ಬುಧವಾರ, ಸೆಪ್ಟೆಂಬರ್ 23, 2020
24 °C
ರಸ್ತೆಗಳ ಆಸ್ತಿ ನಿರ್ವಹಣೆ, ಸುರಕ್ಷತೆ ಬದಲು ಅನ್ಯ ಉದ್ದೇಶಕ್ಕೆ ಅನುದಾನ ಬಳಕೆ

‘ಪ್ರಾಮ್ಸಿ’ಯಲ್ಲಿ ಬೇಕಾಬಿಟ್ಟಿ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಯಾಣಿಕರ ಜೀವರಕ್ಷಣೆಗೆ ಅಗತ್ಯವಾದ ರಸ್ತೆ ಸುರಕ್ಷತಾಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ಖರ್ಚು ಮಾಡಿದ ಪ್ರಕರಣ ‘ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರ (ಪ್ರಾಮ್ಸಿ)’ಯಲ್ಲಿ ನಡೆದಿದೆ.

ಹೆಚ್ಚುತ್ತಿರುವ ಅಪಘಾತಗಳ ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು, ವಾಹನಗಳ ಸುಗಮ ಓಡಾಟಕ್ಕೆ ಸುರಕ್ಷತಾ
ಕ್ರಮಗಳನ್ನು ಕೈಗೊಳ್ಳುವುದು ಹಾಗೂ ರಸ್ತೆಗಳ ಆಸ್ತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಪ್ರಾಮ್ಸಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದಕ್ಕಾಗಿ 2017–18ರ ಸಾಲಿನಲ್ಲಿ ₹109.93 ಕೋಟಿ ಹಾಗೂ 2018–19ರಲ್ಲಿ ₹234.81 ಕೋಟಿ ಸೇರಿ ಒಟ್ಟು ₹344.74 ಕೋಟಿ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ.  

ಆದರೆ, ಪ್ರಾಮ್ಸಿಯಪ್ರಭಾರ ಮುಖ್ಯ ಎಂಜಿನಿಯರ್‌ ಬಿ.ಎಲ್. ರವೀಂದ್ರ ಬಾಬು ಹಾಗೂ ಕಾರ್ಯಪಾಲಕ ಎಂಜಿನಿಯರ್‌ ರವಿ ಭಟ್‌
ಅವರು, ಈ ಹಣವನ್ನು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ. ಹಣವನ್ನು ಬೇರೆ ಕಾಮಗಾರಿಗಳಿಗೆ ವರ್ಗಾಯಿಸುವಾಗ ನಿಯಮಗಳನ್ನು ಪಾಲಿಸಿಲ್ಲ. ಇದರಿಂದಾಗಿ ಸರ್ಕಾರದಉದ್ದೇಶವೇ ಈಡೇರಿಲ್ಲ ಎಂದು ಕೇಂದ್ರದ ಅಧಿಕಾರಿಗಳೇ ಆಪಾದಿಸಿದ್ದಾರೆ.

ರಸ್ತೆ ಸುರಕ್ಷತಾ ದೃಷ್ಟಿಯಿಂದ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅನುದಾನ ಬಳಕೆ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳಿವೆ. ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ 5 ಅಪಘಾತ ಹಾಗೂ ಒಂದು ಮರಣ ಸಂಭವಿಸಿದ್ದರೆ, ಅಂತಹ ಜಂಕ್ಷನ್‌ನಲ್ಲಿ ಆದ್ಯತೆ ಮೇರೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಮಾರ್ಗಸೂಚಿ ಪ್ರತಿಪಾದಿಸಿದೆ. ಶೇ 90ರಷ್ಟು ಮೊತ್ತವನ್ನು ಸುರಕ್ಷತಾ ಕ್ರಮಗಳಿಗೆ ಬಳಸಬೇಕು. ಶೇ 10ರಷ್ಟು ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇದೆ. ಆದರೆ, ಶೇ 80ರಷ್ಟು ಮೊತ್ತವನ್ನು ರಸ್ತೆ ಕಾಮಗಾರಿಗಳಿಗೆ ಬಳಸಲಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ಹೇಳಿದರು.

ರಸ್ತೆಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆ, ಕೆ–ಶಿಪ್‌, ಜಿಲ್ಲಾ ಪಂಚಾಯಿತಿ... ಹೀಗೆ ನಾನಾ ಇಲಾಖೆಗಳಿಂದ ಅನುದಾನ ಬರುತ್ತದೆ. ಪ್ರಾಮ್ಸಿಗೆ ಬಿಡುಗಡೆ ಮಾಡಿದ ಹಣವನ್ನು ನಿರ್ದಿಷ್ಟ ಉದ್ದೇಶಕ್ಕಾಗಿಯೇ ಬಳಸಬೇಕು. ಆದರೆ, ಅದನ್ನು ಮಾಡಿಲ್ಲ ಎಂದು ಅವರು ಹೇಳಿದರು. 

ರವೀಂದ್ರಬಾಬು ಅವರು ಸದ್ಯ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡದ(ದಕ್ಷಿಣವಲಯ) ಪ್ರಭಾರ ಮುಖ್ಯ ಎಂಜಿನಿಯರ್‌, ಕೆ–ಶಿಪ್‌ನ ಸೂಪರಿಂಟೆಂಡೆಂಟ್ ಎಂಜಿನಿಯರ್ ಹಾಗೂ ಪ್ರಾಮ್ಸಿಯ ಮುಖ್ಯ ಎಂಜಿನಿಯರ್... ಹೀಗೆ ಮೂರು ಹುದ್ದೆಗಳಲ್ಲಿದ್ದಾರೆ. ಅಪಘಾತ ತಡೆ ಹಾಗೂ ರಸ್ತೆ ಸುರಕ್ಷತೆ ದೃಷ್ಟಿಯಿಂದ ಪ್ರಾಮ್ಸಿಗೆ ಪ್ರತ್ಯೇಕವಾಗಿ ಮುಖ್ಯ ಎಂಜಿನಿಯರ್‌ ಇರಬೇಕು. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ಆಪ್ತ ಬಳಗದಲ್ಲಿರುವುದರಿಂದ ಮೂರೂ ಹುದ್ದೆಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಪ್ರಾಮ್ಸಿ ರಚನೆಯ ಉದ್ದೇಶ ಈಡೇರದೇ ಬೇರೆಯದೇ ಕೆಲಸಗಳು ನಡೆಯುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ಅಂದಾಜು ಸಿದ್ಧಪಡಿಸುವುದು, ಟೆಂಡರ್ ಕರೆಯುವುದು, ಕಾರ್ಯಾದೇಶ ನೀಡುವುದು ಹಾಗೂ ಅಂತಿಮವಾಗಿ ಬಿಲ್ ಪಾವತಿಯ ಹೊಣೆ ಕಾರ್ಯಪಾಲಕ ಎಂಜಿನಿಯರ್ ರವಿ ಭಟ್ ಅವರದ್ದಾಗಿದೆ. ಮೂರು ಇಲಾಖೆಯನ್ನು ರವೀಂದ್ರಬಾಬು ನಿರ್ವಹಿಸುತ್ತಿರುವುದರಿಂದ ಪ್ರಾಮ್ಸಿಯತ್ತ ಲಕ್ಷ್ಯ ಕೊಡಲು ಅವರಿಗೆ ಆಗುತ್ತಿಲ್ಲ. ಹೀಗಾಗಿ, ಕಾರ್ಯಪಾಲಕ ಎಂಜಿನಿಯರ್‌ ಅವರೇ ಎಲ್ಲವನ್ನೂ ನಿಭಾಯಿಸುತ್ತಿರುವುದರಿಂದ ಪ್ರಾಮ್ಸಿ ಆಶಯ ಜಾರಿಯಾಗುತ್ತಿಲ್ಲ ಎಂದು ಅವರು  ಹೇಳಿದರು.

ರಸ್ತೆ ಆಸ್ತಿ ನಿರ್ವಹಣೆ ಮತ್ತು ಸುರಕ್ಷತೆ, ರಸ್ತೆ ನಿರ್ಮಾಣ ಕಾಮಗಾರಿಗಳ ಟೆಂಡರ್ ಕರೆಯುವ ಮುನ್ನ ನಿಯಮಗಳನ್ನು ಪಾಲಿಸಬೇಕು. ಆದರೆ, ತಮಗೆ ಬೇಕಾದ ಗುತ್ತಿಗೆದಾರರಿಗೆ ನೀಡುವ ಸಲುವಾಗಿ ಷರತ್ತುಗಳನ್ನು ಒಡ್ಡಲಾಗುತ್ತಿದೆ. ಇಂತಹದೇ ಕಾಮಗಾರಿ
ಗಳನ್ನು ನಿರ್ವಹಿಸಿದ ಅನುಭವ, ಇಂತಿಂತಹ ಯಂತ್ರೋಪಕರಣ ಹಾಗೂ ಇದೇ ಮಾದರಿಯ ಕಾಮಗಾರಿಗಳನ್ನು ನಿರ್ವಹಿಸಿರಬೇಕು
ಎಂಬ ಷರತ್ತು ಹಾಕಲಾಗುತ್ತಿದೆ.ಇದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು