ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಧಾರಾಕಾರ ಮಳೆ- ಹೊಳೆಯಂತಾದ ರಸ್ತೆಗಳು

ನಗರದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಸಾಧ್ಯತೆ
Published 9 ಅಕ್ಟೋಬರ್ 2023, 23:04 IST
Last Updated 9 ಅಕ್ಟೋಬರ್ 2023, 23:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಹುತೇಕ ಕಡೆ ಸೋಮವಾರ ಸಂಜೆ ಆರಂಭವಾದ ಮಳೆ ತಡರಾತ್ರಿ ತನಕ ಅಬ್ಬರಿಸಿತು. ಭಾರಿ ಮಳೆಯಿಂದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯಿತು. ಗುಡುಗಿನ ಆರ್ಭಟ ಜೋರಾಗಿತ್ತು. ವಾಹನ ಸವಾರರು ರಸ್ತೆಗಳಲ್ಲಿ ಸಿಲುಕಿ ಪರದಾಡಿದರು.

ಪ್ರಮುಖ ಜಂಕ್ಷನ್‌ಗಳಲ್ಲಿ ಮಳೆಯ ನೀರು ಆವರಿಸಿದ್ದರ ಪರಿಣಾಮ ವಾಹನಗಳು ಮುಂದಕ್ಕೆ ಸಾಗಲು ಸಾಧ್ಯವಾಗದೇ ಸಾಲುಗಟ್ಟಿ ನಿಂತಿದ್ದವು. ನಗರದ ಉತ್ತರ ಭಾಗದ ಹಲವು ಬಡಾವಣೆಗಳಲ್ಲಿ ಧಾರಾಕಾರ ಮಳೆಯಾಗಿದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲೂ ಭಾರಿ ಮಳೆಯಾಗಿದ್ದು ರೂಪೇನ ಅಗ್ರಹಾರದ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಆಗಿತ್ತು.
ಹೆಬ್ಬಾಳದಿಂದ ಕಸ್ತೂರಿ ಗಾರ್ಡನ್‌ಗೆ ತೆರಳುವ ರಸ್ತೆಯಲ್ಲಿ ಹೊಳೆಯಂತೆ ನೀರು ನಿಂತಿತ್ತು. ತುಮಕೂರು ರಸ್ತೆಯ ಹೆಸರಘಟ್ಟ ಕ್ರಾಸ್‌ನಲ್ಲಿ ರಸ್ತೆಯಲ್ಲಿ ನಾಲ್ಕು ಅಡಿಯಷ್ಟು ನೀರು ಸಂಗ್ರಹಗೊಂಡು ಬಸ್, ಲಾರಿ ಹಾಗೂ ಬೈಕ್‌ ಚಾಲಕರು ಪರದಾಡಿದರು.

ಮೈಸೂರು ರಸ್ತೆಯ ನಾಯಂಡಹಳ್ಳಿ, ಹೊಸೂರು ರಸ್ತೆಯ ಹರಲೂರು ಜಂಕ್ಷನ್‌, ಶೇಷಾದ್ರಿಪುರದ ರೈಲ್ವೆ ಕೆಳಸೇತುವೆ, ಬನ್ನೇರುಘಟ್ಟದ ನಾಗಾರ್ಜುನ ಜಂಕ್ಷನ್‌, ಎಂ.ಜಿ. ರಸ್ತೆಯ ಅನಿಲ್‌ ಕುಂಬ್ಳೆ ವೃತ್ತ, ಕಲ್ಯಾಣ್‌ ನಗರದ ಸೇತುವೆ, ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ಬಳಿ, ಹೆಣ್ಣೂರಿನ ಥಣಿಸಂದ್ರದ ಜಂಕ್ಷನ್‌ನಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು. ಭಾನುವಾರ ರಾತ್ರಿಯೂ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿತ್ತು.

ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಪೀಣ್ಯ, ಸದಾಶಿವನಗರ, ಕೋರಮಂಗಲ, ಮಡಿವಾಳ, ಬೊಮ್ಮನಹಳ್ಳಿ, ಎಚ್‌.ಎಸ್‌.ಆರ್‌. ಲೇಔಟ್‌, ಸರ್ಜಾಪುರ, ಬಿಟಿಎಂ ಲೇಔಟ್‌, ರಾಜರಾಜೇಶ್ವರಿನಗರ, ಕೆಂಗೇರಿ, ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ಶಿವಾಜಿನಗರ, ಅಶೋಕನಗರ ಹಾಗೂ ಸುತ್ತಮುತ್ತ ಭಾರಿ ಮಳೆಯಾಗಿದೆ.

ಮಡಿವಾಳದ ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಸರ್ಜಾಪುರ ರಸ್ತೆಯ ಐಬಲೂರು ಜಂಕ್ಷನ್‌, ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆ, ರಾಜರಾಜೇಶ್ವರಿನಗರದ ನಾಯಂಡನಹಳ್ಳಿ ಜಂಕ್ಷನ್‌, ಮಾರುತಿನಗರ, ಶಿವಾಜಿನಗರ, ಶಾಂತಿನಗರದ ಮುಖ್ಯರಸ್ತೆ, ಕೆ.ಎಚ್‌.ರಸ್ತೆ, ಕೋರಮಂಗಲ 80 ಅಡಿ, ಬಿಟಿಎಂ ಲೇಔಟ್‌ನ ಹಲವು ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡಿತ್ತು.

ನಾಯಂಡನಹಳ್ಳಿ ಮೆಟ್ರೊ ನಿಲ್ದಾಣ ಪಕ್ಕದ ರಾಜಕಾಲುವೆಯಲ್ಲಿ ನೀರು ತುಂಬಿಹರಿಯಿತು. ಪಕ್ಕದ ರಸ್ತೆ ಮೇಲೆಯೂ ರಾಜಕಾಲುವೆ ನೀರು ಹರಿಯಿತು. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಸವಾರರು ಮಳೆಯಲ್ಲಿ ಸಿಲುಕಿಕೊಂಡಿದ್ದರು. ದಿಢೀರ್ ಸುರಿದ ಮಳೆಯಿಂದ ಕೆಲವು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

ತುಮಕೂರು ರಸ್ತೆಯ ಹೆಸರಘಟ್ಟ ಕ್ರಾಸ್‌ನಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು.
ತುಮಕೂರು ರಸ್ತೆಯ ಹೆಸರಘಟ್ಟ ಕ್ರಾಸ್‌ನಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು.
ಥಣಿಸಂದ್ರ ರಸ್ತೆಯಲ್ಲಿ ಆವರಿಸಿದ್ದ ನೀರಿನಲ್ಲಿ ಬಿಎಂಟಿಸಿ ಬಸ್‌ ಸಾಗಿತು.
ಥಣಿಸಂದ್ರ ರಸ್ತೆಯಲ್ಲಿ ಆವರಿಸಿದ್ದ ನೀರಿನಲ್ಲಿ ಬಿಎಂಟಿಸಿ ಬಸ್‌ ಸಾಗಿತು.
ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ಸಂಗ್ರವಾಗಿದ್ದ ನೀರು.
ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ಸಂಗ್ರವಾಗಿದ್ದ ನೀರು.
ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಳೆ ಪ್ರಮಾಣ(ಮಿ.ಮೀನಲ್ಲಿ) .

ಉರುಳಿದ ಮರ ವಿದ್ಯುತ್‌ ಕಂಬ 

ಬಸವೇಶ್ವರನಗರ ಹೆಬ್ಬಾಳದ ವಿ.ನಾಗೇನಹಳ್ಳಿ ಯಲಹಂಕದಿಂದ ದೊಡ್ಡಬಳ್ಳಾಪುರಕ್ಕೆ ತೆರೆಳುವ ರಸ್ತೆಯಲ್ಲಿ ಮರಗಳು ಉರುಳಿದ್ದವು. ಸ್ಥಳಕ್ಕೆ ತೆರಳಿದ ಬಿಬಿಎಂಪಿ ಸಿಬ್ಬಂದಿ ಸಂಚಾರ ಪೊಲೀಸರ ನೆರವಿನಿಂದ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಜಾನ್ಸ್ ವೃತ್ತದಲ್ಲಿ ಮರ ಹಾಗೂ ವಿದ್ಯುತ್‌ ಕಂಬ ಉರುಳಿಬಿದ್ದು ವಾಹನ ಸಂಚಾರ ಬಂದ್‌ ಆಗಿತ್ತು. ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ತೆರಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT