ಗುರುವಾರ , ಜುಲೈ 7, 2022
20 °C

ಗೋಪಾಲಯ್ಯ ವಿರುದ್ಧ ಎಸಿಬಿ ತನಿಖೆಗೆ ರವಿಕೃಷ್ಣಾ ರೆಡ್ಡಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ನೀಡಲು ಪ್ರತಿ ಜಿಲ್ಲೆಯಿಂದ ₹ 5 ಲಕ್ಷ ಸಂಗ್ರಹಿಸಲಾಗಿದೆ ಎಂಬ ಅಧಿಕಾರಿಗಳ ದೂರವಾಣಿ ಸಂಭಾಷಣೆ ಕುರಿತು ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.

‘ಸಚಿವರಿಗೆ ಲಂಚದ ಮೊತ್ತ ಸಂಗ್ರಹಕ್ಕೆ ಸಂಬಂಧಿತ ಚರ್ಚೆ ಬಹಿರಂಗವಾದ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಚಿವರ ವಿರುದ್ಧವೇ ಲಂಚದ ಆರೋಪ ಕೇಳಿಬಂದಿದೆ. ಇದು, ಗಂಭೀರ ಪ್ರಕರಣ. ಮುಖ್ಯಮಂತ್ರಿಯವರು ತಕ್ಷಣವೇ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಕೆಳಗಿನಿಂದ ಮೇಲಿನವರೆಗೆ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ದೂರವಾಣಿ ಸಂಭಾಷಣೆ ಸಾಕ್ಷ್ಯ ನೀಡುತ್ತಿದೆ. ಸಂಭಾಷಣೆ ನಿಜವಾಗಿದ್ದಲ್ಲಿ ಗೋಪಾಲಯ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದೂ ಆಗ್ರಹಿಸಿದ್ದಾರೆ.

ಲಂಚ ಪಡೆದವರಿಗೆ ಶಿಕ್ಷೆ ಇಲ್ಲವೆ: ಎಚ್‌ಡಿಕೆ ಪ್ರಶ್ನೆ

ಬೆಂಗಳೂರು: ಸಚಿವ ಗೋಪಾಲಯ್ಯ ಅವರಿಗೆಸಂಬಂಧಿಸಿದ ಆಡಿಯೊ ಪ್ರಕರಣದಲ್ಲಿ ಲಂಚ ಕೊಟ್ಟಿರಬಹುದಾದ ಅಧಿಕಾರಿಗಳಿಗೆ ಶಿಕ್ಷೆ ಇದ್ದರೆ, ಪಡೆದಿರುವವರಿಗೆ ಶಿಕ್ಷೆಯೇ ಇಲ್ಲವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಮಂಗಳವಾರ ಟ್ವೀಟ್‌ ಮಾಡಿರುವ ಅವರು, ‘ದೂರವಾಣಿ ಕರೆಯ ರೆಕಾರ್ಡಿಂಗ್‌ ಬಹಿರಂಗವಾದ ಬಳಿಕ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಈ ಕ್ರಮ ಭ್ರಷ್ಟಾಚಾರದ ವಿರುದ್ಧವೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ ಎಂಬ ಕಾರಣಕ್ಕೊ’ ಎಂದು ಕೇಳಿದ್ದಾರೆ.

ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಲೂಟಿ ಮಾಡುವುದರಲ್ಲಿ ನಿರತವಾಗಿದೆ ಎಂದು ಅವರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು