ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೂಡಿಕೆದಾರರ ಹಿತರಕ್ಷಣೆ: ಅಪರಾಧಿಗೆ ಜೈಲು, ರಾಜ್ಯದಲ್ಲಿ ಮೊದಲು

Published 4 ಮಾರ್ಚ್ 2024, 19:47 IST
Last Updated 4 ಮಾರ್ಚ್ 2024, 19:47 IST
ಅಕ್ಷರ ಗಾತ್ರ

ಬೆಂಗಳೂರು: ಔಷಧ ಮಳಿಗೆ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಅಪರಾಧಿ ತಂಗಪ್ಪನ್‌ ಎಂಬಾತನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ 47ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ಸಿಸಿಎಚ್ 48) ನ್ಯಾಯಾಲಯ ಆದೇಶ ಹೊರಡಿಸಿದೆ.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ (ಕೆಪಿಐಡಿಇಎಫ್‌) ಕಾಯ್ದೆ 2004ರ ಅಡಿ ಪುಲಿಕೇಶಿನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ನಡೆಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್‌.ಕೆ. ಅನುಪಮಾ ಅವರು ವಾದಿಸಿದ್ದರು.

ಕೆಪಿಐಡಿಇಎಫ್‌ ಕಾಯ್ದೆ ಜಾರಿಯಾದ ಬಳಿಕ ಅಪರಾಧಿಗೆ ಜೈಲು ಶಿಕ್ಷೆಯಾದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.

ಹೊರಮಾವು ಬೃಂದಾವನ ಬಡಾವಣೆಯ ಅಪರಾಧಿ ತಂಗಪ್ಪನ್, ಪುಲಿಕೇಶಿನಗರದ ಹಚಿನ್ಸ್ ರಸ್ತೆಯಲ್ಲಿ ಔಷಧಿ ಮಳಿಗೆ ನಡೆಸುತ್ತಿದ್ದ. ಔಷಧ ಮಳಿಗೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಪರಿಚಯಸ್ಥರಿಗೆ ಹೇಳಿದ್ದ. ಈತನ ಮಾತು ನಂಬಿದ್ದ ಉಮಾಶಂಕರ್, ಎಲಿಜಬತ್ ಡಿಸೋಜ ಹಾಗೂ ಇತರರು ₹ 33 ಲಕ್ಷ ನೀಡಿದ್ದರು. ಜೊತೆಗೆ, ಪಾಲುದಾರಿಕೆ ಕರಾರು ಪತ್ರ ಸಹ ಮಾಡಿಸಿದ್ದರು. ಏಕಾಏಕಿ ಮಳಿಗೆ ಬಂದ್ ಮಾಡಿದ್ದ ತಂಗಪ್ಪನ್, ಹೂಡಿಕೆದಾರರಿಗೆ ಹಣ ವಾಪಸು ಕೊಡದೇ ಬೆಂಗಳೂರು ತೊರೆದಿದ್ದ. ವಂಚನೆಗೀಡಾಗಿದ್ದ ಉಮಾಶಂಕರ್ ಹಾಗೂ ಇತರರು, ಪುಲಿಕೇಶಿನಗರ ಠಾಣೆಗೆ ದೂರು ನೀಡಿದ್ದರು.

ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

‘ಅಪರಾಧಿ ತಂಗಪ್ಪನ್‌ನಿಗೆ ವಂಚನೆ (ಐಪಿಸಿ 420) ಆರೋಪಕ್ಕೆ ಐದು ವರ್ಷ ಹಾಗೂ ಕೆಪಿಐಡಿಇಎಫ್‌ ಕಾಯ್ದೆಯಡಿ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಎರಡೂ ಶಿಕ್ಷೆಯನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬೇಕು. ಜೊತೆಗೆ, ಅಪರಾಧಿಗೆ ₹34 ಲಕ್ಷ ದಂಡ ವಿಧಿಸಲಾಗಿದೆ. ಪ್ರಕರಣದ ಸಂತ್ರಸ್ತರಾದ ಉಮಾಶಂಕರ್‌ಗೆ ₹ 20 ಲಕ್ಷ, ಎಲಿಜೆಬತ್ ಡಿಸೋಜ್‌ಗೆ ₹ 5 ಲಕ್ಷ, ಪ್ರಕಾಶ್‌ಗೆ ₹ 7.50 ಲಕ್ಷ ಪರಿಹಾರವಾಗಿ ನೀಡುವಂತೆ ಹಾಗೂ ಉಳಿದ ದಂಡದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ’ ಎಂದು ಎಸ್‌.ಕೆ. ಅನುಪಮಾ ‘ಪ್ರಜಾವಾಣಿ’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT