ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ನಿರ್ದೇಶಕ ಶ್ರೀಪಾದ ಭಟ್‌ಗೆ ‘ರಂಗ ಭೂಪತಿ’ ಪ್ರಶಸ್ತಿ

Published 27 ಮಾರ್ಚ್ 2024, 15:47 IST
Last Updated 27 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ನಾಟಕಕಾರ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ರಂಗ ಭೂಪತಿ’ ಪ್ರಶಸ್ತಿಗೆ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರು ಆಯ್ಕೆಯಾಗಿದ್ದಾರೆ.

ಧಾರವಾಡದ ಗೋ.ವಾ. ರಂಗ–ಸಂಗ, ಆಟ–ಮಾಟ ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಸಂಸ್ಥೆಗಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಮಾರ್ಚ್ 30ರಂದು ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀಪಾದ ಭಟ್‌ ಅವರಿಗೆ ಮೊದಲ ವರ್ಷದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಂಗಕರ್ಮಿ ಧನಂಜಯ ಕುಲಕರ್ಣಿ, ಬಹುರೂಪಿ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥ ಜಿ.ಎನ್.ಮೋಹನ್, ರವಿ ಕುಲಕರ್ಣಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು, ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ ಕೆ.ಎಂ., ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ರಾಜಕುಮಾರ ಮಡಿವಾಳರ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದ ಶ್ರೀಪಾದ ಭಟ್ ಅವರು ಕನ್ನಡ ರಂಗಭೂಮಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜಾನಪದ ಅಧ್ಯಯನ, ಸಂಗೀತ, ಸಂಘಟನೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಣ, ಕಾವ್ಯ ಹಾಗೂ ಮಕ್ಕಳ ರಂಗಭೂಮಿಯಲ್ಲಿ ಇವರು ನಡೆಸಿದ ಪ್ರಯೋಗಗಳು ದೇಶದಾದ್ಯಂತ ಹೆಸರುವಾಸಿಯಾಗಿವೆ. ಗಾಂಧಿ–150ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ‘ಪಾಪು-ಬಾಪು’ ನಾಟಕವು 2 ಸಾವಿರ ಪ್ರಯೋಗ ಕಂಡಿದೆ. ಇದುವರೆಗೂ ಸುಮಾರು 150ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ದಡವ ನೆಕ್ಕಿದ ಹೊಳೆ’ ನಟನೆಯ ಕೈಪಿಡಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT