ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲ ಇದ್ದರೆ ಅವಕಾಶ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್

Published 1 ಜೂನ್ 2023, 23:16 IST
Last Updated 1 ಜೂನ್ 2023, 23:16 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲ ವರ್ಷಗಳಲ್ಲಿ ಹಲವಾರು ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ವೈದ್ಯಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆಯಲು ಜ್ಞಾನದ ಜತೆಗೆ ಕೌಶಲವೂ ಅಗತ್ಯ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. 

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸವಾಲುಗಳಿವೆ. ಭಾರತೀಯ ವೈದ್ಯಕೀಯ ‍ಪದ್ಧತಿ, ಅಲೋಪಥಿ ಹಾಗೂ ಇತರ ವೈದ್ಯಕೀಯ ವಿಜ್ಞಾನದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಕೌಶಲ ವೃದ್ಧಿಸಬೇಕು. ಆಧುನಿಕ ತಂತ್ರಜ್ಞಾನದಿಂದ ಪ್ರತಿನಿತ್ಯ ಸಂಶೋಧನೆಗಳು ನಡೆಯುತ್ತಿವೆ. ಇದರಿಂದಾಗಿ ಚಿಕಿತ್ಸೆಗಳಲ್ಲಿಯೂ ಸುಧಾರಣೆಗಳು ಆಗುತ್ತಿವೆ’ ಎಂದು ಹೇಳಿದರು. 

‘ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಸತ್ಯವನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲು ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ಸಂಶೋಧನೆಗಳು ನಡೆಯಬೇಕು’ ಎಂದರು. 

‘ಆಯುರ್ವೇದ 2047’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ.ದೇವ್‌ಪೂಜಾರಿ ಜಯಂತ್ ಯಶವಂತ್, ‘ಆಯುರ್ವೇದಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಇದರಿಂದಾಗಿ ವಿದೇಶಗಳಲ್ಲಿಯೂ ಆಯುರ್ವೇದ ಕಾಲೇಜು ಸ್ಥಾಪನೆಗೆ ಪ್ರಸ್ತಾವಗಳು ಬರುತ್ತಿವೆ. ಮುಂದಿನ 25 ವರ್ಷಗಳಲ್ಲಿ ಆಯುರ್ವೇದ ಏನಾಗುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಕೋವಿಡ್ ಕಾಣಿಸಿಕೊಂಡ ಬಳಿಕ ಎರಡು ವರ್ಷಗಳಲ್ಲಿಯೇ ಐಟಿ ಕ್ಷೇತ್ರದಲ್ಲಿ ಕಾರ್ಯವಿಧಾನ ಬದಲಾಗಿ, ಮನೆಯಿಂದಲೇ ಕಾರ್ಯನಿರ್ವಹಣೆ ಪ್ರಾರಂಭವಾಯಿತು. ಇದರಿಂದಾಗಿ ಭವಿಷ್ಯದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ನಮ್ಮಲ್ಲಿ ರೋಗಗಳ ನಿರ್ವಹಣೆ ಬಗ್ಗೆ ನೀಡಿದ ಆದ್ಯತೆಯನ್ನು ಜೀವನಶೈಲಿಗೆ ನೀಡಿಲ್ಲ. ಅಲೋಪಥಿಯಲ್ಲಿ ಇರುವಂತೆ ಆಯುರ್ವೇದದಲ್ಲಿ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಯೆಂದು ವಿಂಗಡಣೆಯಿಲ್ಲ. ಅಲೋಪಥಿಯಲ್ಲಿ ತಜ್ಞರೇ ನೋಡಬೇಕಾದ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಸಾಮಾನ್ಯ ವೈದ್ಯರು ಚಿಕಿತ್ಸೆ ನೀಡಬಹುದಾಗಿದೆ’ ಎಂದರು. 

ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್, ‘ನಮ್ಮ ವಿಶ್ವವಿದ್ಯಾಲಯ ಏಷ್ಯಾದಲ್ಲಿಯೇ ಅತೀ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಪರೀಕ್ಷೆ ಮುಗಿದ 24 ಗಂಟೆಗಳಲ್ಲಿ ಫಲಿತಾಂಶ ನೀಡುತ್ತಿದ್ದೇವೆ. 6 ಪ್ರಾದೇಶಿಕ ಕೌಶಲ ಪ್ರಯೋಗಾಲಯ ನಿರ್ಮಿಸಬೇಕೆಂದುಕೊಂಡಿದ್ದೇವೆ’ ಎಂದು ಹೇಳಿದರು. 

‘ಪರಿಶೀಲಿಸಿ ಸೂಕ್ತ ಕ್ರಮ’
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಎನ್. ರಾಮಕೃಷ್ಣ ರೆಡ್ಡಿ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶರಣಪ್ರಕಾಶ್ ಪಾಟೀಲ ‘ಆರೋಪಗಳ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಈಗ ಇಲಾಖೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಒಬ್ಬ ಅಧಿಕಾರಿ ಒಂದು ಹುದ್ದೆಯನ್ನು ಮಾತ್ರ ಹೊಂದಲು ಸಾಧ್ಯ. ಆದರೆ ರೆಡ್ಡಿ ಅವರು ಏಕಕಾಲದಲ್ಲಿ ವಿವಿಧ ಹುದ್ದೆಗಳನ್ನು ಹೊಂದಿದ್ದಲ್ಲಿ ಪರಿಶೀಲಿಸಿ ಕ್ರಮವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT