ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನಗಳಲ್ಲಿ 189 ಮಿ.ಮೀ ಮಳೆ

Last Updated 11 ಸೆಪ್ಟೆಂಬರ್ 2020, 3:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಳೆದ 10 ದಿನಗಳಲ್ಲಿ 189.3 ಮಿಲಿ ಮೀಟರ್ ಮಳೆಯಾಗಿದೆ.

10 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಿರುವ ಮಳೆಯ ಅಂಕಿ–ಅಂಶ ಗಮನಿಸಿದರೆ 2015ರಲ್ಲಿ ಅತೀ ಹೆಚ್ಚು 513.8 ಮಿಲಿ ಮೀಟರ್ ಮಳೆಯಾಗಿದೆ. 2013ರಲ್ಲಿ 352.6 ಮಿ.ಮೀಟರ್, 2014ರಲ್ಲಿ 319 ಮಿ.ಮೀ ಮಳೆ ಸುರಿದಿದೆ. 2016ರಲ್ಲಿ ಅತೀ ಕಡಿಮೆ 33 ಮಿ. ಮೀ. ಮಳೆಯಾಗಿದೆ.

’ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಮುಂಗಾರು ಮುಕ್ತಾಯಗೊಂಡು ಹಿಂಗಾರು ಆರಂಭವಾಗುತ್ತದೆ. ಮುಂಗಾರಿನ ಮಳೆ ಜೂನ್‌ನಿಂದ ಆಗಸ್ಟ್‌ ತನಕ ಹೆಚ್ಚು ಮಳೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳಿಗೆ ವಿಸ್ತರಿಸಿದೆ’ ಎಂದುಕೃಷಿ ಹವಾಮಾನ ತಜ್ಞಶಿವರಾಮ್ ಹೇಳಿದರು.

‘ಕರಾವಳಿ ಪ್ರದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಿ ಜಲಾಶಯಗಳು ತುಂಬಿಕೊಳ್ಳುತ್ತವೆ. ಆದರೆ, ಸೆಪ್ಟೆಂಬರ್‌ನಲ್ಲಿ ಆಗುವ ಮಳೆ ಇಡೀ ರಾಜ್ಯವನ್ನು ವ್ಯಾಪಿಸುತ್ತದೆ. ಕಳೆದ ಕೆಲ ವರ್ಷಗಳ ಅಂಕಿ ಅಂಶ ನೋಡಿದರೆ ಸೆಪ್ಟೆಂಬರ್‌ನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ’ ಎಂದರು.

‘ಸೆಪ್ಟೆಂಬರ್ ಅಂತ್ಯದ ವೇಳೆಗೆ ಇನ್ನಷ್ಟು ಮಳೆಯಾಗಲಿದೆ. ವಾರ್ಷಿಕವಾಡಿಕೆಯ ಮಳೆ ಈಗಾಗಲೇ ಸುರಿದಿದೆ. ಮುಂದೆ ಬರುವುದೆಲ್ಲಾ ಹೆಚ್ಚುವರಿ ಮಳೆ’ ಎಂದರು.

ಮುಂದುವರಿದ ಮಳೆ: ಮನೆಗಳಿಗೆ ನೀರು ನಗರದಲ್ಲಿ ಮಳೆ ಆರ್ಭಟ ಬುಧವಾರ ರಾತ್ರಿಯೂ ಮುಂದುವರಿದು ಮತ್ತೆ ಅವಾಂತರ ಸೃಷ್ಟಿಸಿತು. ಮಳೆಗೆ ಕೆಲವು ಬಡಾವಣೆಗಳು ನೀರಿನಲ್ಲಿ ಮುಳುಗೆದ್ದವು.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ನಾಯಂಡಹಳ್ಳಿ ಸಮೀಪದ ಪ್ರಮೋದ್ ಲೇಔಟ್‌ನಲ್ಲಿ ರಾಜಕಾಲುವೆ ತಡೆಗೋಡೆ ಒಡೆದು ಮನೆಗಳಿಗೆ ನೀರು ನುಗ್ಗಿತ್ತು. ಮನೆಯಲ್ಲಿ ಐದು ಅಡಿಯಿಂದ ಎಂಟು ಅಡಿಗಳ ತನಕ ನಿಂತಿದ್ದ ನೀರು ಹೊರ ಹಾಕಲು ಹರಸಾಹಸ ಪಟ್ಟರು.

ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ದವಸ–ಧಾನ್ಯ, ಬಟ್ಟೆಗಳು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿದ್ದವು. ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು, ಬೈಕ್‌ಗಳು ಜಲಾವೃತಗೊಂಡಿದ್ದವು. ಇಡೀ ರಾತ್ರಿ ಜನ ಸಂಕಷ್ಟ ಅನುಭವಿಸುತ್ತಿದ್ದರೆ ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಾಯಿ ಲೇಔಟ್ ಮತ್ತೆ ಜಲಾವೃತಹೆಣ್ಣೂರು ಮುಖ್ಯರಸ್ತೆ ವಡ್ಡರಪಾಲ್ಯದಲ್ಲಿ ಬುಧವಾರವೂ ಮನೆಗಳಿಗೆ ನೀರು ನುಗ್ಗಿತ್ತು.

ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿತು. ರಸ್ತೆಯಲ್ಲೂ ಮೂರು ಅಡಿಗೂ ಹೆಚ್ಚು ನೀರು ಸಂಜೆ ವರೆಗೆ ಹರಿಯುತ್ತಲೇ ಇತ್ತು. ಮನೆಯಿಂದ ಹೊರ ಬಂದು ಅಗತ್ಯ ವಸ್ತು ಖರೀದಿ ಮಾಡಲೂ ಸಾಧ್ಯವಾಗದೆ ಜನ ಪರದಾಡಿದರು.

ದಾನಿಗಳುಕುಡಿಯುವ ನೀರು ಮತ್ತು ಆಹಾರದ ಪೊಟ್ಟಣಗಳನ್ನು ಮನೆ–ಮನೆಗಳಿಗೆ ವಿತರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT