ಬುಧವಾರ, ಮಾರ್ಚ್ 22, 2023
33 °C
ಸಾಹಿತಿ ಹಂ.ಪ. ನಾಗರಾಜಯ್ಯ ಬೇಸರ *ಪಿ.ವಿ. ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಕೆ

‘ವಿಶ್ವವಿದ್ಯಾಲಯದಲ್ಲಿ ಹಳಗನ್ನಡಕ್ಕೆ ಗೌಣ ಸ್ಥಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಶ್ವವಿದ್ಯಾಲಯಗಳಲ್ಲಿ ಹಳಗನ್ನಡ, ವಿದ್ವತ್ತು ಹಾಗೂ ಪಾಂಡಿತ್ಯಕ್ಕೆ ಗೌಣ ಸ್ಥಾನ ದೊರೆಯುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಮತ್ತೆ ಪಾಂಡಿತ್ಯವನ್ನು ಪೋಷಿಸುವ ವಾತಾವರಣ ವಿಶ್ವವಿದ್ಯಾಲಯಗಳಲ್ಲಿ ಉಂಟಾಗಲಿ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಆಶಿಸಿದರು. 

ಸಾಹಿತಿ ಪಿ.ವಿ. ನಾರಾಯಣ ಅವರಿಗೆ 80 ವರ್ಷಗಳು ತುಂಬಿದ ಪ್ರಯುಕ್ತ ಡಾ.ಪಿ.ವಿ. ನಾರಾಯಣ ಅಭಿನಂದನಾ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ‘ತಾಯಿ ಬೇರಾದ ಹಳಗನ್ನಡಕ್ಕೆ ಇದು ವಿಷಮ ಕಾಲ. ಹಳಗನ್ನಡವನ್ನು ಜೀವಂತವಾಗಿಡಲು ಹಲವು ವಿದ್ವಾಂಸರು ಶ್ರಮಿಸಿದ್ದಾರೆ. ಅವರಲ್ಲಿ ಪಿ.ವಿ. ನಾರಾಯಣ ಅವರು ಪ್ರಮುಖರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರು ಹಲವು ವಿದ್ವತ್ಪೂರ್ಣ ಕೃತಿಗಳನ್ನು ನೀಡಿದ್ದಾರೆ. ಚಂಪು ಕಾವ್ಯದಲ್ಲಿ ಕೆಲಸ ಮಾಡಿದ್ದರಿಂದ ಅವರಿಗೆ ‘ಚಂಪು ನಾರಾಯಣ’ ಎಂಬ ಗೌರವ ಪದವಿ ನೀಡುತ್ತೇನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಾಹಿತಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ, ‘ಸಾಹಿತ್ಯ ಕ್ಷೇತ್ರದಲ್ಲಿ ನಾರಾಯಣ ಅವರು ಅದ್ಭುತ ಸೇವೆ ಮಾಡಿದ್ದಾರೆ. ನಾಟಕಗಳು, ಕಾವ್ಯಗಳನ್ನು ಅನುವಾದ ಮಾಡಿದರು. ಕನ್ನಡದ ಕೆಲಸಕ್ಕೆ ಯಾವಾಗಲೂ ಪ್ರಥಮವಾಗಿ ನಿಂತವರು ಅವರು’ ಎಂದು ಶ್ಲಾಘಿಸಿದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿ.ವಿ.ನಾರಾಯಣ, ‘ಹಳಗನ್ನಡ ಶ್ರೇಷ್ಠ ಎಂಬುದನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ, ಹಳಗನ್ನಡದಲ್ಲೂ ಶ್ರೇಷ್ಠವಾದದ್ದಿದೆ ಎಂಬುದನ್ನು ಗುರುತಿಸಬೇಕು. ಮೂಲಭೂತವಾದ ಮನುಷ್ಯನ ಭಾವನೆಗಳು, ಆಗುಹೋಗುಗಳು, ನೋವುಗಳು ಎಲ್ಲ ಕಾಲಕ್ಕೂ ಒಂದೇ ಆಗಿರುತ್ತದೆ. ಇದರಲ್ಲಿ ವ್ಯತ್ಯಾಸವಾಗುವುದಿಲ್ಲ’ ಎಂದರು.

ಅಭಿನಂದನಾ ಗ್ರಂಥದ ಸಂಪಾದಕ ಆರ್. ಲಕ್ಷ್ಮೀನಾರಾಯಣ, ‘ನಾರಾಯಣ ಅವರು ನಾಡು–ನುಡಿಗೆ ಅನನ್ಯವಾದ ಕೊಡುಗೆ ನೀಡಿದ್ದಾರೆ. ತಮ್ಮ ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಛಾಪನ್ನು ಅವರು ಮೂಡಿಸಿದ್ದಾರೆ. ವಚನ ಸಾಹಿತ್ಯ ಅವರ ವಿಶೇಷ ಅಧ್ಯಯನ ಕ್ಷೇತ್ರವಾಗಿತ್ತು. ಅವರ ಸಂಶೋಧನೆ ಮತ್ತು ವಿಮರ್ಶೆ ಹೆಚ್ಚಾಗಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ್ದಾಗಿದೆ. ಅವರು ರಚಿಸಿರುವ ನಾಲ್ಕು ನಿಘಂಟುಗಳು ಹಳಗನ್ನಡದಲ್ಲಿನ ಅವರ ತಲಸ್ಪರ್ಶಿ ಪಾಂಡಿತ್ಯಕ್ಕೆ ಸಾಕ್ಷಿ’ ಎಂದು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು