ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್ ಅಕ್ರಮ; ಮತ್ತೆರೆಡು ವಿದ್ಯಾರ್ಥಿಗಳ ಶುಲ್ಕ ಗುಳುಂ

ವಿ.ವಿ.ಪುರ ಠಾಣೆಯಲ್ಲಿ ಐದು ಎಫ್‌ಐಆರ್ ದಾಖಲು
Last Updated 11 ಅಕ್ಟೋಬರ್ 2021, 16:46 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್) ವಿದ್ಯಾರ್ಥಿಗಳ ಶುಲ್ಕವನ್ನು ಸ್ವಂತಕ್ಕೆ ಬಳಸಿಕೊಂಡು ಅಕ್ರಮ ಎಸಗಿರುವ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿದ್ದು, ಇದೀಗ ವಿ.ವಿ.ಪುರ ಠಾಣೆಯಲ್ಲಿ ಮತ್ತೆರಡು ಎಫ್‌ಐಆರ್‌ಗಳು ದಾಖಲಾಗಿವೆ.

‘ಅಪರಾಧ ಸಂಚು, ವಂಚನೆ, ನಂಬಿಕೆ ದ್ರೋಹ ಆರೋಪದಡಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಚೇರ್ಮನ್, ಮಾಜಿ ಅಧ್ಯಕ್ಷ ಹಾಗೂ ಮಾಜಿ ನಿರ್ದೇಶಕರ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ. ಸೋಮವಾರ ಮತ್ತೆರಡು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಸಿ. ಸಿದ್ದರಾಮಯ್ಯ ನೀಡಿರುವ ದೂರುಗಳ ಆಧಾರದಲ್ಲಿ ಐದೂ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆ ನಡೆದಿದೆ. ಆರೋಪಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು. ಶುಲ್ಕ ಪಾವತಿಸಿದ್ದ ವಿದ್ಯಾರ್ಥಿಗಳ ಹೇಳಿಕೆಯನ್ನೂ ಪಡೆದು ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ತಿಳಿಸಿದರು.

2016–17ನೇ ಸಾಲಿನಲ್ಲಿ ಅಕ್ರಮ: ‘ಕಿಮ್ಸ್‌ನಲ್ಲಿ 2016–17ನೇ ಸಾಲಿನಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡಲು ವಿದ್ಯಾರ್ಥಿ ಅಮೃತ್ ರಾಜ್ ಇಚ್ಛಿಸಿದ್ದರು. ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿದ್ದ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಎನ್. ಬೆಟ್ಟೇಗೌಡ ಹಾಗೂ ಮಾಜಿ ನಿರ್ದೇಶಕ ಅಚ್ಚೇಗೌಡ ಶಿವಣ್ಣ, ₹ 40 ಲಕ್ಷ ಪಡೆದಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘ಸಂಘಕ್ಕೆ ಕೇವಲ ₹ 15 ಲಕ್ಷ ಕಟ್ಟಿದ್ದ ಆರೋಪಿಗಳು, ಉಳಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಶುಲ್ಕ ಬಾಕಿ ಇದ್ದರೂ ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ಬೆಟ್ಟೇಗೌಡ ಶಿಫಾರಸು ಮಾಡಿದ್ದರು. ಪರೀಕ್ಷೆ ವೇಳೆ ಶುಲ್ಕ ಮರುಪಾವತಿಗಾಗಿ ವಿದ್ಯಾರ್ಥಿಗೆ ನೋಟಿಸ್ ನೀಡಲಾಗಿತ್ತು. ವಿದ್ಯಾರ್ಥಿ ಶುಲ್ಕ ಪಾವತಿಸುವುದಾಗಿ ಹೇಳಿದ್ದ ಆರೋಪಿಗಳು ವಿವಿಧ ಬ್ಯಾಂಕ್‌ಗಳ ಹೆಸರಿನಲ್ಲಿ ಚೆಕ್ ನೀಡಿದ್ದರು. ಆ ಚೆಕ್‌ಗಳು ಬೌನ್ಸ್ ಆಗಿದ್ದವು’ ಎಂದೂ ತಿಳಿಸಿದರು.

‘ಇನ್ನೊಂದು ಪ್ರಕರಣದಲ್ಲಿ,2016– 17ನೇ ಸಾಲಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ಸಾಕ್ಷಿ ಎಂಬ ವಿದ್ಯಾರ್ಥಿನಿಯಿಂದ ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿ ಗೌಡ ಹಾಗೂ ಮಾಜಿ ನಿರ್ದೇಶಕ ಜಿ.ಎಲ್. ನರೇಂದ್ರಬಾಬು ₹ 50 ಲಕ್ಷ ಪಡೆದಿದ್ದರು. ಸಂಘಕ್ಕೆ ಕೇವಲ 20 ಸಾವಿರ ಪಾವತಿಸಿದ್ದರೆಂಬುದಾಗಿ ದೂರುದಾರ ಆರೋಪಿಸಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT