ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಇಲಾಖೆ: ಸಣ್ಣ ಗುತ್ತಿಗೆದಾರರ ಬಿಲ್‌ಗಳಿಗೆ ಮುಕ್ತಿ

ಲೋಕೋಪಯೋಗಿ ಇಲಾಖೆಯಲ್ಲಿ ಹೊಸ ಆದ್ಯತಾ ಸೂತ್ರ ಜಾರಿ
Published 9 ಫೆಬ್ರುವರಿ 2024, 19:12 IST
Last Updated 10 ಫೆಬ್ರುವರಿ 2024, 6:14 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಆದ್ಯತೆ ಮೇಲೆ ಪಾವತಿಸುವ ಹೊಸ ಸೂತ್ರವೊಂದನ್ನು ಲೋಕೋಪಯೋಗಿ ಇಲಾಖೆ ಅಳವಡಿಸಿಕೊಂಡಿದೆ. ಅಪೆಂಡಿಕ್ಸ್‌–ಇ ಅಡಿಯಲ್ಲಿನ ಕಾಮಗಾರಿಗಳ ಬಾಬ್ತು 1,054 ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಕಳೆದ ವಾರ ಏಕಕಾಲದಲ್ಲಿ ಪಾವತಿಸಲಾಗಿದೆ.

ಅಪೆಂಡಿಕ್ಸ್‌–ಇ ಅಡಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳ ನಿರ್ವಹಣೆ ಹಾಗೂ ಸುಧಾರಣೆ ಕಾಮಗಾರಿ ಕೈಗೊಂಡಿದ್ದ 1,945 ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಬಿಲ್‌ಗಳ ಪಾವತಿ ಬಾಕಿ ಇತ್ತು. ಸಣ್ಣ ಗುತ್ತಿಗೆದಾರರು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದರು.

‘ಸಣ್ಣ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಆದ್ಯತೆಯ ಮೇಲೆ ಪಾವತಿಸಲು ಸೂತ್ರವೊಂದನ್ನು ರೂಪಿಸುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ಸಣ್ಣ ಗುತ್ತಿಗೆದಾರರಿಗೆ ಸುಮಾರು ₹ 500 ಕೋಟಿಯಷ್ಟು ಮೊತ್ತದ ಬಿಲ್‌ಗಳನ್ನು ಏಕಕಾಲಕ್ಕೆ ಪಾವತಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಪೆಂಡಿಕ್ಸ್‌–ಇ ಅಡಿಯಲ್ಲಿ ಜಿಲ್ಲಾ ಮುಖ್ಯರಸ್ತೆ ಕಾಮಗಾರಿಗಳನ್ನು ಕೈಗೊಂಡಿದ್ದ 1,585 ಗುತ್ತಿಗೆದಾರರ ಪೈಕಿ 882 ಮತ್ತು ರಾಜ್ಯ ಹೆದ್ದಾರಿಗಳ ಕಾಮಗಾರಿಗಳನ್ನು ಕೈಗೊಂಡಿದ್ದ 360 ಗುತ್ತಿಗೆ್ದಾರರ ಪೈಕಿ 172 ಮಂದಿಯ ಪೂರ್ಣ ಬಿಲ್‌ಗಳನ್ನು ಪಾವತಿಸಲಾಗಿದೆ. 2021, 2022 ಮತ್ತು 2023ರಲ್ಲಿ ಕೈಗೊಂಡಿದ್ದ ಕಾಮಗಾರಿಗಳ ಬಾಬ್ತು ಈ ಎಲ್ಲರಿಗೂ ₹ 1 ಕೋಟಿಗಿಂತ ಕಡಿಮೆ ಮೊತ್ತದ ಬಿಲ್‌ಗಳು ಬಾಕಿ ಇದ್ದವು.

ಲೋಕೋಪಯೋಗಿ ಇಲಾಖೆಯಲ್ಲಿ ಅಪೆಂಡಿಕ್ಸ್‌–ಇ ಅಡಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದ ಸಣ್ಣ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಲ್ಲಿ ಸಮಸ್ಯೆಯಾಗಿತ್ತು. ಆರ್ಥಿಕ ಒತ್ತಡಕ್ಕೆ ಸಿಲುಕಿದ್ದ ಹಲವರು ಸಚಿವರನ್ನು ಭೇಟಿಮಾಡಿ, ಬಿಲ್‌ ಪಾವತಿಯಲ್ಲಿ ಸಣ್ಣ ಗುತ್ತಿಗೆದಾರರಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದರು. ಈ ಕಾರಣದಿಂದ ಹೊಸ ಸೂತ್ರ ಜಾರಿಗೊಳಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುಧಾರಣೆಗೆ ಸೂಚನೆ: ಅಪೆಂಡಿಕ್ಸ್‌–ಇ ಕಾಮಗಾರಿಗಳ ಬಿಲ್ ಪಾವತಿಯಲ್ಲಿನ ಬದಲಾವಣೆ ಬೆನ್ನಲ್ಲೇ, ಉಳಿದ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲೂ ಬಾಕಿ ಬಿಲ್‌ ಪಾವತಿಯಲ್ಲಿ ಸುಧಾರಣೆ ತರುವಂತೆ ಸಚಿವರು ಸೂಚಿಸಿದ್ದಾರೆ. ಎಲ್ಲ ವಿಭಾಗಗಳಲ್ಲೂ ಸಣ್ಣ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಒಂದು ಬಾರಿಗೆ ಆದ್ಯತೆಯ ಮೇಲೆ ‍ಪೂರ್ಣವಾಗಿ ಪಾವತಿಸುವ ಪ್ರಸ್ತಾವವಿದೆ ಎಂದು ಮೂಲಗಳು ತಿಳಿಸಿವೆ.

ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕಾಮಗಾರಿಗಳ ಟೆಂಡರ್‌ ಪ್ರಕಟಣೆ ಜಾಹೀರಾತು ಶುಲ್ಕ, ಅರಣ್ಯ ಇಲಾಖೆಗೆ ಪಾವತಿಸಬೇಕಿದ್ದ ಸೆಸ್‌, ಭೂಸ್ವಾಧೀನ ವೆಚ್ಚವನ್ನೂ ಒಂದು ಬಾರಿಗೆ ಸಂಪೂರ್ಣ ಪಾವತಿಸಲಾಗಿದೆ. ಇದರಿಂದಾಗಿ ಇಲಾಖೆಯಲ್ಲಿ ಬಾಕಿ ಬಿಲ್‌ಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ.

‘ಸಂಕಷ್ಟ ಪರಿಹಾರಕ್ಕೆ ಕ್ರಮ’ ‘

ಮೂರು ವರ್ಷಗಳಿಂದ ಬಿಲ್‌ ಪಾವತಿ ಆಗದೇ ಇರುವುದರಿಂದ ಸಣ್ಣ ಗುತ್ತಿಗೆದಾರರು ಸಂಕಷ್ಟದಲ್ಲಿದ್ದರು. ಅವರು ಆರ್ಥಿಕವಾಗಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕದಂತೆ ರಕ್ಷಿಸುವ ಉದ್ದೇಶದಿಂದ ಸಾವಿರಕ್ಕೂ ಹೆಚ್ಚು ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಆದ್ಯತೆ ಮೇಲೆ ಪಾವತಿಸಿದ್ದೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ದೊಡ್ಡ ಗುತ್ತಿಗೆದಾರರಿಗೆ ಆರ್ಥಿಕ ಒತ್ತಡ ತಡೆದುಕೊಳ್ಳಲು ಶಕ್ತಿ ಇರುತ್ತದೆ. ಸಣ್ಣ ಗುತ್ತಿಗೆದಾರರು ಅಂತಹ ಒತ್ತಡ ಎದುರಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ಕಾರಣದಿಂದ ಆದ್ಯತೆ ನೀಡುವ ಸೂತ್ರ ಜಾರಿಗೊಳಿಸಲಾಗಿದೆ’ ಎಂದರು.

- ಇನ್ನೂ ₹ 4000 ಕೋಟಿ ಬಾಕಿ

ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ₹ 4000 ಕೋಟಿಯಷ್ಟು ಮೊತ್ತದ ಬಿಲ್‌ಗಳು ಇನ್ನೂ ಬಾಕಿ ಇವೆ. ಬಾಕಿ ಪಾವತಿಗೆ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ದೊಡ್ಡ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರ ಬಾಕಿ ಬಿಲ್‌ಗಳಲ್ಲಿ ಶೇಕಡ 25ರಿಂದ 30ರಷ್ಟನ್ನು ಹದಿನೈದು ದಿನಗಳೊಳಗೆ ಪಾವತಿಸುವ ಗುರಿ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT