ಗುರುವಾರ , ಡಿಸೆಂಬರ್ 5, 2019
18 °C
ಸಾವಿರಾರು ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಕೋಟ್ಯಂತರ ಹಣ ವಂಚಿಸಿದ ‘ಜಾಲ’

ಮೂವರ ಜೀವಕ್ಕೆ ಕುತ್ತು ತಂದ ‘ಕ್ಯೂನೆಟ್‌’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಹಾನ್‌ ಡೈರೆಕ್ಟ್ ಸೆಲ್ಲಿಂಗ್‌’ ಹೆಸರಿನಲ್ಲಿ ಕಾರ್ಯಾಚರಿಸಿ, ನಗರದ ಏಳು ಸಾವಿರಕ್ಕೂ ಹೆಚ್ಚು ಜನರು ಸೇರಿದಂತೆ ದೇಶದಾದ್ಯಂತ ಸಾವಿರಾರು ಮಂದಿಗೆ ಕೋಟ್ಯಂತರ ಹಣ ವಂಚಿಸಿದ್ದ ‘ಕ್ಯೂನೆಟ್‌’ ಜಾಲದ ವಿರುದ್ಧ ಕಂಪನಿ ಕಾಯ್ದೆ–2013ರ ಅಡಿ ಸಮಗ್ರವಾಗಿ ವಿಚಾರಣೆ ನಡೆಸಲು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ.

‘ಈ ವಂಚನೆ ಜಾಲದಲ್ಲಿ ಸಿಲುಕಿ ನಷ್ಟ ಅನುಭವಿಸಿದ ಆಕ್ಸೆಂಚರ್‌ ಸಾಫ್ಟ್‌ವೇರ್‌ ಕಂಪನಿಯ ಮಾಜಿ ಉದ್ಯೋಗಿ ಅಡಪ ಅರವಿಂದ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಇದೇ ಕಂಪನಿ ಜೊತೆ ವ್ಯವಹರಿಸಿದ್ದ ಚೆನ್ನೈ ಮತ್ತು ಮಹಾರಾಷ್ಟ್ರದ ತಲಾ ಒಬ್ಬರು ಸಾವಿಗೀಡಾಗಿದ್ದು, ಈ ಪ್ರಕರಣಗಳ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ’ ಎಂದು ಸೈಬರಾಬಾದ್‌ ಪೊಲೀಸ್‌ ಕಮಿಷನರ್‌ ವಿ.ಸಿ. ಸಜ್ಜನರ ತಿಳಿಸಿದ್ದಾರೆ.

ಕ್ಯೂನೆಟ್‌ ಕಂಪನಿ‌ ವಿರುದ್ಧ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದಿಲ್ಲಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಚೆನ್ನೈನ 172 ಮಂದಿ ಮೊದಲ ಬಾರಿಗೆ ಅಲ್ಲಿನ ಸ್ಥಳೀಯ ಠಾಣೆಯಲ್ಲಿ ಕಂಪನಿ ವಿರುದ್ಧ ದೂರು ನೀಡಿದರು. ಕ್ಯೂನೆಟ್‌ನ ಫ್ರಾಂಚೈಸಿಯಾದ ವಿಹಾನ್‌ ಡೈರೆಕ್ಟ್ ಸೆಲ್ಲಿಂಗ್‌ ಕಂಪನಿಯ ವಿರುದ್ಧ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ.

ಕಂಪನಿಯ ನಿರ್ದೇಶಕರಾಗಿರುವ ಗುಹಾನ್‌ ರಾಮಚಂದ್ರನ್‌, ಎಂ.ಎನ್‌. ಗುಣಶೀಲ, ಶುಭಾ ತುಳಸಿರಾಮ್‌, ವೆಂಕ ಶ್ರೀನಿವಾಸ ರಾವ್‌, ಬಾಲಾಜಿ ವೀರವಳ್ಳಿ, ಪ್ರೇಮದಾಸ್‌ ರಾಮುಣ್ಣಿ ಕುರುಪ್‌, ರವೀಂದ್ರ ಮಠ, ದಿಲೀಪ್‌ರಾಜ್‌ ಪುಕ್ಕೆಲ್ಲ, ಸೂರ್ಯನಾರಾಯಣ ಕಾಂತ ವಿಜಯ ಸಾರಥಿ, ಮೊಹಮ್ಮದ್‌ ಇಮ್ತಿಯಾಜ್‌ ಮತ್ತು ಪ್ರಮೋಟರ್‌ಗಳಾದ ಮಾಲ್ಕಮ್‌ ನೋಜರ್‌ ದೇಸಾಯಿ, ಮೈಕೆಲ್‌ ಜೋಸೆಫ್‌ ಫೆರೇರಾ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲಾಗಿದೆ.

ಈ ವಂಚನೆ ಜಾಲವನ್ನು ಸೈಬರಾಬಾದ್‌ ಪೊಲೀಸರು ಮೊದಲ ಬಾರಿಗೆ ಭೇದಿಸಿದ್ದರು. ಸೈಬರಾಬಾದ್‌ (ಹೈದರಾಬಾದ್‌ ಹೊರವಲಯದಲ್ಲಿ ಐಟಿ ಕಂಪನಿಗಳು ಹೆಚ್ಚಿರುವ ಪ್ರದೇಶ) ಪೊಲೀಸ್‌ ಕಮಿಷನರ್‌ ನೇತೃತ್ವದ ತಂಡ ಸಮಗ್ರವಾಗಿ ತನಿಖೆ ನಡೆಸಿದ್ದು, ಬಳಿಕ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಪ್ರಕರಣ ದಾಖಲಿಸಿಕೊಂಡಿತ್ತು.

‘ವಿಹಾನ್‌ ಡೈರೆಕ್ಟ್ ಸೆಲ್ಲಿಂಗ್‌ ಕಂಪನಿ ವಿರುದ್ಧ ಸೈಬರಾಬಾದ್‌ ಕಮಿಷನರೇಟ್ ವ್ಯಾಪ್ತಿಯಲ್ಲಿ 38 ಪ್ರಕರಣಗಳನ್ನು ದಾಖ
ಲಿಸಿಕೊಳ್ಳಲಾಗಿದೆ. ಅಲ್ಲದೆ, ಈವರೆಗೆ 70 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿರುವ ಕಂಪನಿಯ ಗೋದಾಮು ಜಪ್ತಿ ಮಾಡಲಾಗಿದೆ. ಕಂಪನಿಯ ಬ್ಯಾಂಕ್‌ ಖಾತೆಯಲ್ಲಿರುವ ₹ 2.7 ಕೋಟಿಯನ್ನು ತಡೆಹಿಡಿಯಲಾಗಿದೆ’ ಎಂದು ವಿ.ಸಿ. ಸಜ್ಜನರ ತಿಳಿಸಿದ್ದಾರೆ.

‘ಕ್ಯೂನೆಟ್‌ ಕಂಪನಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಬಾಲಿವುಡ್‌ ತಾರೆಗಳಾದ ಅನಿಲ್‌ ಕಪೂರ್‌, ಶಾರುಖ್‌ಖಾನ್‌, ವಿವೇಕ್‌ ಓಬೆರಾಯ್‌, ಬೊಮ್ಮನ್‌ ಇರಾನಿ, ಜಾಕಿ ಶ್ರಾಫ್‌, ಪೂಜಾ ಹೆಗ್ಡೆ, ತೆಲುಗು ನಟ ಅಲ್ಲೂ ಶಿರಿಶ್‌ ಸೇರಿ ಹಲವರಿಗೆ ನೋಟಿಸ್‌ ನೀಡಲಾಗಿದೆ. ಕಂಪನಿಯ 500 ಪ್ರಮೋಟರ್‌ಗಳಿಗೂ ನೋಟಿಸ್‌ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಅನಿಲ್‌ ಕಪೂರ್‌, ಶಾರುಖ್‌ಖಾನ್‌, ಬೊಮ್ಮನ್‌ ಇರಾನಿ ತಮ್ಮ ವಕೀಲರ ಮೂಲಕ ನೋಟಿಸ್‌ಗೆ ಉತ್ತರಿಸಿದ್ದಾರೆ. ಉಳಿದವರ ಉತ್ತರವನ್ನು ನಿರೀಕ್ಷಿಸಲಾಗುತ್ತಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ. ಹಾಂಗ್‌ಕಾಂಗ್‌ನಲ್ಲಿ ಕಾರ್ಯಾರಂಭ ಮಾಡಿದ್ದ 'ಕ್ಯೂನೆಟ್‌' ಕಂಪನಿ ಫ್ರಾಂಚೈಸಿಗಳ ಹೆಸರಿನಲ್ಲಿ ಸ್ಥಳೀಯರನ್ನೇ ಬಳಸಿಕೊಂಡು ಹೆಚ್ಚಿನ ಲಾಭ ಆಮಿಷ ತೋರಿಸಿ, ವಿವಿಧ ಸ್ಕೀಂಗಳ ಹೆಸರಿನಲ್ಲಿ ಭಾರಿ ಮೊತ್ತ ವಂಚಿಸಿದೆ. ಸಾಫ್ಟ್‌ವೇರ್‌ ಉದ್ಯೋಗಿಗಳು, ಉದ್ಯಮಿಗಳು, ವೈದ್ಯರು ಸೇರಿ  ಶ್ರೀಮಂತ ವರ್ಗದವರಿಗೆ ಕಂಪನಿ ಕೋಟಿಗಟ್ಟಲೆ ವಂಚಿಸಿದೆ.

2018ರ ಮಾರ್ಚ್‌ 31ರಂದು ಫ್ರೀಡಂ ಪಾರ್ಕ್‌ನಲ್ಲಿ ನೂರಾರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಖಾಸಗಿ ಕಂಪನಿ ಉದ್ಯೋಗಿಗಳು ಪ್ರತಿಭಟಿಸಿ ಈ ಕಂಪನಿಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಹಲಸೂರು, ಸದಾಶಿವನಗರ, ವೈಟ್‌ಫೀಲ್ಡ್‌, ಮಾರತ್‌ಹಳ್ಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕ್ಯೂನೆಟ್‌ ವಿರುದ್ಧ ಪ್ರಕರಣಗಳು ದಾಖಲಾಗಿವೆ.

2017ರ ಫೆಬ್ರುವರಿಯಲ್ಲಿ ಪ್ರಕರಣ ದಾಖಲಾಗಿತ್ತು!
‘ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಗಳಿಸಿ ಎಂಬ ಆಮಿಷಕ್ಕೆ ಸಿಲುಕಿ ಮೋಸ ಹೋಗಿದ್ದೇನೆ’ ಎಂದು ಆರೋಪಿಸಿ ಮಲೇಷ್ಯಾದ ಕ್ಯೂ–ನೆಟ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿರುದ್ಧ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಪ್ರಗ್ಯಾ ಎಂಬುವವರು  ನೀಡಿದ್ದ ದೂರಿನ ತನಿಖೆ ನಡೆಸಿ ಸೈಬರ್ ಕ್ರೈಂ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ರಾಜ್ಯ ಹೈಕೋರ್ಟ್‌ 2017ರ ಫೆಬ್ರುವರಿಯಲ್ಲಿ ರದ್ದು ಮಾಡಿತ್ತು.

‘ಕ್ಯೂ–ನೆಟ್‌ ಕಂಪನಿ ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್ (ಭಾರತ) ಕಂಪನಿ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದೆ. ಕಂಪನಿಯ ಆನ್‌ಲೈನ್ ಮಾಹಿತಿ ಮೇರೆಗೆ ನಾನು ಈ ಕಂಪೆನಿಯ ಸಂಪರ್ಕಕ್ಕೆ ಬಂದು ₹ 55 ಸಾವಿರ ನೀಡಿ ಮೋಸ ಹೋಗಿದ್ದೇನೆ’ ಎಂದು ಪ್ರಗ್ಯಾ ದೂರಿದ್ದರು.

2016ರ ಅ. 18ರಂದು ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದೂರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಹಣ ಪ್ರಸರಣ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ರದ್ದುಕೋರಿ ಕಂಪೆನಿಯ ಸಿಇಒ ಕ್ವಾಲಾಲಂಪುರ ನಿವಾಸಿ ನರೇಶ್ ಬಾಲಸುಬ್ರಮಣಿಯನ್ ಸಲ್ಲಿಸಿದ್ದ ಅರ್ಜಿಯನ್ನು, ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿತ್ತು.

*
ಆಮಿಷ ಒಡ್ಡಿ ವಂಚಿಸುವ ಇಂತಹ ಜಾಲಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಹಣ ಕಟ್ಟಬಾರದು
-ವಿ.ಸಿ. ಸಜ್ಜನರ, ಪೊಲೀಸ್‌ ಕಮಿಷನರ್‌, ಸೈಬರಾಬಾದ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು