ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಸಂಗ್ರಹ: ಪ್ಲಂಬರ್‌ಗಳಿಗೆ ಗುರಿ

ಜಲಮಂಡಳಿಯಿಂದ ನೀರು ಉಳಿಸುವ ಹೊಸ ತಂತ್ರಜ್ಞಾನಗಳ ಅರಿವು
Published 20 ಮಾರ್ಚ್ 2024, 14:53 IST
Last Updated 20 ಮಾರ್ಚ್ 2024, 14:53 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಬ್ಬರೂ ಆರು ಕಟ್ಟಡಗಳಿಗೆ ಮಳೆ ಸಂಗ್ರಹ ಪದ್ಧತಿ ಅಳವಡಿಸಬೇಕು ಎಂದು ಪ್ಲಂಬರ್‌ಗಳಿಗೆ ಜಲಮಂಡಳಿ ಗುರಿ ನಿಗದಿ ಪಡಿಸಿದೆ.

ಜಲಮಂಡಳಿಯ ನೋಂದಾಯಿತ ಪ್ಲಂಬರ್‌ಗಳಿಗೆ ನೀರು ಉಳಿಸುವ ಹೊಸ ತಂತ್ರಜ್ಞಾನಗಳ ಬಗ್ಗೆ ಕಾರ್ಯಾಗಾರ ನಡೆಸಿದ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌, ‘ಮಳೆ ನೀರು ಸಂಗ್ರಹ ಹಾಗೂ ಮರುಪೂರಣಕ್ಕೆ ಪ್ಲಂಬರ್‌ಗಳು ಆದ್ಯತೆ ನೀಡಬೇಕು. ನಿಯಮಗಳ ಅನುಸಾರ ಕಟ್ಟಡಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಸಿಕೊಳ್ಳುವಂತೆ ಜನರ ಮನವೊಲಿಸಬೇಕು’ ಎಂದು ಹೇಳಿದರು.

‘ಅಂತರ್ಜಲ ಕುಸಿತದಿಂದ ನಗರದಲ್ಲಿ ನೀರಿನ ಕೊರತೆ ಉಂಟಾಗಿದೆ. ನೀರಿನ ಸಂರಕ್ಷಣೆ ಹಾಗೂ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಕರೆ ನೀಡಿದರು.

‘ಎರಡು ಕೊಡ ಕುಡಿಯುವ ನೀರಿಗಾಗಿ ನನ್ನ ತಾಯಿ ಪಡುತ್ತಿದ್ದ ಕಷ್ಟ ಇನ್ನೂ ನೆನೆಪಿದೆ. ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲ. ಆದರೆ, ಜನರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಹಳಷ್ಟು ಶುದ್ಧ ನೀರು ಚರಂಡಿ ಪಾಲಾಗುತ್ತಿದೆ. 1,000 ಲೀಟರ್‌ ನೀರನ್ನು ಬೆಂಗಳೂರಿನ ಮನೆಗಳಿಗೆ ಸರಬರಾಜು ಮಾಡಲು ಜಲಮಂಡಳಿಗೆ ಸುಮಾರು ₹95 ವೆಚ್ಚವಾಗುತ್ತದೆ. ಆದರೆ ನಾವು ರಿಯಾಯಿತಿ ದರವಾದ ₹45ಕ್ಕೆ ಒದಗಿಸುತ್ತಿದ್ದೇವೆ’ ಎಂದರು.

‘ಜಲಮಂಡಳಿಯ 11 ಸಾವಿರ ಕೊಳವೆಬಾವಿಗಳನ್ನು ಸುಸ್ಥಿಯಲ್ಲಿಡುವುದು ನಮ್ಮ ಪ್ರಮುಖ ಆದ್ಯತೆ. ಕಡಿಮೆ ನೀರು ದೊರೆಯುತ್ತಿರುವ ಕೊಳವೆಬಾವಿ ಹಾಗೂ ಬತ್ತಿ ಹೋಗಿರುವ ಕೊಳವೆಬಾವಿಗಳನ್ನು ಅಂತರ್ಜಲ ಮರುಪೂರಣಕ್ಕೆ ಬಳಸಲಾಗುತ್ತದೆ. ಇದಕ್ಕಾಗಿ ಜಲಮಂಡಳಿಯ ಅಧಿಕಾರಿಗಳು ಆಯಾ ವಲಯಗಳ ಪ್ಲಂಬರ್‌ಗಳನ್ನು ಗುರುತಿಸಿ ಕೆಲಸ ವಹಿಸಬೇಕು’ ಎಂದು ಸೂಚನೆ ನೀಡಿದರು.

ಹೋಳಿಹಬ್ಬ: ರೈನ್‌ ಡ್ಯಾನ್ಸ್‌ಗೆ ನೀರಿಲ್ಲ

‘ಹೋಳಿ ಹಬ್ಬದ ಸಂದರ್ಭದಲ್ಲಿ ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್ ಪೂಲ್‌ ಡ್ಯಾನ್ಸ್‌ಗಳಿಗೆ ಕಾವೇರಿ ನೀರು ಹಾಗೂ ಕೊಳವೆಬಾವಿ ನೀರು ಬಳಸಬಾರದು’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ಸೂಚಿಸಿದ್ದಾರೆ.

‘ಹೋಳಿ ಹಬ್ಬ ಸಾಂಸ್ಕೃತಿಕ ಆಚರಣೆಯ ಹಬ್ಬ. ನಾಗರಿಕರು ತಮ್ಮ ಮನೆಗಳಲ್ಲಿ ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ನಿಷೇಧವೂ ಇಲ್ಲ. ಆದರೆ ವಾಣಿಜ್ಯ ಉದ್ದೇಶಕ್ಕಾಗಿ ರೈನ್ ಡ್ಯಾನ್ಸ್ ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT