ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ₹ 500 ಮಾಸಾಶನ ಒದಗಿಸುವಂತೆ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸಲು ರೈತರ ಆಗ್ರಹ * ಸಿ.ಎಂ ಜತೆಗೆ ಚರ್ಚಿಸುವ ಭರವಸೆ
Last Updated 16 ಫೆಬ್ರುವರಿ 2020, 22:24 IST
ಅಕ್ಷರ ಗಾತ್ರ

ಬೆಂಗಳೂರು: 60 ವರ್ಷ ವಯಸ್ಸಾದ ರೈತರಿಗೆ ಕುಟುಂಬ ಭದ್ರತೆ ದೃಷ್ಟಿಯಿಂದ ತಲಾ ₹ 500 ಮಾಸಾಶನ, ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹ 45 ಸೇರಿದಂತೆ ವಿವಿಧ ಬೇಡಿಕೆಗಳನ್ನು 2020–21ನೇ ಸಾಲಿನ ಬಜೆಟ್‌ನಲ್ಲಿ ಅಳವಡಿಸುವಂತೆ ರೈತ ಮುಖಂಡರು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 84ನೇ ಜನ್ಮ ದಿನಾಚರಣೆ’ಯಲ್ಲಿ ಈ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಿ.ಸಿ.ಪಾಟೀಲ, ‘ರೈತರ ಕಷ್ಟ, ಸಮಸ್ಯೆಗಳು ಗಮನದಲ್ಲಿವೆ. ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ, ಆದ್ಯತೆ ಅನುಸಾರ ಬಜೆಟ್‌ನಲ್ಲಿ ಸೇರಿಸಲು ಕ್ರಮ ಕೈಗೊಳ್ಳುತ್ತೇನೆ. ಮುಂದೆ ಉಳಿದ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಗಳ ಕಣ್ಣುಗಳು ಕೃಷಿ ಕ್ಷೇತ್ರದ ಮೇಲೆಯೂ ಬಿದ್ದಿವೆ. ಹಾಗಾಗಿ ನಾವು ಎಚ್ಚೆತ್ತುಕೊಳ್ಳಬೇಕು. ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು.‌
₹ 1ಕ್ಕೆ ಅಕ್ಕಿ ಒದಗಿಸುವ ಅನ್ನಭಾಗ್ಯ, ಊಟ–ತಿಂಡಿ ನೀಡುವ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್‌ಗಳಂತ ಯೋಜನೆಗಳು ದುಡಿಯುವ ವರ್ಗವನ್ನು ಸೋಮಾರಿ ಮಾಡುತ್ತಿದೆ’ ಎಂದರು.

ರೈತರಿಗೆ ಸಂಕಷ್ಟ: ಅಖಿಲ ಭಾರತ ರೈತ ಸಂಘಟನೆಗಳ ರಾಷ್ಟ್ರೀಯ ಸಂಚಾಲಕ ಯುದ್ಧ ವೀರ ಸಿಂಗ್ ಮಾತನಾಡಿ, ‘ಬಿತ್ತನೆ ಬೀಜ ಮಸೂದೆಯು ಖಾಸಗಿ ಕಂಪನಿಗಳ ಪರವಾಗಿದ್ದು, ಬಿತ್ತನೆ ಬೀಜ ಗಳಿಗೆ ತಾವೇ ಬೆಲೆ ನಿಗದಿ ಪಡಿಸಬಹುದು. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಪಡುವ ಸಾಧ್ಯತೆ ಗಳಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಮೆರಿಕದಲ್ಲಿ ಶೇ 1 ರಷ್ಟು ಜನತೆ ಮಾತ್ರ ಕೃಷಿಕರಾಗಿದ್ದು, ಕಂಪನಿಗಳೇ ಕೃಷಿ ಚಟುವಟಿಕೆಯನ್ನು ಮುನ್ನಡೆಸುತ್ತಿವೆ. ಬೀಜ ಮಸೂದೆಯಿಂದ ಇಲ್ಲಿಯೂ ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ದಾರಿಯಾಗಲಿದೆ’ ಎಂದರು.

ಪ್ರಮುಖ ಬೇಡಿಕೆಗಳು
*ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಮೂಲಕ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸಬೇಕು.

*ಎಲ್ಲ ವರ್ಗದ ರೈತರಿಗೂ ಕೃಷಿ ಪರಿಕರಗಳಿಗೆ ಸಹಾಯಧನವನ್ನು ಶೇ 90ಕ್ಕಿಂತ ಕಡಿಮೆ ಇಲ್ಲದಂತೆ ನೀಡಬೇಕು.

*ರಾಜ್ಯದಲ್ಲಿರುವ ಕೆರೆಗಳ ಹೂಳೆತ್ತಲು ಹಣ ಬಿಡುಗಡೆ ಮಾಡಬೇಕು.

*ಸಹಕಾರಿ ಹಾಗೂ ಸರ್ಕಾರಿ ಬ್ಯಾಂಕ್‌ಗಳಲ್ಲಿರುವ ಎಲ್ಲ ಸಾಲಮನ್ನಾ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT