ಮಂಗಳವಾರ, ಮಾರ್ಚ್ 21, 2023
31 °C
ಕೆಎಸ್‌ಆರ್‌ ರೈಲು ನಿಲ್ದಾಣದ ಹೊರಾಂಗಣದಲ್ಲಿ ತಲೆ ಎತ್ತಲಿವೆ 17 ಡೇರೆಗಳು * ಸಂಚಾರಕ್ಕೆ ಉಳಿಯುವುದು 25 ಅಡಿ ರಸ್ತೆ ಮಾತ್ರ

ರೈಲ್ ಆರ್ಕೇಡ್: ಸಂಚಾರ ಸಮಸ್ಯೆ ತಲೆದೋರುವ ಆತಂಕ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹೊರಾಂಗಣದಲ್ಲಿ ‘ರೈಲ್ ಆರ್ಕೇಡ್’ ನಿರ್ಮಾಣವಾಗಲಿದೆ. 15 ಸಾವಿರಕ್ಕೂ ಹೆಚ್ಚು ಚದರ ಅಡಿ ಜಾಗದಲ್ಲಿ ತಲೆ ಎತ್ತಲಿರುವ ಈ ಆರ್ಕೇಡ್ ವಾಹನ ಮತ್ತು ಪ್ರಯಾಣಿಕರ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಆತಂಕ ವ್ಯಕ್ತವಾಗಿದೆ.

ರೈಲು ನಿಲ್ದಾಣ ನಿರ್ವಹಣೆ ಹೊಣೆ ಹೊತ್ತಿರುವ ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮವೇ (ಐಆರ್‌ಎಸ್‌ಡಿಸಿ) ಈ ಆರ್ಕೇಡ್ ಅನ್ನು ನಿರ್ಮಾಣ ಮಾಡಲಿದೆ. ಅದರ ಟೆಂಡರ್ ಪ್ರಕ್ರಿಯೆಯನ್ನೂ ನಿಗಮ ಆರಂಭಿಸಿದೆ. ಟೆಂಡರ್ ದಾಖಲೆಗಳ ಪ್ರಕಾರ 17 ಡೇರೆ ರೂಪದ ಮಳಿಗೆಗಳು (ರೆಸ್ಟೋರೆಂಟ್‌ಗಳು,   ಕರಕುಶಲ ವಸ್ತುಗಳ ಮಳಿಗೆಗಳು, ಉಡುಗೊರೆ ಅಂಗಡಿಗಳು ಸೇರಿದಂತೆ ವಿವಿಧ ಮಳಿಗೆಗಳು ಹಾಗೂ ವಿಶ್ರಾಂತಿ ಕೊಠಡಿಗಳು) ನಿರ್ಮಾಣವಾಗಲಿವೆ.

‘ಎ’ ವಲಯದಲ್ಲಿ (ನಿರ್ಗಮನ ರಸ್ತೆ ಕಡೆಗೆ) 8,614 ಚದರ ಅಡಿ ವಿಸ್ತೀರ್ಣದಲ್ಲಿ 10 ಮಳಿಗೆಗಳು, ‘ಬಿ’ ವಲಯದಲ್ಲಿ (ನಿಲ್ದಾಣ ಪ್ರವೇಶದ್ವಾರದ ಕಡೆ) 6,936 ಚದರ ಅಡಿ ವಿಸ್ತೀರ್ಣದಲ್ಲಿ 7 ಮಳಿಗೆಗಳನ್ನು ನಿರ್ಮಿಸುವ ಉದ್ದೇಶವನ್ನು ಐಆರ್‌ಎಸ್‌ಡಿಸಿ ಹೊಂದಿದೆ.

ಟೆಂಡರ್ ಕರೆದು ಅಷ್ಟೂ ಜಾಗವನ್ನು 9 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಐಆರ್‌ಎಸ್‌ಡಿಸಿ ಉದ್ದೇಶಿಸಿದೆ. ನಗರದ ಕೇಂದ್ರ ಭಾಗದಲ್ಲಿ ನಿರ್ಮಾಣವಾಗುವ ಈ ಆರ್ಕೇಡ್‌ನಿಂದ ಪ್ರಯಾಣಿಕರು ಮತ್ತು ಇತರೆ ಗ್ರಾಹಕರಿಗೆ  ಪ್ರಯೋಜನವಾಗಲಿದೆ. ರೈಲ್ವೆ ಇಲಾಖೆಗೂ ವರಮಾನ ಬರಲಿದೆ ಎಂಬುದು ನಿಗಮದ ಅಭಿಪ್ರಾಯ.

‘ಆದರೆ, ಇದರಿಂದ ಪ್ರಯಾಣಿಕರ ಓಡಾಟಕ್ಕೆ ಮತ್ತು ಅವರನ್ನು ಕರೆ ತರುವ ವಾಹನಗಳ ಸಂಚಾರಕ್ಕೆ ತೊಡಕಾಗಲಿದೆ. ವಾಹನಗಳ ನಿರ್ಗಮನಕ್ಕೆ 25 ಅಡಿ ರಸ್ತೆಯನ್ನಷ್ಟೇ ಉಳಿಸಲಾಗಿದೆ. ಅದಕ್ಕೂ ಅಂಗಡಿ ಮುಂಗಟ್ಟುಗಳು ಚಾಚಿಕೊಳ್ಳುವ ಸಾಧ್ಯತೆ ಇದೆ. ಇದು ಸಂಚಾರ ಸಮಸ್ಯೆ ತಂದೊಡ್ಡುವುದರಲ್ಲಿ ಅನುಮಾನವೇ ಇಲ್ಲ’ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್‌ ಕಳವಳ ವ್ಯಕ್ತಪಡಿಸಿದರು.

‘ಕೋವಿಡ್ ಸಂದರ್ಭದಲ್ಲಿ ವಾಹನಗಳ ಮತ್ತು ಪ್ರಯಾಣಿಕರ ದಟ್ಟಣೆ ಇಲ್ಲದಾಗಿನ ಪರಿಸ್ಥಿತಿ ನೋಡಿಕೊಂಡು ಈ ಯೋಜನೆ ರೂಪಿಸಿದಂತಿದೆ. ಹಬ್ಬದ ಸಂದರ್ಭದಲ್ಲಿ ಈಗಿರುವ ಜಾಗದಲ್ಲೂ ದಟ್ಟಣೆ ಉಂಟಾಗುತ್ತಿದೆ. ಆವರಣವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯ ಇದೆ. ಕನಿಷ್ಠ 60 ಅಡಿ ರಸ್ತೆಯನ್ನು ಇಲ್ಲಿ ನಿರ್ಮಿಸಬೇಕಾಗುತ್ತದೆ. ಆದರೆ, ಈಗಿರುವ ರಸ್ತೆಯನ್ನೂ ಕಿರಿದಾಗಿಸುವುದು ಸಮಂಜಸವಲ್ಲ’ ಎಂದರು.

‘ವಾಹನ ನಿಲುಗಡೆಗೆ ಇರುವ ಜಾಗವನ್ನು ಹಾಗೆಯೇ ಉಳಿಸಿ ಅದರ ಮೇಲೆ ಪಿಲ್ಲರ್‌ಗಳನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಇರುವ ಜಾಗ ಹಾಳು ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ಕಿಷ್ಕಿಂದೆ ಆಗಲಿದೆ ರೈಲು ನಿಲ್ದಾಣದ ಆವರಣ’

‘ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಈಗ ಕಡಿಮೆ ಜಾಗ ಇದೆ. ರೈಲು ಪ್ರಯಾಣಿಕರಲ್ಲದವರೂ ಆರ್ಕೆಡ್‌ಗೆ ಬಂದು ಹೋಗಲು ಅವಕಾಶ ಕಲ್ಪಿಸಲಾಗುತ್ತಿದೆ. ರೈಲು ನಿಲ್ದಾಣ ಆವರಣವನ್ನು ಕಿಷ್ಕಿಂದೆ ಮಾಡಲು ಹೊರಟಂತಿದೆ’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಟೀಕಿಸಿದರು.

‘ಕೊವಿಡ್ ಪೂರ್ವದಲ್ಲಿ ರೈಲು ನಿಲ್ದಾಣದ ಆವರಣ ಸದಾ ಗಿಜಿಗುಡುತ್ತಿತ್ತು. ಆರ್ಕೇಡ್ ನಿರ್ಮಾಣವಾದರೆ ಪ್ರಯಾಣಿಕರ ಸಂಚಾರವೇ ಕಷ್ಟವಾಗಲಿದೆ. ಕೊನೆ ಗಳಿಗೆಯಲ್ಲಿ ಓಡಿ ಬರುವ ಪ್ರಯಾಣಿಕರಂತೂ ರೈಲು ಹತ್ತಲು ಸಾಧ್ಯವೇ ಇಲ್ಲದಂತಾಗಲಿದೆ’ ಎಂದರು.

‘ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆದ್ಯತೆ ಇರಬೇಕು. ವಾಹನ ನಿಲುಗಡೆಗೆ ಕಡಿಮೆ ದರದ ವ್ಯವಸ್ಥೆ ಇರಬೇಕು. ಟಿಕೆಟ್ ಪಡೆಯಲು ಬರುವವರಿಗೆ ವಿಶಾಲವಾದ ಜಾಗ ಇರಬೇಕು. ಇರುವ ಜಾಗವನ್ನೂ ಕಿರಿದು ಮಾಡುವುದರಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗಲಿದೆ. ಹಿರಿಯ ನಾಗರಿಕರು, ಅಂಗವಿಕಲರು ರೈಲು ನಿಲ್ದಾಣ ಪ್ರವೇಶಿಸುವುದೇ ಕಷ್ಟವಾಗಲಿದೆ’ ಎಂದು ಹೇಳಿದರು.

 ಅಂಕಿ– ಅಂಶ

ಆರ್ಕೇಡ್ ನಿರ್ಮಾಣಕ್ಕೆ ಬಳಸಲು ಉದ್ದೇಶಿಸಿರುವ ಜಾಗ- 15,550 ಚದರ ಅಡಿ

ನಿರ್ಮಾಣ ಆಗಲಿರುವ ಒಟ್ಟು ಮಳಿಗೆಗಳು- 17

ಆರ್ಕೇಡ್ ನಡೆಸಲು ಕಂ‍ಪನಿಗೆ ನೀಡುವ ಗುತ್ತಿಗೆ ಅವಧಿ- 9 ವರ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು