ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಕುಂದುಕೊರತೆ ನಿವಾರಣೆಗೆ ‘ಕ್ಯೂಆರ್‌ ಕೋಡ್‌’

ಬಿಬಿಎಂಪಿ: ರಸ್ತೆ, ಚರಂಡಿ, ಬೀದಿದೀಪದ ಸಮಸ್ಯೆ ನಿವಾರಣೆ; ಸಮಗ್ರ ಮಾಹಿತಿ ಲಭ್ಯ
Published 6 ಜುಲೈ 2023, 11:33 IST
Last Updated 6 ಜುಲೈ 2023, 11:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದಕ್ಷಿಣ ವಲಯದ ನಾಗರಿಕರು ತಮ್ಮ ಕುಂದುಕೊರತೆ ದಾಖಲಿಸಲು ನಿಯಂತ್ರಣ ಕೊಠಡಿಯನ್ನೇ ಅವಲಂಬಿಸಬೇಕಿಲ್ಲ. ರಸ್ತೆಯ ನಾಮಫಲಕದಲ್ಲಿರುವ ‘ಕೋಡ್‌’ನಲ್ಲಿ ಎಲ್ಲ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಬಿಬಿಎಂಪಿ ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ನಾಮಫಲಕಗಳಲ್ಲಿ ‘ಕ್ಯೂಆರ್‌ ಕೋಡ್‌ ರೋಡ್‌ ರೀಡರ್’ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ನಾಗರಿಕರು ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಲಭ್ಯವಾಗುವ ಲಿಂಕ್‌ ಮೂಲಕ ರಸ್ತೆ, ಚರಂಡಿ, ಬೀದಿ ದೀಪದ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿಯನ್ನು ಹೆಸರು, ಸಂಪರ್ಕ ಸಂಖ್ಯೆಗಳ ಸಹಿತ ಲಭ್ಯವಾಗಲಿದೆ.

ನಾಗರಿಕರು ತಮ್ಮ ಸುತ್ತಮುತ್ತಲಿನ ಸಮಸ್ಯೆ ನಿವಾರಣೆಗೆ ನಿಯಂತ್ರಣ ಕೊಠಡಿಗೆ ದೂರು ನೀಡಬೇಕಾಗಿತ್ತು. ಅಲ್ಲಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರು ಬಂದು ಕಾರ್ಯಗತಗೊಳ್ಳುತ್ತಿದ್ದರು. ಆದರೆ ಇದೀಗ ನಾಗರಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಹೆಸರು ಹಾಗೂ ಸಂಪರ್ಕ ಸಂಖ್ಯೆಯನ್ನು ಈ ಕ್ಯೂಆರ್‌ ಕೋಡ್‌ ಮೂಲಕವೇ ಪಡೆದುಕೊಂಡು, ನೇರವಾಗಿ ಅವರಿಗೆ ಸಮಸ್ಯೆ ಹೇಳಿಕೊಳ್ಳಬಹುದು. ಈ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ.

ವಾರ್ಡ್‌ಗಳಲ್ಲಿ ಆಯಾ ಕೆಲಸಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿ ಪಟ್ಟಿಯನ್ನು ನೀಡಲಾಗುತ್ತಿತ್ತು. ಆದರೆ, ಅದು ಅಲ್ಲಿಗೇ ಸೀಮಿತವಾಗುತ್ತಿತ್ತು. ಅಧಿಕಾರಿಗಳು ಬದಲಾದರೆ ಅವರ ಮಾಹಿತಿ ಸಿಗುತ್ತಿರಲಿಲ್ಲ. ಹೀಗಾಗಿ ಕ್ಯೂಆರ್ ಕೋಡ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಕಾರ್ಯನಿರತವಾಗಿರುವ ಅಧಿಕಾರಿ, ಗುತ್ತಿಗೆದಾರರ ಮಾಹಿತಿ ಅದರಲ್ಲಿ ಅಪ್‌ಡೇಟ್‌ ಮಾಡಲಾಗುತ್ತದೆ. ಇಲ್ಲಿ ಇಷ್ಟೇ ಮಾಹಿತಿ ಎಂದೇನೂ ಸೀಮಿತವಾಗಿರುವುದಿಲ್ಲ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ ಜಯರಾಂ ರಾಯಪುರ ತಿಳಿಸಿದರು.

ಕ್ಯೂಆರ್‌ ಕೋಡ್‌ಗಳನ್ನು ರಸ್ತೆ ನಾಮಫಲಕಗಳಿಗೆ ಅಂಟಿಸಲಾಗುತ್ತಿದೆ. ಪ್ರತಿ ರಸ್ತೆಗೂ ತನ್ನದೇ ಪ್ರತ್ಯೇಕವಾದ ಲಿಂಕ್‌ ಒಳಗೊಂಡಿರುತ್ತದೆ. ನಾಗರಿಕರು ಇದನ್ನು ಬಳಸಿಕೊಂಡು ತಮ್ಮ ಸಮಸ್ಯೆ ನಿವಾರಿಸಿಕೊಳ್ಳಬಹುದು. ನಾಗರಿಕರ ದೂರಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಬೆಂಗಳೂರು ದಕ್ಷಿಣ ವಲಯದಲ್ಲಿ ಸುಮಾರು 10,500 ರಸ್ತೆಗಳಿವೆ. ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್‌, ಜಯನಗರ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಗಳ ರಸ್ತೆಗಳಲ್ಲಿ ಈಗಾಗಲೇ ಕ್ಯೂಆರ್‌ ಕೋಡ್‌ಗಳನ್ನು ಅಳವಡಿಸಲಾಗಿದೆ. ವಿಜಯನಗರ ವಿಧಾನಸಭೆ ಕ್ಷೇತ್ರದ ರಸ್ತೆಗಳಲ್ಲಿ ಈ ಕೆಲಸ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಜಯರಾಂ ರಾಯಪುರ ದಕ್ಷಿಣ ವಲಯ ಆಯುಕ್ತ ಬಿಬಿಎಂಪಿ 
ಜಯರಾಂ ರಾಯಪುರ ದಕ್ಷಿಣ ವಲಯ ಆಯುಕ್ತ ಬಿಬಿಎಂಪಿ 

ಎಲ್ಲೆಡೆ ಶೀಘ್ರ ವಿಸ್ತರಣೆ: ಜಯರಾಂ

‘ಕ್ಯೂಆರ್‌ ಕೋಡಿನ ರಸ್ತೆ ಮಾಹಿತಿ ಕೋಷ್ಟಕ’ವನ್ನು ದಕ್ಷಿಣ ವಲಯದಲ್ಲಿ ಸುಮಾರು ₹12 ಲಕ್ಷ ವೆಚ್ಚದಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸುವ ಕಾರ್ಯ ಅನುಷ್ಠಾನಗೊಳಿಸಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಲು ಸೂಚಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ 13 ಸಾವಿರ ಕಿ.ಮೀ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ಮತ್ತು ವಲಯಗಳ ಎಲ್ಲ ರಸ್ತೆಗಳಿಗೂ ವಿಸ್ತರಿಸುವ ಯೋಜನೆ ಇದೆ.  ಸುಮಾರು ₹1.5 ಕೋಟಿ ವೆಚ್ಚವಾಗಬಹುದು’ ಎಂದು ದಕ್ಷಿಣ ವಲಯ ಆಯುಕ್ತ ಜಯರಾಂ ರಾಯಪುರ ತಿಳಿಸಿದರು. ಇದೀಗ ಕೆಲವು ಮಾಹಿತಿ ಮಾತ್ರ ಲಭ್ಯವಿದ್ದು ಮುಂದಿನ ದಿನಗಳಲ್ಲಿ ರಸ್ತೆಯ ಸಂಪೂರ್ಣ ಇತಿಹಾಸ ಅಂದರೆ ರಸ್ತೆ ಡಾಂಬರು ಹಾಕಿದ್ದು ಗುಂಡಿ ಮುಚ್ಚಿದ್ದು ಚರಂಡಿ ನಿರ್ಮಾಣ ಹೂಳು ತೆಗೆದಿದ್ದು ಸೇರಿದಂತ ಎಲ್ಲ ರೀತಿಯ ಕಾಮಗಾರಿಗಳ ಮಾಹಿತಿಯನ್ನೂ ಅಳವಡಿಸಲಾಗುತ್ತದೆ. ಸದ್ಯ ಇಂಗ್ಲಿಷ್‌ನಲ್ಲಿ ಮಾಹಿತಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಕನ್ನಡದಲ್ಲೂ ಒದಗಿಸಲಾಗುವುದು’ ಎಂದರು.

ಇದೀಗ ಯಾವ ಮಾಹಿತಿ ಲಭ್ಯ?

ಶಾಸಕರ ಹೆಸರು ಕ್ಷೇತ್ರ ವಿಭಾಗ ವಾರ್ಡ್‌ ರಸ್ತೆ ಹೆಸರು ರಸ್ತೆ ಐಡಿ; ರಸ್ತೆ ಗುಡಿಸುವವರು ಸೂಪರ್‌ವೈಸರ್‌ ಅವರ ಸಂಪರ್ಕ ಸಂಖ್ಯೆ; ಕಸ ಸಂಗ್ರಹಿಸುವ ಸಮಯ ಕಸ ಗುತ್ತಿಗೆದಾರರು ಅವರ ಸಂಪರ್ಕ ಸಂಖ್ಯೆ; ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪಾದನೆ ವಿವರ; ಗುಂಡಿ ಮುಚ್ಚುವ ಪಾದಚಾರಿ ರಸ್ತೆ ನಿರ್ವಹಣೆ ಮಾಡುವ ಚರಂಡಿ ಮೇಲಿನ ಸ್ಲ್ಯಾಪ್‌ ಬದಲಾವಣೆ ಚರಂಡಿ ಹೂಳು ತೆಗೆಯುವ ಬೀದಿದೀಪ ನಿರ್ವಹಣೆ ಜವಾಬ್ದಾರಿ ಹೊಂದಿರುವ ಎಂಜಿನಿಯರ್‌ ಗುತ್ತಿಗೆದಾರರ ಹೆಸರು ಹಾಗೂ ಸಂಪರ್ಕ ಸಂಖ್ಯೆ ಮರದ ಕೊಂಬೆ ತೆರವಿಗೆ ಅರಣ್ಯ ವಿಭಾಗ ಆರ್‌ಎಫ್‌ಒ ಗುತ್ತಿಗೆದಾರರ ವಿವರ; ನೀರು ಸರಬರಾಜು ಒಳಚರಂಡಿ ನಿರ್ವಹಣೆ ಜವಾಬ್ದಾರಿ ಹೊಂದಿರುವ ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿ ಹೆಸರು ಸಂಪರ್ಕ ಸಂಖ್ಯೆ; ನಿಯಂತ್ರಣ ಕೊಠಡಿ ಸಂಖ್ಯೆ; ಅಗ್ನಿಶಾಮಕ ದಳ ಸಿಬ್ಬಂದಿ ವಿವರ; ನಾಯಿ ಹಿಡಿಯಲು ಹಾಗೂ ಬೀಡಾಡಿ ದನಗಳ ಸಮಸ್ಯೆ ನಿವಾರಿಸುವ ಪಶು ಸಂಗೋಪನೆ ಅಧಿಕಾರಿಯ ಹೆಸರು ಸಂಪರ್ಕ ಸಂಖ್ಯೆ; ಸೊಳ್ಳೆ ನಿವಾರಣೆಗೆ ಔಷಧ ಸಿಂಪಡಿಸುವ ಆರೋಗ್ಯ ಇಲಾಖೆ ಅಧಿಕಾರಿಯ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT