ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ: 900ಕ್ಕೂ ಅಧಿಕ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ?

Last Updated 6 ಅಕ್ಟೋಬರ್ 2021, 16:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ಸುರಿದಿದ್ದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದ ವೇಳೆ ಮನೆಯಲ್ಲಿದ್ದ ಧವಸ ಧಾನ್ಯ, ವಿದ್ಯುನ್ಮಾನ ಉಪಕರಣಗಳು ಮತ್ತಿತರ ಸ್ವತ್ತುಗಳು ಹಾನಿಯಾಗಿರುವ 900ಕ್ಕೂ ಅಧಿಕ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಮಳೆಯಿಂದಾಗಿ ಪಶ್ಚಿಮ ವಲಯ ಹಾಗೂ ರಾಜರಾಜೇಶ್ವರಿ ನಗರ ವಲಯಗಳಲ್ಲಿ ಮಳೆಯಿಂದ ಅತಿ ಹೆಚ್ಚು ಹಾನಿ ಉಂಟಾಗಿತ್ತು. ಈ ಎರಡು ವಲಯಗಳಲ್ಲಿ 950ಕ್ಕೂ ಅಧಿಕ ಕುಟುಂಬಗಳ ಸ್ವತ್ತುಗಳಿಗೆ ಹಾನಿ ಉಂಟಾಗಿತ್ತು. ಯಾವ ಮನೆಯಲ್ಲಿ ಎಷ್ಟು ಸ್ವತ್ತುಗಳು ಹಾನಿಗೊಳಗಾಗಿವೆ ಎಂಬ ವಿವರಗಳನ್ನು ಬಿಬಿಎಂಪಿ ಅಧಿಕಾರಿಗಳು ಕಲೆಹಾಕಿದ್ದಾರೆ. ಸಂತ್ರಸ್ತ ಕುಟುಂಬದ ಬ್ಯಾಂಕ್‌ ಖಾತೆ ಹಾಗೂ ಕುಟುಂಬದ ಸದಸ್ಯರ ವಿವರಗಳನ್ನೂ ಪಡೆದು ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ.

‘ಪ್ರವಾಹ ಸಂತ್ರಸ್ತರ ಪಟ್ಟಿ ಸಿದ್ಧಪಡಿಸಲಾಗಿದೆ. ಆಯಾ ವಲಯ ಮಟ್ಟದಲ್ಲಿ ಜನಪ್ರತಿನಿಧಿಗಳು ಗುರುವಾರದಿಂದ ಪರಿಹಾರ ವಿತರಣೆ ಕಾರ್ಯವನ್ನು ಆರಂಭಿಸಲಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ವಯ ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ವಿತರಿಸಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಪಶ್ಚಿಮವಲಯದಲ್ಲಿ ಮಹಾಲಕ್ಷ್ಮೀ ಲೇಟೌಟ್‌ ಕ್ಷೇತ್ರದಲ್ಲಿ 491, ಗೋವಿಂದರಾಜಪುರ ಕ್ಷೇತ್ರದ ವ್ಯಾಪ್ತಿಯಲ್ಲಿ 158 ಹಾಗೂ ರಾಜಾಜಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 60 ಕುಟುಂಬಗಳ ಸ್ವತ್ತುಗಳು ಮಳೆಯಿಂದ ಹಾನಿಗೊಳಗಾಗಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

‘ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಮಹಾಲಕ್ಷ್ಮೀ ಬಡಾವಣೆ, ಕುರುಬರಹಳ್ಳಿ, ಕಮಲಾನಗರ, ವೃಷಭಾವತಿನಗರ, ನಂದಿನಿ ಬಡಾವಣೆ ಪ್ರದೇಶಗಳಲ್ಲಿ, ಗೋವಿಂದರಾಜನಗರ ಕ್ಷೇತ್ರದ ನಾಯಂಡಹಳ್ಳಿ ಹಾಗೂ ರಾಜಾಜಿನಗರ ಕಾಮಾಕ್ಷಿಪಾಳ್ಯ ಪ್ರದೇಶಗಳ ನಿವಾಸಿಗಳು ಮಳೆಯಿಂದ ಹಾನಿ ಅನುಭವಿಸಿದ್ದಾರೆ. ಇಂತಹ ಸಂತ್ರಸ್ತ ಕುಟುಂಬಗಳ ವಿವರ ಕಲೆಹಾಕಿದ್ದೇವೆ. ಗುರುವಾರದೊಳಗೆ ಸಂತ್ರಸ್ತರ ಪಟ್ಟಿ ಅಂತಿಮಗೊಳ್ಳಲಿದೆ’ ಎಂದು ಪಶ್ಚಿಮ ವಲಯದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಮ್ಮ ವಲಯದಲ್ಲಿ 254 ಕುಟುಂಬಗಳು ಮಳೆಯಿಂದ ನಷ್ಟ ಅನುಭವಿಸಿವೆ. ಕೊಟ್ಟಿಗೆಪಾಳ್ಯದಲ್ಲಿ 120ಕ್ಕೂ ಅಧಿಕ ಕುಟುಂಬಗಳು ತೊಂದರೆ ಅನುಭವಿಸಿವೆ. ನಾಗರಬಾವಿ, ಜ್ಞಾನಭಾರತಿ, ದೊಡ್ಡಬಿದಿರಕಲ್ಲು, ಹೇರೋಹಳ್ಳಿ ಪ್ರದೇಶಗಳಲ್ಲೂ ಸಂತ್ರಸ್ತ ಕುಟುಂಬಗಳ ಪಟ್ಟಿ ತಯಾರಿಸಿದ್ದೇವೆ’ ಎಂದು ಆರ್.ಆರ್.ನಗರ ವಲಯದ ಅಧಿಕಾರಿಯೊಬ್ಬರು ತಿಳಿಸಿದರು.

‘ಮಳೆಯಿಂದ ಸ್ವತ್ತುಗಳು ನಷ್ಟ ಉಂಟಾದಾದ ಸಂತ್ರಸ್ತ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತುರ್ತಾಗಿ ಗರಿಷ್ಠ ₹ 10 ಸಾವಿರದವರೆಗೆ ಪರಿಹಾರ ನೀಡಲು ಅವಕಾಶ ಇದೆ’ ಎಂದರು.

ಮತ್ತೆ ಬಿರುಸಿನ ಮಳೆ

ಭಾನುವಾರ ಜೋರಾಗಿದ್ದ ಮಳೆಯ ಅಬ್ಬರ ಸೋಮವಾರ ಮತ್ತು ಮಂಗಳವಾರ ಕಡಿಮೆಯಾಗಿತ್ತು. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೂ ನಗರದಾದ್ಯಂತ ಬಿಡುವಿಲ್ಲದೆ ಮಳೆ ಸುರಿದಿದೆ. ಬುಧವಾರ ಬೆಳಿಗ್ಗೆ ಮತ್ತು ಮಧ್ಯಾಹ್ನವೂ ನಗರದ ವಿವಿಧ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದೆ.

‘ಮಂಗಳವಾರ ರಾತ್ರಿ ಬಳಿಕ ನಗರದಾದ್ಯಂತ ಜೋರಾಗಿ ಮಳೆಯಾಗಿದೆ. ಆದರೆ, ಮಳೆಯಿಂದ ಹಾನಿ ಉಂಟಾದ ಬಗ್ಗೆಸಹಾಯವಾಣಿಗೆ ಯಾವುದೇ ದೂರು ಬಂದಿಲ್ಲ. ಮರಗಳು ಧರೆಗೆ ಉರುಳಿ ಸಮಸ್ಯೆ ಆದ ಬಗ್ಗೆಯೂ ಯಾರೂ ಗಮನಕ್ಕೆ ತಂದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಮೆಟ್ರೊ ಮಾರ್ಗದ ಪಿಲ್ಲರ್‌ ಬುಡ ದುರಸ್ತಿ

ಕೆಂಗೇರಿ ಹಾಗೂ ಜ್ಞಾನಭಾರತಿ ಪ್ರದೇಶದಲ್ಲಿ ಭಾನುವಾರ ಸುರಿದ ಮಳೆಗೆ ನಮ್ಮ ಮೆಟ್ರೊ ಹೊಸ ಮಾರ್ಗದ ಕಾಂಕ್ರೀಟ್‌ ಪಿಲ್ಲರ್‌ ಒಂದರ (ಸಂಖ್ಯೆ 489) ಬುಡದ ಮಣ್ಣು ಕೊಚ್ಚಿ ಹೋಗಿತ್ತು. ಇಲ್ಲಿ ಉಂಟಾಗಿದ್ದ ಹೊಂಡಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ದುರಸ್ತಿಗೊಳಿಸಿದೆ.

‘ಮಳೆಯಿಂದ ಮೆಟ್ರೊ ಮಾರ್ಗದ ಯಾವುದೇ ಪಿಲ್ಲರ್‌ಗೂ ಸಮಸ್ಯೆ ಆಗಿಲ್ಲ. ತಳದಲ್ಲಿ ಗಟ್ಟಿ ಶಿಲೆ ಸಿಗುವವರೆಗೆ ನೆಲವನ್ನು ಕೊರೆದು, ಸಾಕಷ್ಟು ಆಳದವರೆಗೆ ತಳಪಾಯ ಅಳವಡಿಸಿರುತ್ತೇವೆ. ಮೇಲ್ಮೈನ ಮಣ್ಣು ಕೊಚ್ಚಿ ಹೋದರೆ ತಳಪಾಯಕ್ಕೆ ಅಪಾಯವಿಲ್ಲ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವೃಷಭಾವತಿ ನಾಲೆಯ ‍ಪಕ್ಕದಲ್ಲಿ ಸಾಗುವ ಮೆಟ್ರೊ ಮಾರ್ಗದ ಕಂಬವೊಂದರ ಬಳಿಯ ಮಣ್ಣು ಮಳೆ ನೀರು ಹರವಿನ ರಭಸಕ್ಕೆ ಕೊಚ್ಚಿಹೋಗಿತ್ತು. ಇದರಿಂದ ಮೆಟ್ರೊ ಪಿಲ್ಲರ್‌ಗಳಿಗೆ ಯಾವುದೇ ಅಪಾಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT