ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯೀಕರಣ ತಪ್ಪಿಸುವ ರಾಜಕಾರಣವನ್ನು ಕಲೆ ಮಾಡಲಿ: ರೆಹಮತ್ ತರೀಕೆರೆ

ಪಿ. ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಬಿಡುಗಡೆ ಸಮಾರಂಭ
Last Updated 6 ಮಾರ್ಚ್ 2023, 20:46 IST
ಅಕ್ಷರ ಗಾತ್ರ

ಬೆಂಗಳೂರು: ಯಾರೋ ಒಬ್ಬರು ಮಾಡುವ ತಪ್ಪನ್ನೇ ಇಟ್ಟುಕೊಂಡು ಸಾಮಾನ್ಯೀಕರಿಸಿ ನಿರ್ದಿಷ್ಟ ಸಮುದಾಯದ ವಿರುದ್ಧ ಅಭಿಪ್ರಾಯ ರೂಪಿಸಬಾರದು ಎನ್ನುವ ವಿವೇಕ ಮುಖ್ಯ. ಇದನ್ನು ಜಿ. ರಾಜಶೇಖರ್‌ ಅವರಂತಹವರು ತಮ್ಮ ಬರಹಗಳಲ್ಲಿ ಮಾಡಿದ್ದಾರೆ. ಸೃಜನಶೀಲ ಬರಹಗಳು, ಕಲೆ ಮಾಡುವ ರಾಜಕಾರಣ ಇದೇ ಆಗಿರಬೇಕು ಎಂದು ಚಿಂತಕ–ವಿಮರ್ಶಕ ರಹಮತ್ ತರೀಕೆರೆ ಪ್ರತಿಪಾದಿಸಿದರು.

ಪಿ. ಚಂದ್ರಿಕಾ ಬರೆದಿರುವ ‘ಮೂವರು ಮಹಮದರು’ ಕೃತಿಯನ್ನು ನಗರದಲ್ಲಿ ಸೋಮವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಚಂದ್ರಿಕಾ ತಮ್ಮ ಕೃತಿಯಲ್ಲಿ ಪಯಣದ ಮಾರ್ಗವನ್ನು ಆರಿಸಿಕೊಂಡು, ರೂಪಾಂತರದ ಕಥೆಗಳನ್ನು ಹೇಳಿದ್ದಾರೆ. ಭಿನ್ನಮತದ ಜಗಳಗಳಿದ್ದೂ ಮಾನವೀಯ ಸಂಬಂಧಗಳು ಎಷ್ಟು ಸಹಜವಾಗಿ ಇವೆ ಎನ್ನುವುದು ಅಡಕವಾಗಿದೆ ಎಂದು ವಿಶ್ಲೇಷಿಸಿದರು.

ಬಾಬರಿ ಮಸೀದಿ ಕೆಡವಿದ್ದು, ಗಾಂಧಿ ಹತ್ಯೆ, ಪ್ಯಾಲೆಸ್ಟೀನ್ ಯುದ್ಧ, ಟಿಪ್ಪುವಿನ ಮೈಸೂರು ಯುದ್ಧ ಇವೆಲ್ಲ ಮಾಡಿರುವ ಗಾಯಗಳು ಆಳವಾದವು. ಬಾಬರಿ ಮಸೀದಿ ಕೆಡವಿದ ನಂತರ ಬೊಳುವಾರು ಮಹಮದ್ ಕುಂಞಿ ಅವರು ‘ಒಂದು ತುಂಡು ಗೋಡೆ’ ಕಥೆಯನ್ನು ಬರೆದಿದ್ದರು. ಅದನ್ನು ಆಧರಿಸಿ ‘ಪಾತುಮ್ಮ’ ಸಿನಿಮಾ ತಯಾರಾಯಿತು. ಆ ಸಿನಿಮಾ ಬರವಣಿಗೆ, ಕಲಾ ನಿರ್ದೇಶನದಲ್ಲಿ ತೊಡಗಿಕೊಂಡ ಸಂದರ್ಭದ ಪಯಣವನ್ನೇ ಚಂದ್ರಿಕಾ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನವ್ಯದವರು ಪ್ರದರ್ಶನ ಕಲೆಗಳನ್ನು ಸಾಹಿತ್ಯದಿಂದ ದೂರ ಮಾಡಿಬಿಟ್ಟಿದ್ದರು. ಈ ಕೃತಿಯು ಅಂತಹ ಪ್ರಭೇದಕ್ಕೆ ಸೇರಿದ್ದು ಎಂದು ರಹಮತ್ ತಿಳಿಸಿದರು.

ಕೋವಿಡ್‌ ಕಾಲದಲ್ಲಿ ಮುಸ್ಲಿಮರ ವಿಷಯದಲ್ಲಿ ಬಹುಸಂಖ್ಯಾತರು ನಡೆದುಕೊಂಡ ರೀತಿಯಿಂದ ಸಂಕಟವಾಯಿತು. ಆಗ 2016ರಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಕರಾವಳಿ ಭಾಗದಲ್ಲಿ ಕಂಡ ಅನುಭವಗಳನ್ನೇ ಕೃತಿಯಾಗಿಸಿದ ಸಂದರ್ಭವನ್ನು ಕೃತಿಕಾರ್ತಿ ಚಂದ್ರಿಕಾ ಹಂಚಿಕೊಂಡರು.

ಪತ್ರಕರ್ತರಾದ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ವಿಶಾಖ ಎನ್. ಕೃತಿಯ ಕುರಿತು ಪ್ರತಿಕ್ರಿಯಿಸಿದರು. ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ರವಿಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT