ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಎದುರೇ ಪ್ರಾಣಬಿಟ್ಟ

ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಸಾವು
Last Updated 20 ಡಿಸೆಂಬರ್ 2018, 5:16 IST
ಅಕ್ಷರ ಗಾತ್ರ

ಬೆಂಗಳೂರು: ಪೋಷಕರನ್ನು ಊರಿಗೆ ಕಳುಹಿಸಲೆಂದು ರೈಲು ನಿಲ್ದಾಣಕ್ಕೆ ಹೋಗಿದ್ದ ವಿಪ್ರೊ ಕಂಪನಿಯ ಸಾಫ್ಟ್‌ವೇರ್ ಎಂಜಿನಿಯರ್ ವಿ. ವಿಕ್ರಮ್ ಎಂಬುವರು, ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದು ಪೋಷಕರ ಎದುರೇ ಪ್ರಾಣ ಬಿಟ್ಟಿದ್ದಾರೆ. ವಿಕ್ರಮ್‌ ಅವರನ್ನು ರಕ್ಷಿಸಲು ಹೋಗಿದ್ದ ತಂದೆ ವಿಜಯನ್‌ ಅವರಿಗೂ ಗಾಯವಾಗಿದ್ದು, ಮಾರತ್ತಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದ ವಿಕ್ರಮ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ವಿಪ್ರೊ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಎಚ್‌ಎಸ್‌ಆರ್‌ ಲೇಔಟ್‌ನ 3ನೇ ಹಂತದಲ್ಲಿ ನೆಲೆಸಿದ್ದರು. ತಂದೆ ವಿಜಯನ್ ಹಾಗೂ ತಾಯಿ ಉದಯಕುಮಾರಿ, ಮಗನನ್ನು ನೋಡುವುದಕ್ಕಾಗಿ ಐದು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ತಂದೆ–ತಾಯಿಯನ್ನು ಸೋಮವಾರ ರಾತ್ರಿ (ಡಿ. 17) ವಾಪಸ್ ಊರಿಗೆ ಕಳುಹಿಸಲೆಂದು ರೈಲು ನಿಲ್ದಾಣಕ್ಕೆ ಹೋದಾಗ ಈ ಅವಘಡ ಸಂಭವಿಸಿದೆ.

‘ಯಶವಂತಪುರ–ಕನ್ನೂರು ಎಕ್ಸ್‌ಪ್ರೆಸ್ ರೈಲು, ರಾತ್ರಿ 8.56ರ ಸುಮಾರಿಗೆ ಕಾರ್ಮೆಲ್‌ರಾಮ್ ನಿಲ್ದಾಣಕ್ಕೆ ಬಂದು ನಿಂತಿತ್ತು. ತಂದೆ–ತಾಯಿಯನ್ನು ರೈಲಿನಲ್ಲಿ ಹತ್ತಿಸಿದ್ದ ವಿಕ್ರಮ್, ಲಗೇಜು ಇಡುವುದಕ್ಕಾಗಿ ರೈಲಿನೊಳಗೆ ಹೋಗಿದ್ದರು. ಅದಾಗಿ ನಿಮಿಷದಲ್ಲೇ ರೈಲು ನಿಲ್ದಾಣದಿಂದ ಹೊರಟಿತ್ತು. ಪೋಷಕರಿಗೆ ‘ಹ್ಯಾಪಿ ಜರ್ನಿ’ ಹೇಳುತ್ತ ಅವಸರದಲ್ಲೇ ಕಿಟಕಿ ಬಳಿ ಬಂದಿದ್ದ ವಿಕ್ರಮ್‌, ರೈಲು ಹೊರಟಿದ್ದ ವಿರುದ್ಧ ದಿಕ್ಕಿನಲ್ಲಿ ಇಳಿದಿದ್ದರು. ಆಗ ಆಯತಪ್ಪಿ ರೈಲು ಹಾಗೂ ಫ್ಲಾಟ್‌ಫಾರಂ ನಡುವಿನ ಜಾಗದಲ್ಲಿ ಬಿದ್ದರು. ಅವರ ಮೇಲೆಯೇ ರೈಲಿನ ಚಕ್ರಗಳು ಹರಿದು ಹೋದವು’ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹೇಳಿದರು.

‘ಮಗ ಬಿದ್ದಿರುವುದನ್ನು ಕಂಡ ವಿಜಯನ್ ಸಹ ರೈಲಿನಿಂದ ಹೊರಗೆ ಜಿಗಿದರು. ಅವರಿಂದ ಮಗನನ್ನು ರಕ್ಷಿಸಲು ಆಗಲಿಲ್ಲ. ನಂತರ, ಪ್ರಯಾಣಿಕರೇ ಚೈನ್ ಎಳೆದು ರೈಲು ನಿಲ್ಲಿಸಿದ್ದರು. ಆಗ, ವಿಕ್ರಮ್ ಶವ ಹಳಿ ಮೇಲೆಯೇ ಬಿದ್ದಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT