ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾಂತ್ಯದಲ್ಲಿ ಪಠ್ಯಕ್ರಮ ಚೌಕಟ್ಟು ಬಿಡುಗಡೆ: ಬಿ.ಸಿ. ನಾಗೇಶ್‌

Last Updated 15 ನವೆಂಬರ್ 2022, 20:52 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಪೂರಕವಾಗಿ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು (ಎಸ್‌ಸಿಎಫ್‌) ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅದೇ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮ ಚೌಕಟ್ಟು ರೂಪಿಸಲು ತಜ್ಞರ ಸಮಿತಿ ನೇಮಿಸಲಾಗುವುದು. ಸಮಿತಿಯ ವರದಿ ಆಧರಿಸಿ ಎಸ್‌ಸಿಎಫ್‌ ಅಂತಿಮಗೊಳಿಸಿ, ಬಿಡುಗಡೆ ಮಾಡುತ್ತೇವೆ’ ಎಂದರು.

ಎನ್‌ಇಪಿ ಅನುಷ್ಠಾನಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಐಎಎಸ್‌ ಅಧಿಕಾರಿ ಎಂ.ಟಿ. ರೇಜು ಅವರನ್ನು ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಡಿಸೆಂಬರ್‌ 25ರೊಳಗೆ ನೂತನ ಪಠ್ಯಕ್ರಮ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಮೂಲಸೌಕರ್ಯಕ್ಕೆ ಒತ್ತು: ಶಿಕ್ಷಣ ಕ್ಷೇತ್ರದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಮೂರು ವರ್ಷಗಳಲ್ಲಿ 8,000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ 8,000 ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ನಾಗೇಶ್‌ ತಿಳಿಸಿದರು.

ಸರ್ಕಾರಿ ಶಾಲೆಗಳಿಗೆ ಸೇರಿದ ಜಮೀನುಗಳ ದಾಖಲೆಗಳಲ್ಲಿನ ದೋಷಗಳು ಹಾಗೂ ಶಾಲಾ ಆಸ್ತಿಗಳ ಒತ್ತುವರಿ ತೆರವಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಅಂತಹ 18,000 ಪ್ರಕರಣಗಳಿದ್ದವು. ಈವರೆಗೆ 3,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ವಸತಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಈ ಕಾರಣಕ್ಕಾಗಿ ಅಂತಹ ವಸತಿ ಶಾಲೆಗಳಲ್ಲಿನ ಶಿಕ್ಷಕರ ನೇಮಕಾತಿ, ಪಠ್ಯಕ್ರಮ, ಬೋಧನಾ ಕ್ರಮ ಸೇರಿದಂತೆ ಶೈಕ್ಷಣಿಕ ವಿಚಾರಗಳ ನಿರ್ವಹಣೆಯನ್ನು ಶಿಕ್ಷಣ ಇಲಾಖೆಗೆ ವಹಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ ಎಂದರು.

ನಿರ್ಣಯಕ್ಕೆ ಬಂದಿಲ್ಲ: ಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಯು ಈವರೆಗೆ ಯಾವುದೇ ನಿರ್ಣಯವನ್ನೂ ಕೈಗೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿಸೆಂಬರ್‌ ಒಳಗೆ ಶಾಲಾ ಪ್ರವಾಸಕ್ಕೆ ಸಮ್ಮತಿ
ಕೋವಿಡ್‌ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ಶಾಲಾ ಪ್ರವಾಸಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಸಿರು ನಿಶಾನೆ ತೋರಿದ್ದು,ಡಿಸೆಂಬರ್ ಒಳಗೆ ಪೂರ್ಣಗೊಳಿಸುವಂತೆ ಸುತ್ತೋಲೆ ಹೊರಡಿಸಿದೆ.

ಪ್ರತಿ ವರ್ಷ ಜೂನ್‌ನಿಂದ ಡಿಸೆಂಬರ್ ಒಳಗೆ ಪ್ರವಾಸ ‍ಪೂರ್ಣಗೊಳಿಸಬೇಕು. ಡಿಸೆಂಬರ್ ನಂತರ ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಪೋಷಕರು ಒಪ್ಪಿಗೆ ನೀಡಿದ ವಿದ್ಯಾರ್ಥಿಗಳನ್ನಷ್ಟೆ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳಬೇಕು. ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಶಾಲೆಯ ಮಾನ್ಯತೆ ನವೀಕರಣ ಮಾಡಿಕೊಳ್ಳುವುದು ಕಡ್ಡಾಯ. ಪ್ರವಾಸದ ದಿನಗಳನ್ನು ರಜೆಯ ಅವಧಿ ಎಂದು ಪರಿಗಣಿಸಬೇಕು. ಬಳಸಿಕೊಂಡ ದಿನಗಳನ್ನು ಶನಿವಾರ ಮತ್ತು ಭಾನುವಾರ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಪಠ್ಯ ಚಟುವಟಿಕೆ ಪೂರ್ಣಗೊಳಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಪ್ರವಾಸದ ಸಮಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಶಾಲಾ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು. ಪ್ರವಾಸೋದ್ಯಮ ಇಲಾಖೆ ಮಾನ್ಯತೆ ಪಡೆದ ಅಥವಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಪ್ರಯಾಣ ಮಾಡಬೇಕು. ಖಾಸಗಿ, ಮಿನಿ ವಾಹನಗಳನ್ನು ಬಳಸುವಂತಿಲ್ಲ. ಮಕ್ಕಳ ಆರೋಗ್ಯ ಸುರಕ್ಷತೆ, ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿನಿಯರ ಕ್ಷೇಮಕ್ಕೆ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ವಿವರಿಸಲಾಗಿದೆ.

ಶಾಲಾ ಪ್ರವೇಶಕ್ಕೆ 6 ವರ್ಷ: 2025–26ನೇ ಸಾಲಿನಿಂದ ಜಾರಿ
ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ 6 ವರ್ಷಗಳು ಪೂರ್ಣಗೊಂಡಿರಬೇಕುಎಂಬ ನಿಯಮವನ್ನು 2025–26ನೇ ಸಾಲಿನಿಂದ ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣಕ್ಕೆ ಮಗು ಪ್ರವೇಶ ಪಡೆಯಲು 6 ವರ್ಷಗಳು ಪೂರ್ಣಗೊಂಡಿರುವುದು ಕಡ್ಡಾಯ. ಶಿಕ್ಷಣ ತಜ್ಞರ ಸಲಹೆಯೂ ಅದೇ ಆಗಿದೆ. 23 ರಾಜ್ಯಗಳು ಈಗಾಗಲೇ ನಿಯಮ ಅಳವಡಿಸಿಕೊಂಡಿವೆ. ರಾಜ್ಯದಲ್ಲೂ ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಈಗ ಪುನರ್‌ ಆದೇಶ ಹೊರಡಿಸಿದ್ದು, 2025–26ನೇ ಸಾಲಿನಿಂದ ಅನ್ವಯಿಸಲು ಸೂಚಿಸಿದೆ.

2023–24ನೇ ಶೈಕ್ಷಣಿಕ ಸಾಲಿನಿಂದ 2024–25ರವರೆಗೆ ಎರಡು ವರ್ಷಗಳು ವಯೋಮಿತಿ ಕಡ್ಡಾಯಕ್ಕೆ ವಿನಾಯಿತಿ ನೀಡಲಾಗಿದೆ. ಪೋಷಕರು ತಮ್ಮ ಇಚ್ಛೆಯ ಮೇಲೆ ಮಕ್ಕಳನ್ನು ಶಾಲೆಗೆ ಸೇರಿಸಬಹುದು. 2025 ಜೂನ್‌ 1ನೇ ತಾರೀಕಿನ ನಂತರ ಶಾಲೆಗೆ ದಾಖಲಾಗುವ ಮಗುವಿಗೆ 6 ವರ್ಷಗಳು ಕಡ್ಡಾಯ. ಉಳಿದಂತೆ ಪ್ರಸಕ್ತ ವರ್ಷದ ಜುಲೈನಲ್ಲಿ ಹೊರಡಿಸಿದ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT