ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದ 209 ಕಡೆ ಪ್ರವಾಹದ ಭೀತಿ: ಬಿಬಿಎಂಪಿ ಆಯುಕ್ತ

ಮಳೆ ಅನಾಹುತ ತಡೆಗೆ ಪಾಲಿಕೆಗೆ ₹50 ಕೋಟಿ ಅನುದಾನ: ಮಂಜುನಾಥ ಪ್ರಸಾದ್‌
Last Updated 7 ಆಗಸ್ಟ್ 2020, 11:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಧಿಕ ಮಳೆಯಾದರೆ ಪ್ರವಾಹ ಸ್ಥಿತಿ ಉಂಟಾಗುವ 209 ಪ್ರದೇಶಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 153 ಸೂಕ್ಷ್ಮ ಹಾಗೂ 56 ಅತಿ ಸೂಕ್ಷ್ಮ ಪ್ರದೇಶಗಳು ಎಂದು ಪರಿಗಣಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಮಳೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

'ಮಳೆ ಅನಾಹುತ ತಡೆಗೆ ಈ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಮಾಡಲಾಗಿದೆ. ಪ್ರವಾಹದ ಬಗ್ಗೆ ಮುಂಚಿತವಾಗಿ ಮಾಹಿತಿ ತಿಳಿಯಲು 28 ಕಡೆ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಉಳಿದ ಕಡೆಯೂ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ತಿಳಿದು ಸ್ಥಳಿಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಸುಲಭವಾಗಲಿದೆ'ಎಂದರು.

ಪಾಲಿಕೆಗೆ ₹50 ಕೋಟಿ: ಮಳೆ ಬಂದಾಗ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಸಮಸ್ಯೆಗಳಾಗುತ್ತದೆ. ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲು ಕಂದಾಯ ಇಲಾಖೆಯಿಂದ ಪಾಲಿಕೆಗೆ ₹50 ಕೋಟಿ ಅನುದಾನ ನೀಡಲಾಗಿದೆ. ನಗರದ ಪ್ರತೀ ನಿಮಿಷ ಮಳೆಯ ಅಂಕಿ ಅಂಶ, ಯಾವ ಪ್ರದೇಶದಲ್ಲಿ ಮಳೆ ಹೆಚ್ಚಾಗಬಹುದು, ಪ್ರವಾಹ ಭೀತಿ ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳಲು ರೇಡಾರ್ ಅಳವಡಿಸಲು ₹15 ಕೋಟಿ ವೆಚ್ಚ ಮಾಡಲಾಗುತ್ತದೆ. ₹35 ಕೋಟಿ ವೆಚ್ಚದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಯೋಜನೆ ರೂಪಿಸಲು ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ. ಇದು ಕೇಂದ್ರ ಸರ್ಕಾರದ ಅನುದಾನ ಆಗಿದ್ದು, ಪಾಲಿಕೆಯು ಯೋಜನೆ ರೂಪಿಸಬೇಕಾಗಿದೆ ಎಂದರು.

'ನಗರದಲ್ಲಿ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಯಂತೆ 185 ಮಿ.ಮೀ ಮಳೆಯಾಗಬೇಕು. ಆದರೆ, ಈ ವರ್ಷ ವಾಡಿಕೆಗಿಂತ ಶೇ 65ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ 28ರಷ್ಟು ಕಡಿಮೆ ಮಳೆಯಾಗಿದೆ'ಎಂದು ಅವರು ಹೇಳಿದರು.

28 ತಂಡಗಳ ನಿಯೋಜನೆ:'ಮಳೆ ಬಂದಾಗ ಕೊಂಬೆ ರೆಂಬೆಗಳು ಬೀಳುತ್ತವೆ. ವಿಧಾನಸಭಾ ಕ್ಷೇತ್ರವಾರು ಮರಗಳ ನಿರ್ವಹಣೆಗೆ ಈ ಸಲ 28 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಬಿದ್ದಿರುವ ಮರಗಳನ್ನು ತೆರವುಗೊಳಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಪತ್ತೆ ಹಚ್ಚುವ ಸೌಲಭ್ಯವಿದೆ. ಎಲ್ಲೇ ದೂರು ಬಂದರೂ ಆ ತಂಡಗಳನ್ನು ಕೂಡಲೇ ಸ್ಥಳಕ್ಕೆ ಕಳಿಸಲಾಗುತ್ತದೆ. ಅವಶ್ಯಕ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಕೊಡಲಾಗಿದೆ. ಪಾಲಿಕೆಯ 9 ಕಡೆ ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ'ಎಂದು ಅವರು ಮಾಹಿತಿ ನೀಡಿದರು.

ಎಂಜಿನಿಯರ್‌ಗಳಿಗೆ ಹೊಣೆ: ‘ಮಳೆ ಅನಾಹುತಗಳನ್ನು ತಡೆಯುವ ಹೊಣೆಯು ಪಾಲಿಕೆಯ ವಲಯ ಮಟ್ಟದ ಎಂಜಿನಿಯರ್‌ಗಳ ಮೇಲಿದೆ. ಹಾಗಾಗಿ ಕೋವಿಡ್‌ ಕರ್ತವ್ಯಗಳಿಗೆ ಅವರನ್ನು ಬಳಸುವುದನ್ನು ಕಡಿಮೆ ಮಾಡಿದ್ದೇವೆ’ ಎಂದರು.

‘ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕತ್ತರಿಸುವ ಹಾಗೂ ಮಳೆಗಾಲದಲ್ಲಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ತಂಡಗಳನ್ನು ಕೋವಿಡ್‌ ಕಾರ್ಯಕ್ಕೆ ಬಳಸಿಲ್ಲ. ಈ ತಂಡಗಳು ಮಳೆಗಾಲದಲ್ಲಿ ತುರ್ತು ನಿರ್ವಹಣೆ ಕಾರ್ಯಗಳಿಗೆ ಸನ್ನದ್ಧವಾಗಿವೆ’ ಎಂದು ತಿಳಿಸಿದರು.

ಮೂಲಸೌಕರ್ಯ ವಿಭಾಗಕ್ಕೆ ರಸ್ತೆ ನಿರ್ವಹಣೆ ಹೊಣೆ:'ನಗರದಲ್ಲಿ 1,400 ಕಿ.ಮೀ ಪ್ರಮುಖ ರಸ್ತೆಗಳಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ವಲಯಗಳಿಗೆ ನೀಡಲಾಗಿತ್ತು. ಆದರೆ, ಪ್ರಮುಖ ರಸ್ತೆಗಳು ಎರಡು ವಲಯಗಳಿಗೆ ಬರುತ್ತಿದ್ದ ಕಾರಣ ಮತ್ತೆ ಅದನ್ನು ಪಾಲಿಕೆ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ನೀಡಲಾಗಿದೆ'ಎಂದರು.

’ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿ ಗುಂಡಿಗಳು ಬೀಳುವ ಸಂಭವವಿದ್ದು, ಪಾಲಿಕೆ ವತಿಯಿಂದ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕದಿಂದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ‘ ಎಂದರು.

ಪಾಲಿಕೆಯ ವಿಶೇಷ ಆಯುಕ್ತರಾದ ಜಿ.ಮಂಜುನಾಥ್‌, ರಾಜೇಂದ್ರ ಚೋಳನ್‌, ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್‌.ವೆಂಕಟೇಶ್‌, ಮುಖ್ಯ ಎಂಜಿನಿಯರ್‌ಗಳಾದ ಬಿ.ಎಸ್‌. ಪ್ರಹ್ಲಾದ್‌, ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT