ಗುರುವಾರ , ನವೆಂಬರ್ 14, 2019
19 °C
ಪ್ರಸ್ತಾವಿತ ಆರ್‌ಸಿಇಪಿ ಒಪ್ಪಂದದ ವಿರುದ್ಧ ಆಕ್ರೋಶ, ಜಾರಿಯಾದರೆ ದೇಶದ ರೈತರಿಗೆ ಸಂಕಷ್ಟ–ಮುಖಂಡರ ಕಳವಳ

24ರಂದು ರೈತ ಸಂಘಗಳ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ಏಷ್ಯಾದ 16 ದೇಶಗಳ ನಡುವೆ ನಡೆಯಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಲು ಮುಂದಾಗಿರುವುದನ್ನು ಖಂಡಿಸಿರುವ ಎರಡು ರೈತ ಸಂಘಗಳು, ಇದರ ವಿರುದ್ಧ ಇದೇ 24ರಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ರೈತ ಸಂಘದ ಒಂದು ಬಣವು ಜಿಲ್ಲೆಯ ಎಲ್ಲ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಿದರೆ, ಮತ್ತೊಂದು ಬಣ ಕೂಡ ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಕೃಷಿ ವಲಯವನ್ನು ಈ ಒಪ್ಪಂದದಿಂದ ಕೈಬಿಡಬೇಕು ಎಂದು ಎರಡೂ ಸಂಘಗಳೂ ಒತ್ತಾಯಿಸಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘2012ರಿಂದಲೇ ಪ‍್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮಾಡಿತ್ತು. ಆದರೆ, ಇದುವರೆಗೂ ಅರ್ಥಶಾಸ್ತ್ರಜ್ಞರು, ಚಿಂತಕರು, ಬುದ್ಧಿಜೀವಿಗಳು ಹಾಗೂ ವಿರೋಧ ಪಕ್ಷಗಳ ಮುಖಂಡರು ಈ ಬಗ್ಗೆ ಚರ್ಚೆ ನಡೆಸಿಲ್ಲ. ವಿದೇಶಿ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ತೆಗೆದುಹಾಕುವ ಈ ಒಪ್ಪಂದವು ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಹಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬಗ್ಗೆ ಚರ್ಚೆ ನಡೆಯದೆ ಇರುವುದು ನಾಚಿಕೆಗೇಡಿನ ಸಂಗತಿ’ ಎಂದರು. 

‘ನವೆಂಬರ್‌ 4ರಂದು 16 ರಾಷ್ಟ್ರಗಳೊಂದಿಗೆ ಸಹಿ ಹಾಕಲು ಭಾರತ ಸಿದ್ಧತೆ ನಡೆಸಿದೆ. ಇದರ ಅಡಿಯಲ್ಲಿ ಆಮದು ವಸ್ತುಗಳ ಮೇಲೆ ತೆರಿಗೆ ವಿಧಿಸುವಂತಿಲ್ಲ. ಇದರಿಂದಾಗಿ ನಮ್ಮ ದೇಶದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆಗೆ ಹೊಡೆತ ಬೀಳಲಿದೆ. ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ಕುಸಿದು ಹೋಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

‘ಜಗತ್ತಿನ ಆಹಾರ ವ್ಯವಸ್ಥೆಯನ್ನು ಕೆಲವೇ ಕೆಲವು ಎಂಎನ್‌ಸಿಗಳು ನಿಯಂತ್ರಿಸಲಿವೆ. ಕೈಗಾರಿಕಾ ಕೃಷಿಯು ಹೆಚ್ಚಳವಾಗಿ ಭೂಮಿಯ ತಾಪಮಾನ ಇನ್ನಷ್ಟು ಹೆಚ್ಚಲಿದೆ. ಒಪ್ಪಂದದಿಂದಾಗಿ ದೇಶದ ರೈತರು ಜಮೀನನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು’ ಎಂದು ಅವರು ಹೇಳಿದರು. 

ರೈತರಿಗೆ ಗಂಡಾಂತರ: ‘ಒಪ್ಪಂದ ಜಾರಿಯಾದರೆ ವಿದೇಶಿ ಕೃಷಿ ಉತ್ಪನ್ನಗಳು, ಹೈನುಗಾರಿಕೆ ಉತ್ಪನ್ನಗಳು ಭಾರಿ ಪ್ರಮಾಣದಲ್ಲಿ ದೇಶದ ಮಾರುಕಟ್ಟೆಗೆ ಬರುತ್ತವೆ. ಇದರೊಂದಿಗೆ ಪೈಪೋಟಿ ನೀಡಲು ದೇಶದ ಉತ್ಪನ್ನಗಳಿಗೆ ಸಾಧ್ಯವಿಲ್ಲ. ಹಾಗಾಗಿ, ಈ ಒಪ್ಪಂದ ದೇಶದ ರೈತರಿಗೆ ಗಂಡಾಂತರಕಾರಿಯಾಗಿದೆ’ ಎಂದು ಅವರು ವಿವರಿಸಿದರು. 

24ರಂದು ಧರಣಿ: ‘ಈ ಒಪ್ಪಂದವನ್ನು ವಿರೋಧಿಸಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಮುಂದೆ ಇದೇ 24ರಂದು ಧರಣಿ ನಡೆಸಲಾಗುವುದು. ರೈತರು ದನಕರುಗಳೊಂದಿಗೆ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಪಿಡಿಒಗಳ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು. ಎಪಿಎಂಸಿ ಹಾಗೂ ಹಾಲು ಉತ್ಪಾದಕರ ಒಕ್ಕೂಟದ ನೌಕರರ ಸಂಘ ಧರಣಿಗೆ ಬೆಂಬಲ ಸೂಚಿಸಿವೆ’ ಎಂದು ಹೊನ್ನೂರು ಪ್ರಕಾಶ್‌ ತಿಳಿಸಿರು. 

ಚಾಮರಾಜನಗರ ಎಪಿಎಂಸಿ ಉಪಾಧ್ಯಕ್ಷ ನಂಜುಂಡಸ್ವಾಮಿ, ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಶಾಂತಪ್ಪ ನಂಜದೇವನಪುರ, ರೈತ ಸಂಘದ ಜಿಲ್ಲಾ ಖಜಾಂಚಿ ಅಂಬಳೆ ಶಿವಕುಮಾರ್‌, ತಾಲ್ಲೂಕು ಘಟಕದ ಅಧ್ಯಕ್ಷ ಹೆಗ್ಗವಾಡಿಪುರ ಮಹದೇವಸ್ವಾಮಿ ಹೇಳಿದರು. 

ರಾಷ್ಟ್ರದಾದ್ಯಂತ ಹೋರಾಟ

ರೈತ ಸಂಘದ ಮತ್ತೊಂದು ಬಣದ ಮೈಸೂರು ಮತ್ತು ಚಾಮರಾಜನಗರ ವಿಭಾಗದ ಕಾರ್ಯದರ್ಶಿ ಮಹೇಶ್‌ ಪ್ರಭು ಹಾಗೂ ಇತರ ಮುಖಂಡರು ಕೂಡ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ 24ರಂದು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿದರು. 

‘ಕೇಂದ್ರ ಸರ್ಕಾರದ ಮಟ್ಟದಲ್ಲಿ ಒಪ್ಪಂದದ ಬಗ್ಗೆ ಅಂತಿಮ ಸುತ್ತಿನ ಚರ್ಚೆ ನಡೆಯುತ್ತಿದೆ. ಇದು ಜಾರಿಗೆ ಬಂದರೆ ಕೃಷಿ ವಲಯಕ್ಕೆ ತೀವ್ರ ಹೊಡೆತ ಬೀಳಲಿದೆ. ವಿದೇಶಿ ಉತ್ಪನ್ನಗಳು ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅವುಗಳೊಂದಿಗೆ ನಮ್ಮ ಉತ್ಪನ್ನಗಳು ಸ್ಪರ್ಧಿಸಲು ಸಾಧ್ಯವಿಲ್ಲ. ವಿದೇಶದಲ್ಲಿರುವ ಕೃಷಿ ಉತ್ಪನ್ನಗಳಿಗೆ ಸಾಕಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಕೃಷಿಯನ್ನೂ ಕೈಗಾರಿಕೆಯ ರೀತಿಯಲ್ಲಿ ಮಾಡಲಾಗುತ್ತಿದೆ. ಆದರೆ, ನಮ್ಮಲ್ಲಿ ಹೆಚ್ಚಿನವರು ಸಣ್ಣ ರೈತರು. ಅಲ್ಲಿರುವ ವ್ಯವಸ್ಥೆಯೂ ಇಲ್ಲಿ ಇಲ್ಲ’ ಎಂದು ಮಹೇಶ್‌ ಪ್ರಭು ಹೇಳಿದರು. 

‘ವಿದೇಶಿ ಕೃಷಿ ಉತ್ಪನ್ನಗಳನ್ನು ತೆರಿಗೆ ಮುಕ್ತ ಮಾಡುವುದು ಬೇಡ. ನಮ್ಮ ದೇಶದಲ್ಲಿ ಇದರ ಅಗತ್ಯವಿಲ್ಲ. ಒಪ್ಪಂದವನ್ನು ಖಂಡಿಸಿ ರೈತ ಸಂಘಗಳು ಇದೇ 24ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಿವೆ. ಜಿಲ್ಲೆಯಲ್ಲೂ ಪ್ರವಾಸಿ ಮಂದಿರದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಇದರಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಬೇಕು’ ಎಂದು ಅವರು ಮನವಿ ಮಾಡಿದರು. 

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ್‌, ಮುಖಂಡರಾದ ಚಿನ್ನಸ್ವಾಮಿ, ಜ್ಯೋತಿಗೌಡನಪುರ ಸಿದ್ದರಾಜು, ಶಾಂತಮಲ್ಲಪ್ಪ ಇದ್ದರು.

ಪ್ರತಿಕ್ರಿಯಿಸಿ (+)