ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯ ಕೊಂದು ಕೆರೆಗೆ ಮೃತದೇಹ ಎಸೆದಿದ್ದವರ ಬಂಧನ

Last Updated 26 ಜನವರಿ 2022, 16:53 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಬಳಿ ಇರುವ ಚಿನ್ನ ಪಡೆದು ಅದಕ್ಕೆ ಬದಲಾಗಿ ಹಣ ನೀಡುವಂತೆ ಚಿನ್ನದ ಕಂಪನಿ ಉದ್ಯೋಗಿಯೊಬ್ಬರನ್ನುಮನೆಗೆ ಕರೆಸಿಕೊಂಡು ಬಳಿಕ ಅವರನ್ನು ಕೊಲೆ ಮಾಡಿ ಮೂಟೆಯೊಳಗೆ ಶವ ಇಟ್ಟು ಕೆರೆಗೆ ಎಸೆದಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕು ಅರಕೆರೆ ಹೋಬಳಿಯ ಮೆಸನಹಳ್ಳಿ ಗ್ರಾಮದ ಮಂಜುನಾಥ್‌ ಯಾನೆ ಮಂಜ (28), ಉತ್ತರಿದುರ್ಗ ಹೋಬಳಿಯ ಉತ್ತರಿ ಗ್ರಾಮದ ಮುನಿರಾಜು ಯಾನೆ ರಾಜ (24) ಬಂಧಿತರು.

‘ಬನಶಂಕರಿ 2ನೇ ಹಂತದ ಸೆರಬಂಡೆಪಾಳ್ಯ 3ನೇ ಮುಖ್ಯರಸ್ತೆಯ ನಿವಾಸಿ ದಿವಾಕರ್‌ (29) ಮೃತ ವ್ಯಕ್ತಿ. ಇವರು ಎಸ್‌.ಎಸ್‌.ಆರ್‌.ಗೋಲ್ಡ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣದ ಅವಶ್ಯಕತೆ ಇದ್ದಿದ್ದರಿಂದ ಆರೋಪಿಗಳು ಗೂಗಲ್‌ನಲ್ಲಿ ಹುಡುಕಿ ಎಸ್‌.ಎಸ್‌.ಆರ್‌.ಗೋಲ್ಡ್‌ ಕಂಪನಿಯ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದರು. ಆ ಸಂಖ್ಯೆಗೆ ಕರೆಮಾಡಿದಾಗ ಸಿಬ್ಬಂದಿಯೊಬ್ಬರು ಆರೋಪಿಗಳಿಗೆ ದಿವಾಕರ್‌ ಅವರ ಮೊಬೈಲ್‌ ಸಂಖ್ಯೆ ನೀಡಿದ್ದರು. ಇದೇ 19ರಂದು ದಿವಾಕರ್‌ಗೆ ಕರೆಮಾಡಿದ್ದ ಆರೋಪಿಗಳು ತಮ್ಮ ಬಳಿ 65 ರಿಂದ 70 ಗ್ರಾಂ ಚಿನ್ನವಿದೆ. ಹಣದ ಅವಶ್ಯಕತೆ ಇರುವುದರಿಂದ ಅದನ್ನು ಅಡವಿಡಲು ನಿರ್ಧರಿಸಿದ್ದೇವೆ. ನೀವು ಮನೆಗೆ ಬಂದು ಅದನ್ನು ಪಡೆದುಕೊಳ್ಳಿ ಎಂದಿದ್ದರು. ಅವರ ಮಾತು ನಂಬಿದ್ದ ದಿವಾಕರ್‌ ಇದೇ 20ರಂದು ತನ್ನ ಪತ್ನಿಯನ್ನು ಜೆ.ಪಿ.ನಗರ 6ನೇ ಹಂತದಲ್ಲಿರುವ ಆದಿತ್ಯ ಗ್ಲೋಬಲ್‌ ಕಚೇರಿ ಬಳಿ ಬಿಟ್ಟು, ಬೈಕ್‌ನಲ್ಲಿ ಸುಂಕದಕಟ್ಟೆಗೆ ಹೋಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ದಿವಾಕರ್‌ ಮನೆಯೊಳಗೆ ಹೋಗುತ್ತಿದ್ದಂತೆ ಆರೋಪಿಗಳು ಹಾಗೂ ಅವರ ಜೊತೆ ಮನೆಯಲ್ಲಿದ್ದ ರಕ್ಷಿತಾ ಎಂಬಾಕೆ ಕತ್ತು ಹಿಸುಕಿ ಕೊಲೆ ಮಾಡಿ ₹5 ಲಕ್ಷ ಹಣ ಕಿತ್ತುಕೊಂಡಿದ್ದಾರೆ. ನಂತರ ಪ್ಲಾಸ್ಟಿಕ್‌ ಚೀಲದಲ್ಲಿ ಮೃತದೇಹ ತುಂಬಿದ್ದಾರೆ. ಬೈಕ್‌ ಹಾಗೂ ಮೃತದೇಹವನ್ನು ಮಾಗಡಿ ರಸ್ತೆಯಲ್ಲಿರುವ ಹೊನ್ನಾಪುರ ಕೆರೆಯಲ್ಲಿ ಬಿಸಾಕಿದ್ದಾರೆ. ಈ ವಿಷಯವನ್ನು ವಿಚಾರಣೆ ವೇಳೆ ತಿಳಿಸಿದ್ದಾರೆ. ಐಷಾರಾಮಿ ಬದುಕು ನಡೆಸಲು ಆರೋಪಿಗಳಿಗೆ ಹಣದ ಅವಶ್ಯಕತೆ ಇತ್ತು. ಹೀಗಾಗಿಯೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದ್ದಾರೆ.

ಮೊಬೈಲ್‌ ಕರೆಯ ಮಾಹಿತಿಯಿಂದ ದೊರೆತ ಸುಳಿವು

‘ದಿವಾಕರ್‌ ಅವರ ಮೊಬೈಲ್‌ ಕರೆಗಳ ಮಾಹಿತಿ ಕಲೆಹಾಕಿ ಪರಿಶೀಲಿಸಲಾಗಿತ್ತು. ಇದೇ 29ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸುಂಕದಕಟ್ಟೆ ಬಳಿ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವುದು ತನಿಖೆಯಿಂದ ಗೊತ್ತಾಗಿತ್ತು. ಬಂಧಿತ ಆರೋಪಿಗಳು ದಿವಾಕರ್‌ಗೆ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದರು. ಹೀಗಾಗಿ ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಕೊಲೆ ಮಾಡಿರುವ ವಿಷಯ ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಮೃತದೇಹವನ್ನು ಕೆರೆಗೆ ಬಿಸಾಡಲು ತೀರ್ಮಾನಿಸಿದ್ದ ಆರೋಪಿಗಳು ದಿವಾಕರ್‌ ಅವರ ಬೈಕ್‌ನಲ್ಲೇ ಶವವನ್ನು ಕೆರೆಗೆ ಸಾಗಿಸಿದ್ದರು. ಕೆಲ ದಿನಗಳ ನಂತರ ಶವ ತೇಲಬಹುದು. ಹಾಗೇನಾದರು ಆದರೆ ತಾವು ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಹೆದರಿ ಶವ ತುಂಬಿದ್ದ ಮೂಟೆಗೆ ಕಲ್ಲು ಕಟ್ಟಿ ಕೆರೆಗೆ ಬಿಸಾಕಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT