ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜೊತೆ ನಂಟು, ಸೇನೆಯ ಮಾಹಿತಿ ರವಾನೆ: ಬೆಂಗಳೂರಿನಲ್ಲಿ ವ್ಯಕ್ತಿಯ ಬಂಧನ

ಭಾರತೀಯ ಸೇನೆ ಬಟ್ಟೆ ತೊಟ್ಟು ಓಡಾಟ: ಬಟ್ಟೆ ವ್ಯಾಪಾರಿ ಸೋಗಿನಲ್ಲಿ ಸುತ್ತಾಟ
Last Updated 20 ಸೆಪ್ಟೆಂಬರ್ 2021, 13:19 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸೇನಾಧಿಕಾರಿ ವೇಷ ಧರಿಸಿಕೊಂಡು ಓಡಾಡಿ ಸೇನೆಗೆ ಸಂಬಂಧಪಟ್ಟ ಸ್ಥಳಗಳ ಫೋಟೊ ಸಮೇತ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ಕಳುಹಿಸುತ್ತಿದ್ದ ಆರೋಪದಡಿ ಜಿತೇಂದರ್ ಸಿಂಗ್ ಎಂಬಾತನನ್ನು ಬೆಂಗಳೂರಿನಲ್ಲಿ ಸೋಮವಾರ ಬಂಧಿಸಲಾಗಿದೆ.

‘ರಾಜಸ್ಥಾನದ ಜಿತೇಂದರ್ ಸಿಂಗ್, ಕಾಟನ್‌ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಭಾರತೀಯ ಸೇನೆಯ ಗುಪ್ತದಳ ವಿಭಾಗದ ಅಧಿಕಾರಿಗಳು ಆತನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದರು. ಸೇನೆ ಕಮಾಂಡರ್‌ಗಳ ಜೊತೆಯಲ್ಲೇ ಕಾರ್ಯಾಚರಣೆ ನಡೆಸಿ ಜಾಲಿ ಮೊಹಲ್ಲಾ ಬಳಿ ಜಿತೇಂದರ್‌ನನ್ನು ಸೆರೆ ಹಿಡಿಯಲಾಗಿದೆ. ಆತನ ಬಳಿ ಸೇನೆ ಬಟ್ಟೆಗಳು ಸಿಕ್ಕಿವೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಸೇನಾಧಿಕಾರಿ ಬಟ್ಟೆ ತೊಟ್ಟು ರಾಜಸ್ಥಾನದ ಬಾರ್ಮೆರ್ ಸೇನಾ ನೆಲೆಗೆ ಇತ್ತೀಚೆಗೆ ಹೋಗಿದ್ದ ಆರೋಪಿ, ಅಲ್ಲಿನ ಫೋಟೊಗಳನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ. ಅದೇ ಫೋಟೊಗಳನ್ನು ಐಎಸ್‌ಐಗೆ ಕಳುಹಿಸಿದ್ದ. ಇದನ್ನು ಪತ್ತೆ ಹಚ್ಚಿದ್ದ ಗುಪ್ತದಳದ ಅಧಿಕಾರಿಗಳು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿವೆ.

ಯುವತಿ ಸೋಗಿನಲ್ಲಿ ‘ಫೇಸ್‌ಬುಕ್’ ಸ್ನೇಹ

‘ಬಟ್ಟೆ ವ್ಯಾಪಾರವನ್ನೇ ವೃತ್ತಿ ಮಾಡಿಕೊಂಡಿರುವ ಜಿತೇಂದರ್ ಸಿಂಗ್, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದಾನೆ. ಕೆಲ ತಿಂಗಳ ಹಿಂದಷ್ಟೇ ಪಾಕ್ ಐಎಸ್‌ಐ ಅಧಿಕಾರಿಯೊಬ್ಬ, ವಿದೇಶಿ ಯುವತಿ ಹೆಸರಿನಲ್ಲಿ ‘ನೇಹಾ @ ಪೂಜಾಜಿ’ ನಕಲಿ ಖಾತೆ ತೆರೆದು ಜಿತೇಂದರ್ ಸಿಂಗ್‌ಗೆ ರಿಕ್ವೆಸ್ಟ್ ಕಳುಹಿಸಿದ್ದ. ಸುಂದರ ಯುವತಿ ನೋಡಿದ್ದ ಜಿತೇಂದರ್, ರಿಕ್ವೆಸ್ಟ್ ಸ್ವೀಕರಿಸಿದ್ದ. ನಂತರ, ಮಾತುಕತೆ ಆರಂಭವಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾರತವನ್ನು ಹೊಗಳಿದ್ದ ಯುವತಿ, ‘ಭಾರತ ಎಂದರೆ ನನಗೆ ತುಂಬಾ ಇಷ್ಟ. ಸದ್ಯದಲ್ಲೇ ನಾನು ಭಾರತಕ್ಕೆ ಬಂದು ನಿನ್ನನ್ನು ಭೇಟಿಯಾಗುತ್ತೇನೆ. ಈಗ ನಾನು, ಭಾರತೀಯ ಸೇನಾ ನೆಲೆ ಹಾಗೂ ವಾಹನಗಳನ್ನು ನೋಡಬೇಕು. ದಯವಿಟ್ಟು, ಸೇನೆ ಬಳಿ ಹೋಗಿ ಫೋಟೊ ತೆಗೆದು ಕಳುಹಿಸು’ ಎಂದು ಕೇಳಿದ್ದಳು. ಅದಕ್ಕೆ ಒಪ್ಪಿದ್ದ ಜಿತೇಂದರ್, ಸೇನಾಧಿಕಾರಿ ವೇಷ ತೊಟ್ಟು ಸೇನಾ ನೆಲೆ ಹಾಗೂ ಸೇನೆ ವಾಹನಗಳ ಫೋಟೊ ತೆಗೆದುಕಳುಹಿಸಿದ್ದ.’

‘ಪಾಕಿಸ್ತಾನದ ವ್ಯಕ್ತಿಯೊಬ್ಬರದ ಜೊತೆ ಭಾರತೀಯನೊಬ್ಬ ಚಾಟಿಂಗ್ ಮಾಡಿದ್ದ ಸುಳಿವು ಸೇನೆಗೆ ಸಿಕ್ಕಿತ್ತು. ಈ ಬಗ್ಗೆ ಪರಿಶೀಲಿಸಿದಾಗ, ಆರೋಪಿಯ ಫೇಸ್‌ಬುಕ್‌ ಚಾಟಿಂಗ್ ಮಾಹಿತಿ ಸಿಕ್ಕಿತ್ತು. ಅದೇ ಸುಳಿವು ಆಧರಿಸಿಯೇ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.

6 ನೆಲೆಗಳ ಮಾಹಿತಿ ರವಾನೆ

‘ಆರೋಪಿ ಜಿತೇಂದರ್ ಸಿಂಗ್, ದೇಶದ 6 ಸೇನಾ ನೆಲೆಗಳ ರಹಸ್ಯ ಮಾಹಿತಿಯನ್ನು ಪಾಕ್ ಐಎಸ್‌ಐಗೆ ಕಳುಹಿಸಿದ್ದಾನೆ. ಆತನ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

‘ಆರೋಪಿಯ ಕೆಲಸಕ್ಕೆ ಹಣವೂ ಸಂದಾಯವಾಗಿರುವ ದಾಖಲೆಗಳು ಸಿಕ್ಕಿವೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT