ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಹಳಿಗಳ ಮೇಲೆ..

Last Updated 22 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಮಲ್ಲೇಶ್ವರ ರೈಲು ನಿಲ್ದಾಣದ ಬಳಿಯ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಕೆಲಸ ಮಾಡುವ ಸೋಮಣ್ಣ ಎಂದಿನಂತೆ ಗಾಯತ್ರಿ ನಗರದಿಂದ ರೈಲು ಹಳಿ ದಾಟಿ ಅಂಗಡಿಗೆ ಬರುತ್ತಿದ್ದರು. ಮೂತ್ರವಿಸರ್ಜನೆಗಾಗಿ ಹಳಿ ಪಕ್ಕ ನಿಂತಿದ್ದೆ ತಪ್ಪಾಯಿತು. ರೈಲು ಬರುವ ರಭಸಕ್ಕೆ ಆಯತಪ್ಪಿ ಹಳಿಗೆ ಬಿದ್ದರು. ರೈಲಿನ ಅಡಿ ಸಿಲುಕಿ ಒಂದು ಕೈ ಮತ್ತು ಕಾಲು ತುಂಡಾದವು. ಮೂಳೆ, ಮಾಂಸದ ತುಂಡು ನೇತಾಡುತ್ತಿದ್ದವು. ನೋಡು ನೋಡುತ್ತಿದ್ದಂತೆಯೇ ಭೀಕರ ಅವಘಡವೊಂದು ನಡೆದು ಹೋಗಿತ್ತು. ಪ್ರಜ್ಞಾಹೀನರಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಜನರು ಸಮೀಪದ ಆಸ್ಪತ್ರೆಗೆ ಸೇರಿಸಿದರು. ಸಾವಿನ ದವಡೆಯಿಂದ ಪಾರಾಗಿ ಬಂದಿರುವಸೋಮಣ್ಣ ಇನ್ನೂ ತುರ್ತುನಿಗಾ ಘಟಕದಲ್ಲಿದ್ದಾರೆ. ಪ್ರಜ್ಞೆ ಬಂದಿಲ್ಲ. ಮನೆಯ ಆಧಾರಸ್ತಂಭವಾಗಿದ್ದ ಅವರು ಒಂದು ಕ್ಷಣ ಮೈಮರೆತ ಕಾರಣಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿ ಜೀವನವಿಡಿ ನರಳುವಂತಾಗಿದೆ.

* * *

ಇದು ಕೆಲವು ವರ್ಷಗಳ ಹಿಂದಿನ ಮಾತು. ವೃದ್ಧರೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ಸಹಕಾರ ನಗರ ರೈಲು ಹಳಿ ಪಕ್ಕದಲ್ಲಿಯೇ ವಾಕ್‌ ಹೊರಟಿದ್ದರು. ಹಿಂದಿನಿಂದ ವೇಗವಾಗಿ ಬಂದ ರೈಲು ಅವರನ್ನು ಗುದ್ದಿಕೊಂಡು ಹೊಯಿತು. ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಅವರಿಗೆ ರೈಲು ಬಂದ ಸದ್ದು ಕೇಳಿರಲಿಲ್ಲ. ರೈಲು ಗುದ್ದಿದ ರಭಸಕ್ಕೆ ದೇಹ ನೋಡಲಾಗದಷ್ಟು ಛಿದ್ರಗೊಂಡಿತ್ತು.

* * *

ಕಿವಿಯಲ್ಲಿಸಿಕ್ಕಿಸಿಕೊಂಡ ಇಯರ್‌ ಫೋನ್‌ನಲ್ಲಿ ಅಬ್ಬರದ ಸಂಗೀತ ಕೇಳುತ್ತ ಮೈಮರೆತು ಕಾಕ್ಸ್‌ಟೌನ್‌ ಬಳಿಯ ಜೀವನಹಳ್ಳಿ ರೈಲು ಹಳಿ ದಾಟುತ್ತಿದ್ದ ಅರ್ಷದ್‌ ರೈಲಿಗೆ ಬಲಿಯಾದ. ಪಾಪ, ಆತನಿಗಿನ್ನೂ 19ರ ಪ್ರಾಯ.

ಇದು ಕೇವಲ ಸೋಮಣ್ಣ, ಅರ್ಷದ್‌ ಮತ್ತು ವೃದ್ಧರೊಬ್ಬರ ಕತೆಯಲ್ಲ.

ಗಾಯತ್ರಿ ನಗರ ಮತ್ತು ಸುಬ್ರಮಣ್ಯ ನಗರದಿಂದ ನಿತ್ಯ ಇದೇ ರೈಲ್ವೆ ಹಳಿ ದಾಟಿ ಮಲ್ಲೇಶ್ವರಕ್ಕೆ ಬಂದು ಹೋಗುವನೂರಾರು ಮನೆಗೆಲಸದ ಮಹಿಳೆಯರು, ಅಡುಗೆಯವರು, ಕೂಲಿ ಕಾರ್ಮಿಕರು ಸಾವಿನ ಜತೆ ಸೆಣಸಾಟವಾಡುತ್ತಾರೆ.

ಹಳಿ ದಾಟಲು ಎರಡು ಸೇತುವೆಗಳಿದ್ದರೂ ಜನರು ಅವನ್ನು ಬಳಸುವುದೇ ಅಪರೂಪ. ಒಂದು ಪಾದಚಾರಿ ಸೇತುವೆ ತರಕಾರಿ,ಹಣ್ಣು, ಕಡಲೆಕಾಯಿ ಮಾರುವರ ಪಾಲಾಗಿದೆ. ಕುಡುಕರು, ಭಿಕ್ಷಕರು, ಬೀದಿನಾಯಿಗಳು ಮತ್ತು ದನಗಳು ಹಾಯಾಗಿ ಮಲಗಿರುತ್ತವೆ.

ಕ್ಲೂನಿ ಕಾನ್ವೆಂಟ್‌ ಬಳಿ ಇರುವ ಮತ್ತೊಂದು ಸೇತುವೆ ಹಿಮಾಲಯ ಪರ್ವತಕ್ಕೆ ಪೈಪೋಟಿ ಒಡ್ಡುವಷ್ಟು ಎತ್ತರವಾಗಿದೆ. ಅದನ್ನು ಹತ್ತಿ ಇಳಿದರೆ ಕಡಿದಾಡ ಬೆಟ್ಟ ಹತ್ತಿ ಇಳಿದ ಅನುಭವಾಗುತ್ತದೆ. ವಯಸ್ಸಾದವರಂತೂ ಈ ಸೇತುವೆ ಹತ್ತುವ ಧೈರ್ಯ ಮಾಡಲಾರರು. ಕ್ಲೂನಿ ಕಾನ್ವೆಂಟ್‌ ಮಕ್ಕಳು ಪ್ರತಿದಿನ ಮಣ ಭಾರದ ಸ್ಕೂಲ್‌ ಬ್ಯಾಗ್ ಹೊತ್ತು ಈ ‘ಪರ್ವತ ಸೇತುವೆ’ ಏರಿಳಿಯುತ್ತಾರೆ.

ಮಲ್ಲೇಶ್ವರ ರೈಲು ನಿಲ್ದಾಣದ ಹಳಿಗಳಲ್ಲಿ ನಡೆಯುವ ಇಂತಹ ಅವಘಡಗಳು ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ.ಈ ಭಾಗದ ಜನರಿಗೆ ಇದು ಅಭ್ಯಾಸವಾಗಿದೆ. ಇಂತಹ ಅವಘಡ ನಡೆದಾಗ ಎರಡು ದಿನ ತೆಪ್ಪಗೆ ಕಾಲುಸೇತುವೆ ಬಳಸುವ ಜನರು ಮೂರನೇ ದಿನ ಮತ್ತದೇ ಹಳಿದಾಟುವ ಕೆಲಸ ಆರಂಭಿಸುತ್ತಾರೆ.ಇದನ್ನು ತಡೆಯಲು ರೈಲ್ವೆ ಇಲಾಖೆ ಕೆಲವು ವರ್ಷಗಳ ಹಿಂದೆ ಹಳಿಗಳ ಮಧ್ಯೆ ಹಾಕಿರುವ ಎತ್ತರದ ತಂತಿಬೇಲಿಯಿಂದಲೂ ಜನರನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ರೈಲ್ವೆ: ಪ್ರತಿ ತಿಂಗಳು ಸರಾಸರಿ 138 ಸಾವು

ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ (ಆರ್‌ಪಿಎಫ್‌) ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಪ್ರಕಾರ ಬೆಂಗಳೂರು ವಿಭಾಗದಲ್ಲಿ ಪ್ರಸಕ್ತ ವರ್ಷ (ಸೆಪ್ಟೆಂಬರ್‌ವರೆಗೆ) 1,246 ಜನರು ರೈಲು ಹಳಿಗಳ ಮೇಲೆ ಪ್ರಾಣ ಕಳೆದುಕೊಂಡಿದ್ದಾರೆ.

ಅಂದರೆ, ತಿಂಗಳಿಗೆ ಸರಾಸರಿ 138 ಮತ್ತು ದಿನಕ್ಕೆ ನಾಲ್ವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಅಪಘಾತದಲ್ಲಿ ಬದುಕುಳಿದವರ ಸಂಖ್ಯೆ 112. ಇದರಲ್ಲಿ ಹಳಿ ದಾಟುವಾಗ ಪ್ರಾಣ ಕಳೆದುಕೊಂಡವರೇ ಹೆಚ್ಚು.

ರೈಲ್ವೆ ಕಾಯ್ದೆ 1989ರ ಸೆಕ್ಷನ್‌ 147 ಅನ್ವಯ ಹಳಿ ದಾಟುವುದು ಶಿಕ್ಷಾರ್ಹ ಅಪರಾಧ ಎನ್ನುತ್ತಾರೆ ರೈಲ್ವೆ ಇಲಾಖೆ ಅಧಿಕಾರಿಗಳು.

ಅಕ್ರಮವಾಗಿ ಹಳಿ ದಾಟುತ್ತಿದ್ದವರ ವಿರುದ್ಧ 2018ರಲ್ಲಿ 883 ಪ್ರಕರಣ ದಾಖಲಾಗಿದ್ದು, ₹3.68 ಲಕ್ಷ ದಂಡ ವಸೂಲು ಮಾಡಲಾಗಿದೆ. ಈ ವರ್ಷ ಸೆಪ್ಟೆಂಬರ್‌ವರೆಗೆ 683 ಪ್ರಕರಣ ದಾಖಲಾಗಿದ್ದು, ₹2.50 ದಂಡ ವಸೂಲು ಮಾಡಲಾಗಿದೆ.

ಬೋಗಿಗಳ ಮೆಟ್ಟಿಲು ಮೇಲೆ ನಿಂತು ಪ್ರಯಾಣಿಸುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತಿವೆ. 2018ರಲ್ಲಿ 1,771 ಮತ್ತು 2019ರ (ಸೆಪ್ಟೆಂಬರ್‌ವರೆಗೆ) 1,090 ಪ್ರಕರಣ ದಾಖಲಾಗಿವೆ.

1,193 ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಬೆಂಗಳೂರು ರೈಲ್ವೆ ಡಿವಿಜನ್‌ನ ಎಲ್ಲ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ತಂತಿಬೇಲಿ ಅಳವಡಿಸುವುದು, ಆವರಣ ಗೋಡೆ ನಿರ್ಮಿಸುವುದು ಕಷ್ಟದ ಕೆಲಸ ಎನ್ನುತ್ತಾರೆ ಆರ್‌ಪಿಎಫ್‌ ಬೆಂಗಳೂರು ವಿಭಾಗದ ಭದ್ರತಾ ಆಯುಕ್ತೆ ದೇವಸ್ಮಿತ ಚಟ್ಟೋಪಾಧ್ಯಾಯ ಬ್ಯಾನರ್ಜಿ.

ಯಶವಂತಪುರ ಸೇರಿದಂತೆ ಕೆಲವು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಸುರಕ್ಷತಾ ಗೋಡೆಗಳನ್ನು ಹಾರಿ ಬರುತ್ತಾರೆ. ಎಷ್ಟೋ ಬೇಲಿಗಳನ್ನು ಕಟ್‌ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನಗರದ 60ರಷ್ಟು ರೈಲು ನಿಲ್ದಾಣಗಳಲ್ಲಿ ಮೇಲು ಸೇತುವೆ, ಪಾದಚಾರಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಯಾರೂ ಅವನ್ನು ಬಳಸುತ್ತಿಲ್ಲ ಎನ್ನುವುದು ವಿಷಾದದ ಸಂಗತಿ ಎಂದು ಡಿವಿಜನಲ್‌ ರೈಲ್ವೆ ಮ್ಯಾನೇಜರ್‌ ಅಶೋಕ್‌ ವರ್ಮಾ ‘ಮೆಟ್ರೊ’ಗೆ ತಿಳಿಸಿದರು.

ಪ್ರತಿ ಪ್ಲಾಟ್‌ಫಾರ್ಮ್‌ ಮತ್ತು ಲೆವೆಲ್‌ ಕ್ರಾಸಿಂಗ್‌ ಬಳಿ ಗಾರ್ಡ್‌ಗಳನ್ನು ನೇಮಕ ಮಾಡಲು ಸಾಧ್ಯವಿಲ್ಲ. ಬೆಂಗಳೂರು ವಿಭಾಗದಲ್ಲಿ ಕೇವಲ 386 ಆರ್‌ಪಿಎಫ್‌ ಸಿಬ್ಬಂದಿ ಇದ್ದಾರೆ. ಶೀಘ್ರ 250 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದರು.

‘ಪ್ರಾಣದ ಹಂಗು ತೊರೆದು ಪ್ರಯಾಣಿಕರು ಏಕೆ ಹಳಿ ದಾಟುತ್ತಾರೆ ಗೊತ್ತಿಲ್ಲ. ಎಲ್ಲದಕ್ಕೂ ಹೆಚ್ಚಾಗಿ ಪ್ರಯಾಣಿಕರಿಗೆ ತಮ್ಮ ಪ್ರಾಣದ ಬಗ್ಗೆ ಕಾಳಜಿ ಇರಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಜಾಹೀರಾತು ಕೂಡ ನೀಡಲಾಗಿದೆ’ ಎನ್ನುತ್ತಾರೆ ರೈಲ್ವೆ ಇಲಾಖೆಯ ಈ ಅಧಿಕಾರಿಗಳು.

ಎತ್ತರದ ಸೇತುವೆ, ಲಿಫ್ಟ್‌ಗಳ ಕೊರತೆ

ನಗರದ ಬಹುತೇಕ ರೈಲು ನಿಲ್ದಾಣಗಳಲ್ಲಿ ಲಿಫ್ಟ್‌ಗಳಿಲ್ಲ. ಇದ್ದರೂ ಕೆಲಸ ಮಾಡಲ್ಲ. ಕೆಲಸ ಮಾಡಿದರೂ ಯಾರಿಗೂ ಕಾಣದಂತೆ ಮೂಲೆಯಲ್ಲಿರುತ್ತವೆ. ಜನರ ಉಪಯೋಗಕ್ಕೆ ಬರುತ್ತಿಲ್ಲ.

ಪ್ರಯಾಣಿಕರು ಸಂಚರಿಸಲು ನಿರ್ಮಿಸಿರುವ ಮೇಲು ಸೇತುವೆಗಳು ಅತ್ಯಂತ ಎತ್ತರವಾಗಿರುತ್ತವೆ. ವಯಸ್ಸಾದ ಪ್ರಯಾಣಿಕರು ಲಗ್ಗೇಜ್‌ ಹೊತ್ತು ಕಡಿದಾದ ಮೆಟ್ಟಿಲು ಏರುವುದು ಕಷ್ಟ. ಹೆಚ್ಚಿನ ಪಾದಚಾರಿ ಸೇತುವೆಗಳು ಸುರಕ್ಷಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT