ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ಸಡಿಲ: ಆರ್‌ಬಿಐ ಭರವಸೆ?

ಖಾತೆಯಿಂದ ಹಣ ಹಿಂಪಡೆಯಲು ಮಿತಿ l ಗುರು ರಾಘವೇಂದ್ರ ಬ್ಯಾಂಕ್ ನಿಯೋಗದಿಂದ ಆರ್‌ಬಿಐ ಅಧಿಕಾರಿಗಳ ಭೇಟಿ
Last Updated 14 ಜನವರಿ 2020, 20:32 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರು ಖಾತೆಯಿಂದ ಹಣ ಹಿಂಪಡೆಯಲು ಆರ್‌ಬಿಐ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ನಿಯೋಗವು ಅಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ಆರ್‌ಬಿಐ ಅಧಿಕಾರಿಗಳ ಜೊತೆಗೆ ಮಂಗಳವಾರ ಚರ್ಚೆ ನಡೆಸಿತು.

‘ಠೇವಣಿದಾರರು ಮತ್ತು ಖಾತೆದಾರರ ಆತಂಕವನ್ನು ಆರ್‌ಬಿಐ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ಆದಷ್ಟು ಶೀಘ್ರ ನಿರ್ಬಂಧ ಸಡಿಲಿಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಆಡಳಿತ ಮಂಡಳಿ ಸದಸ್ಯರೊಬ್ಬರು ಹೇಳಿದರು.

‘ಇದೇ ರೀತಿ ನಿರ್ಬಂಧವನ್ನು ವಿಧಿಸಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ಸಹಕಾರಿ ಬ್ಯಾಂಕ್‍ಗಳಿಗೂ ನೋಟಿಸ್‌ ನೀಡಲಾಗಿದೆ. ಆ ಬ್ಯಾಂಕುಗಳ ಗ್ರಾಹಕರು ₹ 1 ಸಾವಿರ ಮಾತ್ರ ಖಾತೆ
ಯಿಂದ ವಾಪಸು ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ರಾಘವೇಂದ್ರ ಬ್ಯಾಂಕಿನ ಗ್ರಾಹಕರಿಗೆ ₹ 35 ಸಾವಿರ ಹಿಂತೆಗೆಯಲು ಅವಕಾಶ
ವಿದೆ. ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಆರ್‌ಬಿಐ ಅಧಿಕಾರಿಗಳು ನೀಡಿದ್ದಾರೆ’ ಎನ್ನಲಾಗಿದೆ.

ಬ್ಯಾಂಕಿನ ನಿಯೋಗ ಆರ್‌ಬಿಐ ಅಧಿಕಾರಿಗಳ ಜೊತೆಗೆ ಚರ್ಚೆ ವೇಳೆ ರಾಜ್ಯ ಪಟ್ಟಣ ಬ್ಯಾಂಕ್‍ಗಳ ಮಹಾ ಮಂಡಲದ ನಿರ್ದೇಶಕ ಎಚ್.ಸಿ. ಕೃಷ್ಣ ಅವರೂ ಇದ್ದರು. ಬಳಿಕ ಸಹಕಾರ ಕ್ಷೇತ್ರದ ಹಿರಿಯರಾದ ಎಚ್.ಕೆ.ಪಾಟೀಲರ ಜತೆ ರಾಜ್ಯ ಪಟ್ಟಣ ಬ್ಯಾಂಕ್‍ಗಳ ಮಹಾ ಮಂಡಲದ ಸಭೆ ನಡೆಯಿತು. ದೇಶ ಮತ್ತು ರಾಜ್ಯದ ಆರ್ಥಿಕತೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹು ದೊಡ್ಡದಿದೆ. ಸಹಕಾರ ಕ್ಷೇತ್ರಕ್ಕೆ ಧಕ್ಕೆಯಾದರೆ ಅದು ದೇಶದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಯಿತು ಎಂದೂ ತಿಳಿದುಬಂದಿದೆ.

‘ಹಬ್ಬದ ದಿನಗಳ ಸಂದರ್ಭದಲ್ಲಿ ಗ್ರಾಹಕರಿಗೆ ನೆಮ್ಮದಿ, ಭರವಸೆ ಬೇಕಿದೆ. ಶೀಘ್ರ ಪರಿಶೀಲಿಸಿ ಮೊದಲಿನಂತೆ ಬ್ಯಾಂಕ್ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ನಾವು ಮಾಡಿದ ಮನವಿಗೆ ಆರ್‌ಬಿಐ ಸ್ಪಂದಿಸಿದೆ’ ಎಂದು ಎಚ್.ಸಿ.ಕೃಷ್ಣ ತಿಳಿಸಿದರು.

ಸಾಲ ವಸೂಲಾತಿಗೆ ಸಮಸ್ಯೆ ಆಡಳಿತ ಮಂಡಳಿಗೆ ಆತಂಕ

ಗ್ರಾಹಕರು ತಮ್ಮ ಖಾತೆಯಿಂದ ಹಣ ವಾಪಸು ಪಡೆಯುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿರುವುದರಿಂದ ಸಾಲ ವಸೂಲಾತಿಗೆ ಸಮಸ್ಯೆಯಾಗಿದೆ.

ಠೇವಣಿದಾರರು ಮತ್ತು ಸದಸ್ಯರು ತಮ್ಮ ಖಾತೆಯಿಂದ ಹಣ ವಾಪಸು ಪಡೆದುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಮೂಡಿದೆ. ಸಾಲಪಡೆದವರು ಸಾಲ ಮರುಪಾವತಿಸುವುದಿರಲಿ, ಬಡ್ಡಿ ಕಟ್ಟಲು ಮುಂದೆ ಬರುವುದಿಲ್ಲ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಭೀತಿ ಗ್ರಾಹಕರು ಮತ್ತು ಆಡಳಿತ ಮಂಡಳಿಯನ್ನು ಕಾಡುತ್ತಿದೆ.

‘ನಾನು ಓಡಿ ಹೋಗುವುದಿಲ್ಲ’

‘ನಾನು ಎಲ್ಲೂ ಓಡಿ ಹೋಗುವುದಿಲ್ಲ. ವಿದೇಶಕ್ಕೆ ಪಲಾಯನ ಮಾಡುತ್ತೇನೆ ಎನ್ನುವ ಪ್ರಚಾರವನ್ನು ನಂಬಬೇಡಿ. ಇಲ್ಲೇ ಇದ್ದು ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ’ ಎಂದುಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

‘ಠೇವಣಿದಾರರ ಹಣ ಸುರಕ್ಷಿತವಾಗಿದೆ. ₹ 2,200 ಕೋಟಿ ವಹಿವಾಟು ನಡೆಸುವ‌ ಬ್ಯಾಂಕ್, ಪ್ರತಿಯೊಬ್ಬ ಗ್ರಾಹಕರ ಹಣಕ್ಕೂ ಜವಾಬ್ದಾರಿ ಆಗಿದೆ. ಸದ್ಯಕ್ಕೆ ಸಮಸ್ಯೆ ಎದುರಾಗಿದೆ. ಬಗೆಹರಿಯುವ ವಿಶ್ವಾಸವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT