ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನ್‌ ಸಾಹೇಬರೇ ನನ್ನ ಗುರು, ದೇವರು: ರಾಜೀವ್ ತಾರಾನಾಥ್‌

Last Updated 22 ಡಿಸೆಂಬರ್ 2020, 21:27 IST
ಅಕ್ಷರ ಗಾತ್ರ

ಮೈಸೂರು: ‘ಉಸ್ತಾದ್‌ ಅಲಿ ಅಕ್ಬರ್‌ ಖಾನ್ ಸಾಹೇಬರೇ ನನ್ನ ಮಹಾಗುರು ಹಾಗೂ ದೇವರು. ಅವರ ವಿನಮ್ರ ಶಿಷ್ಯ ನಾನು. ನನ್ನ ಜೀವನ, ಹೆಸರು, ಪ್ರಸಿದ್ಧಿ ಎಲ್ಲವನ್ನೂ ಅವರ ಪಾದಕ್ಕೆ ಅರ್ಪಿಸುತ್ತೇನೆ. ಅವರಿಲ್ಲದೆ ನಾನು ಏನೂ ಅಲ್ಲ’ ಎಂದು ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಹೇಳಿದ್ದಾರೆ.

‘ಪ್ರಜಾವಾಣಿಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, ಪಂಡಿತ್‌ ರವಿಶಂಕರ್‌ ಅವರ ಕಾರ್ಯಕ್ರಮವು ನನ್ನನ್ನು ಸಂಗೀತ ಲೋಕದ ಹುಚ್ಚನನ್ನಾಗಿಸಿತು ಎಂದಿರುವುದರಿಂದ, ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಬೆಂಗಳೂರಿನ ಪುರಭವನದಲ್ಲಿ, ಬಹುಶಃ 1952ರಲ್ಲಿ ಮೊದಲ ಬಾರಿ ನಮ್ಮ ಗುರುಗಳ ಸರೋದ್‌ ವಾದನ ಕೇಳಿದೆ. ಅವರು ಯಾರೆಂದರೆ ಸರೋದ್‌ ಮಾಂತ್ರಿಕ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ ಸಾಹೇಬರು. ಈ ಮಾತನ್ನು ಒತ್ತಿ ಹೇಳಬೇಕಾಗಿದೆ. ಇಲ್ಲವಾದರೆ ನನ್ನಿಂದ ಒಂದು ಘೋರ, ನೈತಿಕ ತಪ್ಪಾದೀತು. ಅಂದು ಪಂಡಿತ್‌ ರವಿಶಂಕರ್‌ ಅವರೊಂದಿಗಿನ ಜುಗಲ್‌ಬಂದಿ ಕಛೇರಿಯಲ್ಲಿ ಸರೋದ್‌ ಮಾಂತ್ರಿಕ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ ಸಂಗೀತದ ಮೋಡಿ ಮಾಡಿದರು. ಅದು ನನ್ನ ಜೀವನದ ಅತಿ ಮುಖ್ಯ ಗಳಿಗೆ. ನನಗೆ ಅವರ ಸರೋದದ ಹುಚ್ಚು ಹಿಡಿಸಿತು’ ಎಂದಿದ್ದಾರೆ.

‘ಖಾನ್‌ ಸಾಹೇಬರೇ ನನ್ನ ಸರೋದ್‌ ಸಂಗೀತಕ್ಕೆ ಸ್ಫೂರ್ತಿ. ಇವತ್ತು ನನಗೇನಾದರೂ ಸಂಗೀತದ ಕೀರ್ತಿ ಬಂದಿದ್ದರೆ ಅದೆಲ್ಲವನ್ನೂ ಅವರ ಪಾದಕ್ಕೆ ಅರ್ಪಿಸುವೆ. ಅವರೇ ಈ ರಾಜೀವ ತಾರಾನಾಥನ ಮಹಾಗುರು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT