರ ಅತಿಥಿ ಉಪನ್ಯಾಸಕರನ್ನು ನಿಯೋಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು